ಶಿವಸೇನೆ ಪಕ್ಷದ ಲಾಂಛನ, ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಫೇಸ್ ಬುಕ್
ಸುದ್ದಿಗಳು

ಮಹಾರಾಷ್ಟ್ರ ರಾಜಕೀಯ: ಸುನಿಲ್‌ ಪ್ರಭು ವಿಪ್‌ ನೈಜವಲ್ಲ ಎಂದು ಉದ್ಧವ್ ಬಣದ ವಿರುದ್ಧ ಶಿಂಧೆ ಬಣ ಆರೋಪ

ಶಿವಸೇನೆಯ ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಮಹಾರಾಷ್ಟ್ರ ಸ್ಪೀಕರ್ ಮುಂದೆ ಸಲ್ಲಿಸಿದ ಅರ್ಜಿಗಳ ವಿಚಾರಣೆಯ ವೇಳೆ ಶಿವಸೇನೆಯ ಉದ್ಧವ್ ಬಣದ ಸದಸ್ಯ ಸುನಿಲ್ ಪ್ರಭು ಅವರನ್ನು ಇತ್ತೀಚೆಗೆ ಪಾಟೀಸವಾಲಿಗೆ ಒಳಪಡಿಸಲಾಗಿತ್ತು.

Bar & Bench

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ನಾಯಕ ಸುನಿಲ್ ಪ್ರಭು ಅವರು ಸುಪ್ರೀಂ ಕೋರ್ಟ್ ಮುಂದೆ ಮತ್ತು ಮಹಾರಾಷ್ಟ್ರ ಸ್ಪೀಕರ್ ಮುಂದೆ ಅನರ್ಹತೆ ವಿಚಾರಣೆಯ ಸಮಯದಲ್ಲಿ ಹಾಜರುಪಡಿಸಿದ ವಿಪ್ ನೈಜವಲ್ಲ ಎಂದು ಶಿವಸೇನೆಯ ಏಕನಾಥ್ ಶಿಂಧೆ ನೇತೃತ್ವದ ಬಣ ಆರೋಪಿಸಿದೆ.

ನವೆಂಬರ್ 22 (ಬುಧವಾರ) ಮತ್ತು ನವೆಂಬರ್ 23 (ಗುರುವಾರ) ರಂದು ಮಹಾರಾಷ್ಟ್ರ ಸ್ಪೀಕರ್ ಮುಂದೆ ನಡೆದ ಪ್ರಭು ಅವರ ಪಾಟೀಸವಾಲಿನ ಸಮಯದಲ್ಲಿ ಈ ಆರೋಪ ಮಾಡಲಾಗಿದೆ.

ಶಿವಸೇನೆಯ ಬಂಡಾಯ ಶಾಸಕರ ಅನರ್ಹತೆ ಪ್ರಕ್ರಿಯೆಯನ್ನು ಸ್ಪೀಕರ್ ವಿಚಾರಣೆ ನಡೆಸುತ್ತಿದ್ದಾರೆ. ಸ್ಪೀಕರ್ ಕಲಾಪವನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಪ್ರಭು ಅವರು ಸುಪ್ರೀಂ ಕೋರ್ಟ್ ಮುಂದೆ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಡಿಸೆಂಬರ್ 31 ರೊಳಗೆ ಪ್ರಕರಣದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಸ್ಪೀಕರ್‌ಗೆ ಆದೇಶಿಸಿತ್ತು.

ಶಿವಸೇನೆಯ ಸಭೆಯನ್ನು ಕರೆಯಲು ಮತ್ತು ವಿಧಾನಸಭೆಯಲ್ಲಿ ಪಕ್ಷದ ನಾಯಕ ಸ್ಥಾನದಿಂದ ಏಕನಾಥ್ ಶಿಂಧೆ ಅವರನ್ನು ತೆಗೆದುಹಾಕುವ ನಿರ್ಣಯವನ್ನು ಅಂಗೀಕರಿಸಲು ವಿವಾದದ ಕೇಂದ್ರಬಿಂದುವಾಗಿರುವ ವಿಪ್‌ ಹೊರಡಿಸಲಾಗಿತ್ತು. ಗುಜರಾತ್‌ಗೆ ಪ್ರಯಾಣಿಸುತ್ತಿದ್ದ ಶಿವಸೇನೆಯ ಕೆಲವು ಸದಸ್ಯರು ಕಾಣೆಯಾದ ಸ್ವಲ್ಪ ಸಮಯದ ನಂತರ ಈ ವಿಪ್ ಹೊರಡಿಸಲಾಗಿತ್ತು. ನಾಪತ್ತೆಯಾಗಿದ್ದ ಸದಸ್ಯರು ನಂತರ ಶಿವಸೇನೆಯ ಏಕನಾಥ್ ಶಿಂಧೆ ಬಣದೊಂದಿಗೆ ಗುರುತಿಸಿಕೊಂಡಿದ್ದರು.

ಶಿಂಧೆ ಬಣವನ್ನು ಪ್ರತಿನಿಧಿಸುವ ಹಿರಿಯ ವಕೀಲ ಮಹೇಶ್‌ ಜೇಠ್ಮಲಾನಿ ಅವರು ʼಸುನೀಲ್‌ ಪ್ರಭು ಅವರು ನೈಜ ವಿಪ್‌ ಅನ್ನು ಮಂಡಿಸಿಲ್ಲ. ವಿಪ್‌ಗೆ ಸಹಿ ಹಾಕಿದ್ದಾರೆನ್ನಲಾದ ಮೂರು ಮಂದಿ ನಿಜವಾಗಿಯೂ ಹಾಗೆ ಮಾಡಿಲ್ಲ. ನಿರ್ಣಯಕ್ಕೆ ಸಂಬಂಧಿಸಿದ ಸಹಿಗಳು ನಕಲಿ ಎಂದು ದೂರಿದರು. ವಿಪ್ ದಾಖಲೆಯ "ನಿಖರವಾದ ಪ್ರತಿ" ಯಲ್ಲಿ ಕೈಬರಹದ ದಿನಾಂಕವಿಪ್ ದಾಖಲೆಯ "ನಿಖರವಾದ ಪ್ರತಿ" ಯಲ್ಲಿ ಕೈಬರಹದ ದಿನಾಂಕ ಇಲ್ಲದಿರುವುದನ್ನು ಅವರು ಬೆರಳು ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಭು, ಉದ್ಧವ್‌ ಠಾಕ್ರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಉದ್ಧವ್‌ ಅವರ ಕಣ್ಣೆದುರೇ ಸಹಿ ಹಾಕಲಾಗಿತ್ತು ಎಂದು ಸಮರ್ಥಿಸಿಕೊಂಡರು.