Sharad Pawar, Ajit Pawar and Nationalist Congress Party facebook
ಸುದ್ದಿಗಳು

ಗಡಿಯಾರ ಚಿಹ್ನೆ: ಅಜಿತ್ ಪವಾರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಶರದ್ ಪವಾರ್

ಶರದ್ ಪವಾರ್ ಅವರ ಗಡಿಯಾರ ಚಿಹ್ನೆ ಬಳಸಿಕೊಂಡು ಅಜಿತ್ ಪವಾರ್ ಮತದಾರರ ಮನಸ್ಸಿನಲ್ಲಿ 'ದೊಡ್ಡ ಪ್ರಮಾಣದ ಗೊಂದಲ' ಮೂಡಿಸಿದ್ದಾರೆ ಎಂದು ಶರದ್ ಪವಾರ್ ಬಣ ಹೇಳಿದೆ.

Bar & Bench

ಮುಂಬರುವ ಮಹಾರಾಷ್ಟ್ರ ಚುನಾವಣೆ ವೇಳೆ ಎನ್‌ಸಿಪಿಯ ಅಜಿತ್ ಪವಾರ್ ಬಣ ಗಡಿಯಾರದ ಚಿಹ್ನೆ  ಬಳಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಎನ್‌ಸಿಪಿ ಶರದ್‌ ಪವಾರ್‌‌ ಬಣ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ [ಶರದ್ ಪವಾರ್ ಮತ್ತು ಅಜಿತ್ ಅನಂತರಾವ್ ಪವಾರ್ ಇನ್ನಿತರರ ನಡುವಣ ಪ್ರಕರಣ].

ಶರದ್ ಪವಾರ್ ಅವರ ಗಡಿಯಾರ ಚಿಹ್ನೆ ಬಳಸಿಕೊಂಡು ಅಜಿತ್ ಪವಾರ್ ಮತದಾರರ ಮನಸ್ಸಿನಲ್ಲಿ 'ದೊಡ್ಡ ಪ್ರಮಾಣದ ಗೊಂದಲ' ಮೂಡಿಸಿದ್ದಾರೆ ಎಂದು ಶರದ್ ಪವಾರ್ ಬಣ ಹೇಳಿದೆ.

ಗಡಿಯಾರ ಚಿಹ್ನೆ ಮತ್ತು ಶರದ್‌ ಅವರ ನಡುವೆ ದೀರ್ಘಕಾಲೀನ ನಂಟು ಇದ್ದು ಅದನ್ನು ತಾವು ಬಳಸಿಕೊಳ್ಳುವ ಮೂಲಕ ಅಜಿತ್‌ ಪವಾರ್‌ ಜನರ ಮನಸ್ಸಿನಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಹೀಗಾಗಿ ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಅಜಿತ್ ಪವಾರ್ ಬಣಕ್ಕೆ ಹೊಸ ಚಿಹ್ನೆ ನೀಡಬೇಕು ಎಂದು ಪ್ರಾರ್ಥಿಸಲಾಗಿದೆ.

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿರುವ ಪೀಠ ಅಕ್ಟೋಬರ್ 15ರಂದು ಅರ್ಜಿಯ ವಿಚಾರಣೆ ನಡೆಸಲಿದೆ. ಪ್ರಸ್ತುತ ಮಹಾರಾಷ್ಟ್ರ ವಿಧಾನಸಭೆಯ ಅವಧಿ ನವೆಂಬರ್ 26 ರಂದು ಮುಕ್ತಾಯಗೊಳ್ಳಲಿದೆ.

ಕೆಲವು ಷರತ್ತುಗಳೊಂದಿಗೆ 2024ರ ಸಂಸತ್ ಚುನಾವಣೆ ಮತ್ತು ಮಹಾರಾಷ್ಟ್ರ ರಾಜ್ಯ ಚುನಾವಣೆಗಳಿಗೆ ಗಡಿಯಾರ ಚಿಹ್ನೆಯನ್ನು ಬಳಸಲು ಅಜಿತ್ ಪವಾರ್ ಬಣಕ್ಕೆ ಸುಪ್ರೀಂ ಕೋರ್ಟ್ ಈ ವರ್ಷದ ಮಾರ್ಚ್‌ನಲ್ಲಿ ಅನುಮತಿ ನೀಡಿತ್ತು.

ಪಕ್ಷ ಎರಡು ಬಣಗಳಾಗಿ ಹೋಳಾದ ಬಳಿಕ ಚುನಾವಣಾ ಆಯೋಗ  ಅಜಿತ್ ಪವಾರ್ ಬಣವೇನಿಜವಾದ ಎನ್‌ಸಿಪಿ ಎಂದು ಗುರುತಿಸಿದ ನಂತರ ಚಿಹ್ನೆ ವ್ಯಾಜ್ಯ ಮೊದಲುಗೊಂಡಿತ್ತು.

ಯಾವ ಬಣವನ್ನು ನಿಜವಾದ ಎನ್‌ಸಿಪಿ ಎಂದು ಗುರುತಿಸಬೇಕು ಎಂಬುದನ್ನು ನ್ಯಾಯಾಲಯ ನಿರ್ಧರಿಸುವವರೆಗೆ ಸದ್ಯಕ್ಕೆ ಅಜಿತ್‌ ಪವಾರ್ ಬಣಕ್ಕೆ ಚಿಹ್ನೆ ನೀಡಲು ಅವಕಾಶ ನೀಡಿದ್ದ ಭಾರತೀಯ ಚುನಾವಣಾ ಆಯೋಗದ ನಿರ್ಧಾರವನ್ನು ಶರದ್ ಪವಾರ್ ಬಣ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಎನ್‌ಸಿಪಿಯ ಗಡಿಯಾರ ಚಿಹ್ನೆ ಇರುವ ಯಾವುದೇ ಚುನಾವಣಾ ಜಾಹೀರಾತುಗಳಲ್ಲಿ ಚಿಹ್ನೆ ಹಂಚಿಕೆ ವಿವಾದ ಇನ್ನೂ ನ್ಯಾಯಾಲಯದ ಅಂಗಳದಲ್ಲಿದೆ ಎಂಬುದನ್ನು ಸಾರುವಂತಹ ಹಕ್ಕು ನಿರಾಕರಣೆಯನ್ನು ಪ್ರದರ್ಶಿಸುವಂತೆ ಸುಪ್ರೀಂ ಕೋರ್ಟ್‌ ಅಜಿತ್‌ ಬಣಕ್ಕೆ ಆದೇಶಿಸಿತ್ತು. ಇದೇ ವೇಳೆ ತುತ್ತೂರಿ ಊದುವ ವ್ಯಕ್ತಿಯ ಚಿಹ್ನೆಯನ್ನು ಶರದ್‌ ಪವಾರ್‌ ಬಣಕ್ಕೆ ನೀಡುವಂತೆ ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು.  

ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ಗೊಂದಲ ತಪ್ಪಿಸಲು ಅಜಿತ್ ಪವಾರ್ ಬಣಕ್ಕೆ ಹೊಸ ಚಿಹ್ನೆ ನೀಡಬೇಕೆಂದು ಕೋರಿ ಶರದ್‌ ಅವರು ಪ್ರಸ್ತುತ ಅರ್ಜಿ ಸಲ್ಲಿಸಿದ್ದಾರೆ.