ಸುದ್ದಿಗಳು

ಬಿಜೆಪಿ ನಾಯಕ ಬಿ ಎಲ್‌ ಸಂತೋಷ್‌ ಅವಹೇಳನ ಪ್ರಕರಣ: ಮಹೇಶ್‌ ತಿಮರೋಡಿ 14 ದಿನ ನ್ಯಾಯಾಂಗ ಬಂಧನಕ್ಕೆ

ಬಂಧಿತ ಮಹೇಶ್‌ ತಿಮರೋಡಿ ಅವರನ್ನು ಉಡುಪಿಯ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್‌ಸಿ ಹಾಗೂ ಬ್ರಹ್ಮಾವರದ ಸಂಚಾರಿ ಪೀಠದ ನ್ಯಾಯಾಧೀಶರಾದ ಎನ್‌ ಎ ನಾಗೇಶ್‌ ಅವರ ಮುಂದೆ ಹಾಜರುಪಡಿಸಲಾಗಿತ್ತು.

Bar & Bench

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್‌ ಸಂತೋಷ್‌ ಅವರನ್ನು ಅವಹೇಳನ ಮಾಡಿದ ಪ್ರಕರಣದಲ್ಲಿ ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷ ಮಹೇಶ್‌ ತಿಮರೋಡಿ ಅವರನ್ನು ಉಡುಪಿ ಹೆಚ್ಚುವರಿ ಸಿವಿಲ್‌ ನ್ಯಾಯಾಲಯವು ಗುರುವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಬಂಧಿತ ಮಹೇಶ್‌ ತಿಮರೋಡಿ ಅವರನ್ನು ಉಡುಪಿಯ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್‌ಸಿ ಹಾಗೂ ಬ್ರಹ್ಮಾವರದ ಸಂಚಾರಿ ಪೀಠದ ನ್ಯಾಯಾಧೀಶರಾದ ಎನ್‌ ಎ ನಾಗೇಶ್‌ ಅವರ ಮುಂದೆ ಹಾಜರುಪಡಿಸಲಾಯಿತು.

ಘಟನೆಯ ಬಗ್ಗೆ ಮಾಹಿತಿ ಪಡೆದ ನ್ಯಾಯಾಧೀಶರು ಆರೋಪಿ ಮಹೇಶ್‌ ತಿಮರೋಡಿ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದರು.

ಬಿ ಎಲ್‌ ಸಂತೋಷ್‌ ಅವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತೇಜೋವಧೆ ಮಾಡಿದ್ದಾರೆ. ಹಿಂದೂ ಧರ್ಮದ ನಾಯಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಹೇಳನ ಮಾಡಿ, ಬೇರೆ ಬೇರೆ ಧರ್ಮಗಳ ಹಾಗೂ ಸಮುದಾಯದ ನಡುವೆ ವೈಮನಸ್ಸು ಹಾಗೂ ದ್ವೇಷ ಭಾವನೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಬ್ರಹ್ಮಾವರ ಪೊಲೀಸ್‌ ಠಾಣೆಗೆ ಬಿಜೆಪಿಯ ಉಡುಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ರಾಜೀವ್‌ ಕುಲಾಲ್‌ ಈಚೆಗೆ ದೂರು ನೀಡಿದ್ದರು.

ಇದರ ಅನ್ವಯ ಬಿಎನ್‌ಎಸ್‌ಎಸ್‌ ಸೆಕ್ಷನ್‌ 196(1), 352 ಮತ್ತು 353(2) ಅಡಿ ಆಗಸ್ಟ್‌ 16ರಂದು ಬ್ರಹ್ಮಾವರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ತನಿಖೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಿದ್ದರೂ ಮಹೇಶ್‌ ತಿಮರೋಡಿ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದರು.