ಮಹುವಾ ಮೊಯಿತ್ರಾ ಮತ್ತು ದೆಹಲಿ ಹೈಕೋರ್ಟ್
ಮಹುವಾ ಮೊಯಿತ್ರಾ ಮತ್ತು ದೆಹಲಿ ಹೈಕೋರ್ಟ್ 
ಸುದ್ದಿಗಳು

ಸಂಸದರ ಬಂಗಲೆಯಿಂದ ತೆರವು: ಸರ್ಕಾರದ ಆದೇಶ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

Bar & Bench

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ನಾಯಕಿ ಮಹುವಾ ಮೊಯಿತ್ರಾ ಅವರನ್ನು ಇತ್ತೀಚೆಗೆ ಲೋಕಸಭೆಯಿಂದ ಉಚ್ಚಾಟಿಸಿದ ಬೆನ್ನಿಗೇ ತನಗೆ ಮಂಜೂರಾಗಿದ್ದ ಬಂಗಲೆಯಿಂದ ಹೊರಹಾಕುವ ಕೇಂದ್ರ ಸರ್ಕಾರದ ಆದೇಶ ಪ್ರಶ್ನಿಸಿ ಸೋಮವಾರ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ತಮ್ಮನ್ನು ಲೋಕಸಭೆಯಿಂದ ಉಚ್ಚಾಟಿಸಿರುವುದನ್ನು ಪ್ರಶ್ನಿಸಿರುವ ಅರ್ಜಿ ಸುಪ್ರೀಂ ಕೋರ್ಟ್‌ ಅಂಗಳದಲ್ಲಿರುವುದರಿಂದ ತನ್ನ ವಿರುದ್ಧ ನಡೆಸಲಾಗುತ್ತಿರುವ ತೆರವು ಪ್ರಕ್ರಿಯೆ ಅಕಾಲಿಕವಾದುದು ಎಂದು ಮೊಯಿತ್ರಾ ಪ್ರತಿಪಾದಿಸಿದ್ದಾರೆ. ಈ ಸಂಬಂಧ ಆಸ್ತಿ ನಿರ್ದೇಶನಾಲಯ ಹೊರಡಿಸಿದ್ದ ಆದೇಶದ ಸಿಂಧುತ್ವವನ್ನು ಅವರು ಪ್ರಶ್ನಿಸಿದ್ದಾರೆ.

ಮುಂಬರುವ ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳು ಪ್ರಕಟವಾಗುವವರೆಗೆ ತನ್ನ ಪ್ರಸ್ತುತ ನಿವಾಸದಲ್ಲಿ ವಾಸಿಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅವರು ಕೋರಿದ್ದಾರೆ.

ಪರ್ಯಾಯವಾಗಿ, 2024 ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳು ಪ್ರಕಟವಾಗುವವರೆಗೆ ತನ್ನ ಪ್ರಸ್ತುತ ನಿವಾಸದಲ್ಲಿ ವಾಸಿಸಲು ಅವಕಾಶ ನೀಡುವ ನಿರ್ದೇಶನಗಳನ್ನು ನೀಡುವಂತೆ ಮೊಯಿತ್ರಾ ನ್ಯಾಯಾಲಯವನ್ನು ವಿನಂತಿಸಿದರು.

"ಅರ್ಜಿದಾರೆಗೆ ಹಾಗೆ ಅನುಮತಿಸಿದರೆ, ವಿಸ್ತೃತ ಅವಧಿಗೆ ಅನ್ವಯವಾಗುವ ಯಾವುದೇ ಶುಲ್ಕಗಳನ್ನು ಪಾವತಿಸಲು ಆಕೆಗೆ ಅಡ್ಡಿಯಿಲ್ಲ" ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ್ ಅವರು ಮಂಗಳವಾರ ಪ್ರಕರಣದ ವಿಚಾರಣೆ ನಡೆಸಲಿದ್ದಾರೆ.

ಮೊಯಿತ್ರಾ ಅವರನ್ನು ಸಂಸತ್‌ ಸ್ಥಾನದಿಂದ ಅನರ್ಹಗೊಳಿಸುವಂತೆ ನೈತಿಕ ಸಮಿತಿಯ ಶಿಫಾರಸು ಮಾಡಿದ್ದ ಹಿನ್ನೆಲೆಯಲ್ಲಿ ಲೋಕಸಭೆ ಡಿಸೆಂಬರ್ 8ರಂದು ಮೊಯಿತ್ರಾ ಅವರನ್ನು ಸಂಸತ್ತಿನಿಂದ ಹೊರಹಾಕುವ ನಿರ್ಣಯ ಅಂಗೀಕರಿಸಿತ್ತು.

ಸದನದಲ್ಲಿ ಪ್ರಶ್ನೆ ಕೇಳಲು ಮೊಯಿತ್ರಾ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ನಿಶಿಕಾಂತ್ ದುಬೆ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ನೈತಿಕ ಸಮಿತಿಯ ಶಿಫಾರಸು ಮತ್ತು ವರದಿ ಬಂದಿತ್ತು.

ಉದ್ಯಮಿ ದರ್ಶನ್ ಹಿರಾನಂದಾನಿ ಅವರ ಆದೇಶದ ಮೇರೆಗೆ ಅವರ ಪ್ರತಿಸ್ಪರ್ಧಿಯಾದ ಅದಾನಿ ಸಮೂಹದ ಬಗ್ಗೆ ಮೊಯಿತ್ರಾ ಸಂಸತ್ತಿನಲ್ಲಿ ವಿವಿಧ ಪ್ರಶ್ನೆಗಳನ್ನು ಕೇಳಿದ್ದರು ಎಂದು ಆರೋಪಿಸಲಾಗಿತ್ತು. ಮೊಯಿತ್ರಾ ಅವರು ಹಿರಾನಂದಾನಿ ಜೊತೆಗೆ ತಮ್ಮ ಲೋಕಸಭಾ ಲಾಗ್-ಇನ್ ಮಾಹಿತಿ ಹಂಚಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು.

ಮೊಯಿತ್ರಾ ತಪ್ಪಿತಸ್ಥೆ ಎಂದು ಘೋಷಿಸಿದ್ದ ನೈತಿಕ ಸಮಿತಿ ಆಕೆಯ ಲೋಪಗಳಿಗೆ ಕಠಿಣ ಶಿಕ್ಷೆ ಅಗತ್ಯವಿದೆ ಎಂದು ಶಿಫಾರಸು ಮಾಡಿತ್ತು. ಇದನ್ನು ಆಧರಿಸಿ ಮೊಯಿತ್ರಾ ಅವರನ್ನು ಸಂಸತ್‌ನಿಂದ ಉಚ್ಚಾಟಿಸಲಾಯಿತು. ಪರಿಣಾಮ ಅವರು ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು.

ಚಳಿಗಾಲದ ರಜೆಯ ನಂತರ ಜನವರಿ 3, 2024ರಂದು ಸುಪ್ರೀಂ ಕೋರ್ಟ್ ಆ ಅರ್ಜಿ ಪರಿಗಣಿಸಲು ನಿರ್ಧರಿಸಿರುವುದರಿಂದ ತನ್ನನ್ನು ಬಂಗಲೆಯಿಂದ ತೆರವುಗೊಳಿಸುವ ಪ್ರಕ್ರಿಯೆಗಳು ಅಕಾಲಿಕವಾಗಿವೆ ಎಂದು ಮೊಯಿತ್ರಾ ಹೈಕೋರ್ಟ್‌ಗೆ ತಿಳಿಸಿದ್ದಾರೆ.