ಲಕ್ಷದ್ವೀಪಕ್ಕೆ ಸಂಬಂಧಿಸಿದ ಉದ್ದೇಶಿತ ನಿಬಂಧನೆಗಳ ಕರಡನ್ನು ಸ್ಥಳೀಯ ಭಾಷೆಯಲ್ಲಿ ಪ್ರಕಟಿಸಲು ಕಾನೂನಿನಡಿಯಲ್ಲಿ ಯಾವುದೇ ಅಗತ್ಯವಿಲ್ಲ ಎಂದು ಲಕ್ಷದ್ವೀಪ ಆಡಳಿತ ಕೇರಳ ಹೈಕೋರ್ಟ್‌ಗೆ ತಿಳಿಸಿದೆ.
ಲಕ್ಷದ್ವೀಪದ ಸಂಸದ ಪಿ ಪಿ ಮೊಹಮ್ಮದ್ ಫೈಜಲ್ ಸಲ್ಲಿಸಿರುವ ಮನವಿಗೆ ಪ್ರತಿಯಾಗಿ ಅಫಿಡವಿಟ್ ಸಲ್ಲಿಕೆಯಾಗಿದ್ದು, ಭಾರತ ಸಂವಿಧಾನದ 345ನೇ ವಿಧಿಯಲ್ಲಿ ಉಲ್ಲೇಖಿಸಿರುವಂತೆ ಕೇಂದ್ರಾಡಳಿತ ಪ್ರದೇಶದಲ್ಲಿ ಮಲೆಯಾಳಂ ಅನ್ನು ಅಧಿಕೃತ ಭಾಷೆಯನ್ನಾಗಿ ಅಳವಡಿಸಲಾಗಿಲ್ಲ ಎಂದು ಲಕ್ಷದ್ವೀಪ ಆಡಳಿತ ತಿಳಿಸಿದೆ.
ಮಿನಿಕೊಯ್ ದ್ವೀಪ ಹೊರತುಪಡಿಸಿ ಲಕ್ಷದ್ವೀಪದ ಬಹುತೇಕ ಜನರು 'ಜೆಸೆರಿʼ ಭಾಷೆಯನ್ನು ಪ್ರಮುಖವಾಗಿ ಬಳಸುತ್ತಿದ್ದು, ಅದಕ್ಕೆ ಯಾವುದೇ ಲಿಪಿ ಇಲ್ಲ. ಲಕ್ಷದ್ವೀಪದ ಎಲ್ಲಾ ಶಾಲೆಗಳಲ್ಲಿ ಇಂಗ್ಲಿಷ್ ಬೋಧಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರದ ವಕೀಲ ಎಸ್ ಮನು ಅವರ ಮೂಲಕ ಸಲ್ಲಿಸಲಾದ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಹೀಗಾಗಿ, ಅರ್ಜಿದಾರರು ವಾದಿಸಿರುವಂತೆ ಸ್ಥಳೀಯ ಭಾಷೆಯಲ್ಲಿ ಕರಡು ನಿಬಂಧನೆಯನ್ನು ಪ್ರಕಟಿಸುವ ಅಗತ್ಯವಿಲ್ಲ ಎಂದು ಲಕ್ಷದ್ವೀಪ ಒತ್ತಿ ಹೇಳಿದೆ.
“ಸಂವಿಧಾನದ 348 (1) (ಬಿ) (ii) ಅಡಿಯಲ್ಲಿ ಹೊರಡಿಸಲಾದ ಎಲ್ಲಾ ಆದೇಶಗಳು, ನಿಯಮಗಳು, ನಿಬಂಧನೆಗಳು ಮತ್ತು ಬೈಲಾಗಳ ಅಧಿಕೃತ ಪಠ್ಯ ಅಥವಾ ಸಂಸತ್ತು ಅಥವಾ ರಾಜ್ಯದ ಶಾಸನ ಸಭೆ ರೂಪಿಸಿದ ಕಾನೂನಿನ ಅಡಿಯ ಅಧಿಕೃತ ಪಠ್ಯ ಇಂಗ್ಲಿಷ್ ಭಾಷೆಯಲ್ಲಿರಬೇಕು” ಎಂದು ಸರ್ಕಾರ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದ್ದು, ಹೀಗಾಗಿ ಅರ್ಜಿದಾರರ ವಾದದಲ್ಲಿ ಹುರುಳಿಲ್ಲ ಎಂದು ಹೇಳಲಾಗಿದೆ.
ದ್ವೀಪ ಪ್ರದೇಶದಲ್ಲಿ ಇಂಟರ್‌ನೆಟ್ ವ್ಯವಸ್ಥೆಯ ಸಮಸ್ಯೆ ಇರುವುದನ್ನು ಒಪ್ಪಿಕೊಂಡಿದ್ದು, ಅದು ವಾಸ್ತವ ಎಂದು ಲಕ್ಷದ್ವೀಪ ಆಡಳಿತ ಹೇಳಿದೆ. ಅದಾಗ್ಯೂ, ಕರಡಿನ ಸಾರ್ವಜನಿಕ ನೋಟಿಸ್‌ಗೆ ಸಂಬಂಧಿಸಿದಂತೆ ಸ್ವೀಕರಿಸಲಾಗಿರುವ ಎಲ್ಲಾ ಪ್ರತಿಕ್ರಿಯೆಗಳ ವಿಚಾರದಲ್ಲಿ ಹೆಚ್ಚಿನ ಆಕ್ಷೇಪಣೆ ಮತ್ತು ಸಲಹೆಗಳು ಅಂಚೆಯಲ್ಲಿ ಬಂದಿದ್ದಕ್ಕಿಂತ ಎರಡು ಪಟ್ಟು ಇಮೇಲ್ ಮೂಲಕ ಬಂದಿವೆ ಎಂದು ಹೇಳಲಾಗಿದೆ.
ಇದಲ್ಲದೆ, ಲಕ್ಷದ್ವೀಪ ಆಡಳಿತದಲ್ಲಿನ ಖಾಲಿ ಹುದ್ದೆಗಳನ್ನು ಸೂಚಿಸುವ ಎಲ್ಲಾ ಉದ್ಯೋಗ ಪ್ರಕಟಣೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕ, ಪರೀಕ್ಷೆಯ ಫಲಿತಾಂಶ ಇತ್ಯಾದಿ ಇತರ ಪ್ರಮುಖ ಸಾರ್ವಜನಿಕ ಸೂಚನೆಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಲಕ್ಷದ್ವೀಪ ಆಡಳಿತದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಯಾವುದೇ ನಿಬಂಧನೆಯ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವ ಸಂಬಂಧ ಹೆಚ್ಚಿನ ಕಾಲಾವಕಾಶ ಕೋರಿ ಯಾರಾದರೂ ಮನವಿ ಸಲ್ಲಿಸಿರುವುದನ್ನು ಅರ್ಜಿದಾರರು ಉಲ್ಲೇಖಿಸಿಲ್ಲ. ಸಂವಿಧಾನದ 240ನೇ ವಿಧಿಯ ಅನ್ವಯ ನಿಬಂಧನೆ ಮಾಡುವಾಗ ವಿಧಾನಸಭೆಯಲ್ಲಿ ಚರ್ಚಿಸುವ ಅಗತ್ಯ ಕಾನೂನಿನಲ್ಲಿ ಇಲ್ಲ ಎಂದು ವಾದಿಸಲಾಗಿದೆ.
ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠವು ಇತ್ಯರ್ಥಪಡಿಸಿರುವ ವಿಚಾರವನ್ನು ಮುಂದಿಟ್ಟುಕೊಂಡು ಪುನರ್ ಆಂದೋಲನ ಆರಂಭಿಸಲು ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಕುರಿತು ಅರ್ಜಿದಾರರಿಗೆ ಮಾಹಿತಿ ಇದ್ದರು ಹಾಗೆ ಮಾಡಲಾಗಿದೆ ಎಂದು ಲಕ್ಷದ್ವೀಪ ಆಡಳಿತ ವಾದಿಸಿದೆ. ಕರಡು ನಿಬಂಧನೆಗೆ ತಡೆಯಾಜ್ಞೆ ನೀಡಬೇಕು ಮತ್ತು ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿಲು ಹೆಚ್ಚಿನ ಕಾಲಾವಕಾಶ ನೀಡಬೇಕು ಎಂಬ ಎರಡು ಮನವಿಗಳನ್ನು ಕೇರಳ ಹೈಕೋರ್ಟ್ ವಜಾ ಮಾಡಿತ್ತು.
ಹೀಗಾಗಿ, ಈಗ ಸಲ್ಲಿಸಿರುವ ಮನವಿಯು ಕಾನೂನು ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳುವುದಾಗಿದೆ. ಆದ್ದರಿಂದ, ದಂಡ ವಿಧಿಸಿ ಅರ್ಜಿ ವಜಾ ಮಾಡುವಂತೆ ಲಕ್ಷದ್ವೀಪ ಆಡಳಿತ ಮನವಿ ಮಾಡಿದೆ.