KSLSA and Karnataka HC 
ಸುದ್ದಿಗಳು

ಅಪೌಷ್ಟಿಕತೆ ನಿವಾರಣೆ: ನಿವೃತ್ತ ನ್ಯಾಯಮೂರ್ತಿಗಳ ಹೆಸರು ಶಿಫಾರಸ್ಸಿಗೆ ಕೆಎಸ್‌ಎಲ್‌ಎಸ್‌ಎಗೆ ಹೈಕೋರ್ಟ್‌ ನಿರ್ದೇಶನ

ಸಮಿತಿಯ ಅಧ್ಯಕ್ಷರಾಗಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ ಎನ್ ವೇಣುಗೋಪಾಲಗೌಡ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಬೇರೊಬ್ಬರನ್ನು ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ಪೀಠದ ಗಮನಸೆಳೆದ ವಕೀಲ ಕ್ಲಿಫ್ಟನ್‌ ರೋಜಾರಿಯೊ.

Bar & Bench

ರಾಜ್ಯದಲ್ಲಿನ ಅಪೌಷ್ಟಿಕ ಮಕ್ಕಳು, ಗರ್ಭಿಣಿಯರು, ಬಾಣಂತಿಯರು, ಹಾಲುಣಿಸುವ ತಾಯಂದಿರು, ಕಿಶೋರಾವಸ್ಥೆಯ ಹೆಣ್ಣುಮಕ್ಕಳನ್ನು ಗುರುತಿಸುವ, ಆರೋಗ್ಯ ತಪಾಸಣೆ ಮಾಡುವ ಮತ್ತು ಪೌಷ್ಟಿಕಾಂಶಗಳನ್ನು ಒದಗಿಸುವ ಕಾರ್ಯಕ್ರಮಗಳ ಮೇಲ್ವಿಚಾರಣೆ ನಡೆಸುವ ಸಮಿತಿಗೆ ಹೊಸದಾಗಿ ಅಧ್ಯಕ್ಷರನ್ನು ನೇಮಕ ಮಾಡಲು ಹೈಕೋರ್ಟ್‌ನ ಮೂವರು ನಿವೃತ್ತ ನ್ಯಾಯಮೂರ್ತಿಗಳ ಹೆಸರು ಶಿಫಾರಸ್ಸು ಮಾಡುವಂತೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.

ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ವಿಚಾರವಾಗಿ ಬೆಳಗಾವಿ ಜಿಲ್ಲೆ ಅಥಣಿಯ ‘ವಿಮೋಚನಾ ಸಂಘ’ ಎಂಬ ಸ್ವಯಂಸೇವಾ ಸಂಸ್ಥೆಯ ಅಧ್ಯಕ್ಷ ಬಿ.ಎಲ್. ಪಾಟೀಲ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠದ ನಡೆಸಿತು.

ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಪ್ರವೇಶಕಾರರಾಗಿರುವ ವಕೀಲ ಕ್ಲಿಫ್ಟನ್‌ ಡಿ. ರೊಜಾರಿಯೊ ಅವರು “ಸಮಿತಿಯ ಅಧ್ಯಕ್ಷರಾಗಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ ಎನ್ ವೇಣುಗೋಪಾಲಗೌಡ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಬೇರೊಬ್ಬರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು” ಎಂದು ಪೀಠದ ಗಮನಸೆಳೆದರು.

ಅದಕ್ಕೆ, ಹೈಕೋರ್ಟ್‌ನ ಮೂವರು ನಿವೃತ್ತ ನ್ಯಾಯಮೂರ್ತಿಗಳ ಹೆಸರನ್ನು ನೀಡುವಂತೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ ಪೀಠ, ಅದರ ನಂತರ ಹೊಸ ಅಧ್ಯಕ್ಷರನ್ನು ನೇಮಕ ಮಾಡಿ ಮುಂದಿನ ನಿರ್ದೇಶನಗಳನ್ನು ನೀಡಲಾಗುವುದು ಎಂದು ಹೇಳಿ ವಿಚಾರಣೆಯನ್ನು ನ.17ಕ್ಕೆ ಮುಂದೂಡಿತು. ಕೇಂದ್ರ ಸರ್ಕಾದ ಪರವಾಗಿ ವಕೀಲ ಉನ್ನಿಕೃಷ್ಣನ್‌ ಹಾಜರಿದ್ದರು.