[ಚಾರ್‌ಧಾಮ್ ರಸ್ತೆ ವಿಸ್ತರಣೆ] ನ್ಯಾಯಾಲಯ ಮಧ್ಯಪ್ರವೇಶದ ಬಗ್ಗೆ ಜಿಜ್ಞಾಸೆ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್‌

ವ್ಯಕ್ತಿಗಳು ಮತ್ತು ಸರಕು ಸಾಗಣೆಗಾಗಿ ಸೇನೆಗೆ ನಿರ್ದಿಷ್ಟ ಅಗಲದ ಫೀಡರ್ ರಸ್ತೆಗಳು ಅಗತ್ಯ ಇವೆ ಎಂದು ಕೇಂದ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ವಾದ ಮಂಡಿಸಿದರು.
Chardham Highway project
Chardham Highway project
Published on

ಚಾರ್‌ಧಾಮ್‌ ರಸ್ತೆಗಳ ವಿಸ್ತರಣೆಗೆ ಸಂಬಂಧಿಸಿದಂತೆ ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಭಾರತ ಮತ್ತು ಚೀನಾ ಗಡಿ ಘರ್ಷಣೆಯನ್ನು ಪರೋಕ್ಷವಾಗಿ ಉಲ್ಲೇಖಿಸಿದೆ (ಸಿಟಿಜನ್ಸ್ ಫಾರ್ ಗ್ರೀನ್ ಡೂನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ). ರಾಷ್ಟ್ರದ ರಕ್ಷಣೆ ಮತ್ತು ಭದ್ರತೆಯ ಮೇಲೆ ಪರಿಣಾಮ ಬೀರುವ ಪರಿಸರ ಕಾಳಜಿ ಆಧರಿಸಿದ ಪ್ರಕರಣಗಳಲ್ಲಿ ಸಾಂವಿಧಾನಿಕ ನ್ಯಾಯಾಲಯ ಎಷ್ಟರ ಮಟ್ಟಿಗೆ ಮಧ್ಯಪ್ರವೇಶಿಸಬಹುದು ಎಂಬ ಕುರಿತು ಅದು ಇದೇ ವೇಳೆ ಜಿಜ್ಞಾಸೆ ವ್ಯಕ್ತಪಡಿಸಿತು.

"ಇಷ್ಟು ದೊಡ್ಡಮಟ್ಟದಲ್ಲಿ ರಾಷ್ಟ್ರದ ಭದ್ರತೆ ಅಪಾಯದಲ್ಲಿದೆ ಎಂಬ ಅಂಶವನ್ನು ನಾವು ಅಲ್ಲಗಳೆಯುವಂತಿಲ್ಲ. ಇತ್ತೀಚಿನ ಘಟನೆಗಳ (ಚೀನಾದೊಂದಿಗಿನ ಸಂಘರ್ಷ) ಹಿನ್ನೆಲೆಯಲ್ಲಿ ರಕ್ಷಣಾ ಅಗತ್ಯಗಳ ವಿಚಾರವಾಗಿ ನಾವು ಮಧ್ಯಪ್ರವೇಶಿಸುತ್ತೇವೆ ಎಂದು ಅತ್ಯುನ್ನತ ಸಾಂವಿಧಾನಿಕ ನ್ಯಾಯಾಲಯ ಹೇಳಬಹುದೇ? ಪರಿಸರದ ವಿಚಾರ ರಾಷ್ಟ್ರ ರಕ್ಷಣೆಯ ಮೇಲೆ ವಿಜಯ ಸಾಧಿಸುತ್ತದೆಯೇ ಅಥವಾ ಪರಿಸರ ಅವನತಿಯಾಗದಂತೆ ರಕ್ಷಣಾ ಕಾಳಜಿ ಇರಬೇಕು ಎನ್ನಲು ಸಾಧ್ಯವೇ” ಎಂದು ನ್ಯಾ. ಚಂದ್ರಚೂಡ್‌ ಕೇಳಿದರು.

Also Read
ಟೂಲ್‌ಕಿಟ್‌ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿ ದೆಹಲಿ ನ್ಯಾಯಾಲಯದ ಮೊರೆ ಹೋದ ಪರಿಸರ ಕಾರ್ಯಕರ್ತ ಶುಭಂ ಕರ್ ಚೌಧರಿ

ರಸ್ತೆ ವಿಸ್ತರಣೆಗೆ ಸೇನೆ ಕಾರಣ ಎಂದು ಕೇಂದ್ರ ಸರ್ಕಾರ ಹೇಳಿರುವುದರಿಂದ ನ್ಯಾಯಾಲಯ ಸಂಕಷ್ಟಕ್ಕೆ ಸಿಲುಕಿದೆ ಎಂದರು. "ಇದರಲ್ಲಿ ನಮ್ಮ ಸಂಕಟವನ್ನು ನಾವು ನಿಮಗೆ ಹೇಳಲೇಬೇಕು. ಪ್ರವಾಸೋದ್ಯಮಕ್ಕಾಗಿ ಇದನ್ನು (ರಸ್ತೆ ವಿಸ್ತರಣೆ) ಮಾಡುತ್ತಿದ್ದಾರೆ ಎಂದು ಕೇಂದ್ರ ಹೇಳಿದರೆ, ನಾವು ಅರ್ಥಮಾಡಿಕೊಳ್ಳಬಹುದಾಗಿದ್ದು ಆಗ ಹೆಚ್ಚು ಕಠಿಣ ಷರತ್ತುಗಳನ್ನು ವಿಧಿಸಬಹುದು. ಆದರೆ ಗಡಿಗಳನ್ನು ರಕ್ಷಿಸಲು ಅದು ಅಗತ್ಯವಿದ್ದಾಗ, ಅದು ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯ ಈ ಸಂದಿಗ್ಧವನ್ನು ಎದುರಿಸಲೇಬೇಕಾಗುತ್ತದೆ” ಎಂದು ಅವರು ವಿವರಿಸಿದರು.

ಮರಗಳನ್ನು ಕಡಿದು ರಸ್ತೆ ಅಭಿವೃದ್ಧಿ ಮತ್ತು ವಿಸ್ತರಣೆಗಾಗಿ ಮೊದಲ ಹಂತದ ಕಾಡು ಮತ್ತು ವನ್ಯಜೀವಿಗಳನ್ನು ತೆರವು ಗೊಳಿಸುವುದನ್ನು ಪ್ರಶ್ನಿಸಿ ಸಿಟಿಜನ್ಸ್‌ ಫಾರ್‌ ಗ್ರೀನ್‌ ಡೂನ್‌ ಎಂಬ ಎನ್‌ಜಿಒ ಸಲ್ಲಿಸಿದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಚಾರ್‌ಧಾಮ್ ಹೆದ್ದಾರಿಯು 900 ಕಿ. ಮೀ ರಸ್ತೆ ಯೋಜನೆಯಾಗಿದ್ದು ಉತ್ತರಾಖಂಡದ ನಾಲ್ಕು ಹಿಂದೂ ಯಾತ್ರಾ ಕೇಂದ್ರಗಳಿಗೆ ಸರ್ವ ಋತುಗಳಲ್ಲಿ ಸಂಪರ್ಕ ಕಲ್ಪಿಸಲಿದೆ. ಚೀನಾ ಗಡಿಯಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಕ್ಷಿಪ್ರ ನಿಯೋಜನೆ ಮತ್ತು ಸಂಚಾರಕ್ಕೆ ಅನುವುದು ಮಾಡಿಕೊಡುವುದು ಯೋಜನೆಯ ಪ್ರಯೋಜನಗಳಲ್ಲಿ ಒಂದು ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿತ್ತು.

ಕೇಂದ್ರವೇ 2018ರಲ್ಲಿ ಹೊರಡಿಸಿದ ಅಧಿಸೂಚನೆಯಲ್ಲಿ ಚಾರ್‌ ಧಾಮ್‌ ರೀತಿ ಗುಡ್ಡಗಾಡು ಪ್ರದೇಶಗಳಲ್ಲಿ ರಸ್ತೆಯನ್ನು 5.5 ಮೀಟರ್‌ಗಿಂತಲೂ ಹೆಚ್ಚು ವಿಸ್ತರಿಸಬಾರದು ಎಂದು ತಿಳಿಸಲಾಗಿತ್ತು. ತನ್ನದೇ ಆದೇಶವನ್ನು ಪಾಲಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಸ್ತೆಯನ್ನು 5.5 ಮೀಟರ್‌ಗಿಂತಲೂ ಹೆಚ್ಚು ವಿಸ್ತರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಸೆಪ್ಟೆಂಬರ್ 2020ರಲ್ಲಿ ಕಡ್ಡಾಯಗೊಳಿಸಿತ್ತು. ಆದರೆ ಅಧಿಸೂಚನೆಯನ್ನು ಡಿಸೆಂಬರ್ 2020ರಲ್ಲಿ ತಿದ್ದುಪಡಿ ಮಾಡಲಾಗಿತ್ತು. ಸಚಿವಾಲಯವು 10 ಮೀಟರ್ ಅಗಲದಲ್ಲಿ ರಸ್ತೆಯನ್ನು ನಿರ್ಮಿಸಲು ಅನುಮತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

ವ್ಯಕ್ತಿಗಳು ಮತ್ತು ಸರಕು ಸಾಗಣೆಗಾಗಿ ಸೇನೆಗೆ ನಿರ್ದಿಷ್ಟ ಅಗಲದ ಫೀಡರ್ ರಸ್ತೆಗಳು ಅಗತ್ಯ ಇವೆ ಎಂದು ಕೇಂದ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ವಾದ ಮಂಡಿಸಿದರು. ಇತ್ತ ಅರ್ಜಿದಾರರನ್ನು ಪ್ರತಿನಿಧಿಸಿದ ವಕೀಲ ಕಾಲಿನ್‌ ಗೊನ್ಸಾಲ್ವೆಸ್ ಅವರು ಹಿಮಾಲಯದಂತಹ ಯುವ ಪರ್ವತಗಳ ಮೇಲೆ ಉಂಟಾಗಬಹುದಾದ ದುರಂತವನ್ನು ಎತ್ತಿ ತೋರಿಸಿದರು. ಸಂಸದೀಯ ಸಮಿತಿಯ ವರದಿಗಳನ್ನು ಉಲ್ಲೇಖಿಸಿದ ಅವರು ಹಿಮಾಲಯ ರಸ್ತೆ ನಿರ್ಮಾಣಕ್ಕೆ ಮುಕ್ತವಾಗಲು ಸಾಧ್ಯವಿಲ್ಲ ಎಂದರು.

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ವಿಕ್ರಮ್ ನಾಥ್ ಅವರನ್ನು ಒಳಗೊಂಡ ಪೀಠವು ಹಿಮನದಿ ಕರಗುವಿಕೆ ಮತ್ತು ಅತಿರೇಕದ ಅಭಿವೃದ್ಧಿ ಯೋಜನೆಗಳಿಂದ ಉಂಟಾಗುವ ಪರಿಸರ ಸಮಸ್ಯೆಗಳನ್ನು ಗಮನಿಸಿತು ಆದರೆ ರಕ್ಷಣಾ ಅಗತ್ಯಗಳನ್ನು ಕಡೆಗಣಿಸಬಹುದೇ ಎಂದು ಇದೇ ವೇಳೆ ಪ್ರಶ್ನಿಸಿತು.

"ಪರಿಸರ ಕಾಳಜಿ ದೇಶದ ರಕ್ಷಣೆಯ ಮೇಲೆ ಜಯಸಾಧಿಸಬೇಕು ಎಂಬ ಸಣ್ಣದೊಂದು ಸಲಹೆ ಮೂಡಿದರೂ ಸಹ ನಾನು ಈ ಪ್ರಕರಣವನ್ನು ಗೆಲ್ಲಬಾರದು" ಎಂದು ಗೊನ್ಸಾಲ್ವೇಸ್‌ ಪ್ರತಿಕ್ರಿಯಿಸಿದರು. "116 ಪ್ರಮುಖ ಭೂಕುಸಿತಗಳು ಈವರೆಗೆ ಸಂಭವಿಸಿದ್ದು ಕಳೆದ ಮಳೆಗಾಲದಲ್ಲೊಂದರಲ್ಲೇ 16 ಭೂಕುಸಿತಗಳು ಘಟಿಸಿವೆ. ರಸ್ತೆ ನಿರ್ಮಾಣಕ್ಕೆ ಪರ್ವತಗಳನ್ನು ಸ್ಫೋಟಿಸಲಾಗುತ್ತಿದೆ. ಆದರೆ ಪರ್ವತಗಳಿಗೆ ಇದನ್ನು ಭರಿಸಲು ಸಾಧ್ಯವಿಲ್ಲ ಎನ್ನುವುದು ಪ್ರತಿಯೊಬ್ಬ ಪರ್ವತವಾಸಿಗೂ ತಿಳಿದಿದೆ" ಎಂಬುದಾಗಿ ಅವರು ಹೇಳಿದರು. ವಿಚಾರಣೆ ನಾಳೆ ಮುಂದುವರೆಯಲಿದೆ.

Kannada Bar & Bench
kannada.barandbench.com