ಕೋಲಾರ ಜಿಲ್ಲೆಯ ಮಾಲೂರು ಶಾಸಕ ಕಾಂಗ್ರೆಸ್ ಕೆ ವೈ ನಂಜೇಗೌಡ ಅವರ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ಅಸಿಂಧುಗೊಳಿಸಿ ಮಹತ್ವದ ಆದೇಶ ಮಾಡಿದೆ. ಮುಂದಿನ ನಾಲ್ಕು ವಾರಗಳಲ್ಲಿ ಹೊಸದಾಗಿ ಮತ ಎಣಿಕೆ ನಡೆಸಿ, ಫಲಿತಾಂಶ ಪ್ರಕಟಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ (ಸಿಇಸಿ) ಹೈಕೋರ್ಟ್ ನಿರ್ದೇಶಿಸಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಿಂದ ಶಾಸಕರಾಗಿ ಕೆ ವೈ ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸುವಂತೆ ಕೋರಿ 248 ಮತಗಳಿಂದ ಸೋತಿದ್ದ ಬಿಜೆಪಿಯ ಅಭ್ಯರ್ಥಿ ಕೆ ಎಸ್ ಮಂಜುನಾಥ್ ಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್ ದೇವದಾಸ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ. ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಒಂದು ತಿಂಗಳ ಮಟ್ಟಿಗೆ ಆದೇಶಕ್ಕೆ ತಡೆ ನೀಡಿ ಆದೇಶಿಸಿದೆ.
ಮಾಲೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯದ ದೃಶ್ಯಾವಳಿಗಳನ್ನು ಚಿತ್ರೀಕರಿಸಿ ಶೇಖರಿಸಿಟ್ಟಿರುವ ಹಾರ್ಡ್‌ಡಿಸ್ಕ್ ಅನ್ನು ಮೆಸರ್ಸ್ ಐಕಿಯಾ ಬಿಸಿನೆಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ಯಿಂದ ಪಡೆಯಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ವಿವರಣೆ ನೀಡಿ ಪ್ರಮಾಣ ಪತ್ರ ಸಲ್ಲಿಸುವಂತೆ ಕೋಲಾರ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ವೆಂಕಟರಾಜು ಅವರಿಗೆ ನಿರ್ದೇಶನ ನೀಡಿದೆ.
ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ 15 ಸ್ಪರ್ಧಿಗಳ ಏಜೆಂಟರುಗಳಿಗೆ ಮತ ಎಣಿಕೆ ಕೇಂದ್ರದಲ್ಲಿ ಸಮರ್ಪಕ ವ್ಯವಸ್ಥೆ ಮಾಡಿರಲಿಲ್ಲ. ಮತಗಳ ಎಣಿಕೆ ಒಂದೇ ಕೊಠಡಿಯಲ್ಲಿ ನಡೆಯಬೇಕಿತ್ತು. ಆದರೆ, ಎರಡು ಪ್ರತ್ಯೇಕ ಕೊಠಡಿಗಳಲ್ಲಿ ನಡೆದಿದೆ. ಮತ ಏಣಿಕೆ ಏಜೆಂಟುಗಳ ಸಹಿಗಳು ಸಹ ಅಪರಿಚತ ವ್ಯಕ್ತಿಗಳಾಗಿದ್ದಾಗಿದೆ. ಇನ್ನೂ ಮತಗಳನ್ನು ಮರು ಎಣಿಕೆ ಮಾಡಲು ಆದೇಶಿಸಬೇಕು ಎಂದು ತಾವು ಕೋರಿದ ಅರ್ಜಿ ಕುರಿತು ಚುನಾವನಾಧಿಕಾರಿ ಯಾವುದೇ ಆದೇಶ ಮಾಡಿಲ್ಲ. ಮತ ಎಣಿಕೆಯ ವಿಡಿಯೋಗಳು ಕಾಣೆಯಾಗಿದೆ. ಇದರಿಂದ ಚುನಾವಣೆ ಫಲಿತಾಂಶ ರದ್ದುಪಡಿಸಬೇಕು ಎಂದು ಅರ್ಜಿದಾರ ಮಂಜುನಾಥ್ ಕೋರಿದ್ದರು.
ಈ ವಾದ ಪುರಸ್ಕರಿಸಿರುವ ನ್ಯಾಯಾಲಯವು ಮತ ಎಣಿಕೆ ಪ್ರಕ್ರಿಯೆಯಲ್ಲಿನ ವ್ಯತ್ಯಾಸಗಳ ಬಗ್ಗೆ ಅರ್ಜಿದಾರರು ಸಾಕಷ್ಟು ವಿವರಗಳನ್ನು ನೀಡಿದ್ದಾರೆ. ವಿವಿಧ ಫಾರ್ಮ್-17C ಭಾಗ -2 ದಾಖಲೆಗಳಲ್ಲಿ ಅರ್ಜಿದಾರರ ಎಣಿಕೆ ಏಜೆಂಟ್‌ಗಳ ಸಹಿಗಳು ಕಂಡುಬಂದಿಲ್ಲ. ಕೆಲವು ದಾಖಲೆಗಳಲ್ಲಿ, ಅರ್ಜಿದಾರರ ಎಣಿಕೆ ಏಜೆಂಟ್ ಅಲ್ಲದವರ ಸಹಿಗಳಿವೆ ಎಂದು ಆದೇಶದಲ್ಲಿ ಪೀಠ ತಿಳಿಸಿದೆ.
ಮರು ಎಣಿಕೆಗೆ ಕೋರಿದ ಅರ್ಜಿಗೆ ಸಂಬಂಧಿಸಿದಂತೆ ಚುನಾವಣಾಧಿಕಾರಿ ಹೊರಡಿಸಿದ ಆದೇಶದ ಪ್ರತಿ ಚುನಾವಣಾಧಿಕಾರಿ ಬಳಿ ಲಭ್ಯವಿಲ್ಲ. ಕೋರ್ಟ್‌ಗೆ ಹಾಜರುಪಡಿಸಿದ ಸ್ಟ್ರಾಂಗ್ ರೂಮಿನಿನ ದಾಖಲೆಗಳೊಂದಿಗೆ ಅದು ಕಂಡುಬಂದಿಲ್ಲ. ಇದರಿಂದ ಮತ ಎಣಿಕೆಯ ದಿನದಂದು ಚುನಾವಣಾಧಿಕಾರಿ ಮತಗಳ ಮರು ಎಣಿಕೆಗೆ ಆದೇಶ ಹೊರಡಿಸದೇ ಇರಬಹುದು ಎಂಬ ಸಂಶಯ ಕಾಡುತ್ತಿದೆ. ಮರು ಎಣಿಕೆ ಅರ್ಜಿಯ ಕುರಿತು ಚುನಾವಣಾಧಿಕಾರಿ ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂಬುದು ನಿಜವೆಂದು ಕಂಡುಬಂದರೆ, ಚುನಾವಣಾಧಿಕಾರಿಯು ಕಾನೂನಿನ ನಿಬಂಧನೆ ಉಲ್ಲಂಘಿಸಿದ್ದಾರೆ ಎನ್ನಬಹುದು. ಅರ್ಜಿದಾರರು ಮರು ಎಣಿಕೆಗೆ ಅರ್ಜಿ ಸಲ್ಲಿಸುವ ಹಕ್ಕನ್ನು ಹೊಂದಿರುತ್ತಾರೆ ಎಂದು ತಿಳಿಸಿದ ಪೀಠ, ಮತಗಳ ಮರು ಎಣಿಕೆಗೆ ಆದೇಶಿಸಿದೆ.
ಮತ ಎಣಿಕೆಯ ವಿಡಿಯೋ ರೆಕಾರ್ಡಿಂಗ್ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸದೆ ಕರ್ತವ್ಯ ಲೋಪ ಎಸಗಿರುವ ಅಂದಿನ ಚುನಾವಣಾಧಿಕಾರಿಯ (ಜಿಲ್ಲಾಧಿಕಾರಿ) ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.