Kerala High Court Kerala High Court
ಸುದ್ದಿಗಳು

ಉದ್ಯೋಗಕ್ಕಾಗಿ ಪಾಕಿಸ್ತಾನಕ್ಕೆ ಹೋಗಿದ್ದ ವ್ಯಕ್ತಿ 'ಶತ್ರು' ಅಲ್ಲ: ಕೇರಳ ಹೈಕೋರ್ಟ್

Bar & Bench

ಕೆಲ ಕಾಲ ಪಾಕಿಸ್ತಾನದಲ್ಲಿ ಕೆಲಸ ಮಾಡಿದ್ದರು ಎಂಬ ಒಂದೇ ಕಾರಣಕ್ಕೆ ಓರ್ವ ಭಾರತೀಯ ವ್ಯಕ್ತಿಯನ್ನು ಭಾರತ ರಕ್ಷಣಾ ಕಾಯಿದೆ ಅಡಿ ಶತ್ರು ಎಂದು ಕರೆಯಲಾಗದು ಎಂಬುದಾಗಿ ಈಚೆಗೆ ಕೇರಳ ಹೈಕೋರ್ಟ್‌ ಹೇಳಿದೆ [ಪಿ ಉಮ್ಮರ್ ಕೋಯಾ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ]

ಮೃತ ವ್ಯಕ್ತಿಗೆ ಸೇರಿದ ಮತ್ತು ಪ್ರಸ್ತುತ ಮಗನ ಸುಪರ್ದಿಯಲ್ಲಿರುವ ಕೆಲ ಜಮೀನಿನ ವಿರುದ್ಧ1968ರ ಶತ್ರು ಆಸ್ತಿ ಕಾಯಿದೆಯಡಿಯಲ್ಲಿ ಭಾರತದ ಶತ್ರು ಆಸ್ತಿ ಸುಪರ್ದಿ (ಸಿಇಪಿಐ) ವಿಚಾರಣೆ ಪ್ರಕ್ರಿಯೆ ರದ್ದುಗೊಳಿಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಅರ್ಜಿದಾರರಾದ ನಿವೃತ್ತ ಪೊಲೀಸ್ ಅಧಿಕಾರಿಯ ತಂದೆ 1953ರಲ್ಲಿ ಪಾಕಿಸ್ತಾನಕ್ಕೆ ಕೆಲಸ ಅರಸಿ ಹೋದಾಗಿನಿಂದ ಅವರನ್ನು "ಶತ್ರು" ಎಂದು ಪರಿಗಣಿಸಲಾಗಿತ್ತು. ಶತ್ರು ಆಸ್ತಿ ಕಾಯಿದೆ ವ್ಯಾಪ್ತಿಗೆ ಒಳಪಡುವುದರಿಂದ ಜಮೀನಿಗೆ ಕಂದಾಯ ಪಾವತಿಸದಂತೆ ಅವರಿಗೆನಿರ್ಬಂಧ ವಿಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಒಬ್ಬ ವ್ಯಕ್ತಿ ಕೆಲಸ ಹುಡುಕಿಕೊಂಡು ಪಾಕಿಸ್ತಾನಕ್ಕೆ ಹೋದ ಮಾತ್ರಕ್ಕೆ ಭಾರತ ರಕ್ಷಣಾ ಕಾಯಿದೆಯಡಿ ಶತ್ರುವಾಗುವುದಿಲ್ಲ ಎಂದು ನ್ಯಾಯಮೂರ್ತಿ ವಿಜು ಅಬ್ರಹಾಂ ಅವರಿದ್ದ ಪೀಠ ಜೂನ್ 24ರಂದು ನೀಡಿದ ತೀರ್ಪಿನಲ್ಲಿ ತಿಳಿಸಿದೆ.

ಅರ್ಜಿದಾರರ ತಂದೆ ಉದ್ಯೋಗ ಅರಸಿ ಪಾಕಿಸ್ತಾನಕ್ಕೆ ತೆರಳಿ ಅಲ್ಲಿ ಕೆಲಸ ಮಾಡಿದ್ದರು ಎಂಬ ಕಾರಣಕ್ಕೆ ಅರ್ಜಿದಾರರ ತಂದೆಯನ್ನು ಭಾರತ ರಕ್ಷಣಾ ಕಾಯಿದೆ 1971ರ ನಿಯಮ 130 ಮತ್ತು 138ರಡಿ ಶತ್ರು ಎಂದು ವ್ಯಾಖ್ಯಾನಿಸಲಾಗದು. ಈ ಕಾಯಿದೆಯನ್ನು ಸಂಪೂರ್ಣ ಭಿನ್ನ ಉದ್ದೇಶಕ್ಕಾಗಿ ಜಾರಿಗೆ ತರಲಾಗಿದ್ದು ಪ್ರಸ್ತತ ಪ್ರಕರಣಗಳಲ್ಲಿ ನಿಯಮಗಳ ಮೇಲಿನ ಮೇಲಿನ ಅವಲಂಬನೆ ಸಂಪೂರ್ಣವಾಗಿ ಸಂದರ್ಭಕ್ಕೆ ಹೊರತಾಗಿದ್ದು  ಪ್ರಸ್ತುತ ಪ್ರಕರಣದ ವಾಸ್ತವಾಂಶಗಳಿಗಿಂತ ಭಿನ್ನವಾಗಿದೆ ಎಂದರು.

ಶತ್ರು ಆಸ್ತಿ ಕಾಯಿದೆ- 1968ರ ಅಡಿ ತನ್ನ ತಂದೆಯ ಆಸ್ತಿಯನ್ನು "ಶತ್ರು ಆಸ್ತಿ" ಎಂದು ಘೋಷಿಸಿದ್ದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನಿರ್ಧಾರವನ್ನು ಕೋಯಾ ವಿರೋಧಿಸಿದ್ದರು. ತಾನು ಮತ್ತು ತನ್ನ ಕುಟುಂಬ ಕೇರಳದ ಮಲಪ್ಪುರಂನಲ್ಲಿ ತಲೆಮಾರುಗಳಿಂದ ನೆಲೆಸಿದ್ದೇವೆ. ತಮ್ಮ ತಂದೆ 1995ರಲ್ಲಿ 93ನೇ ವಯಸ್ಸಿನಲ್ಲಿ ನಿಧನರಾಗಿದ್ದು ಭಾರತದಲ್ಲಿಯೇ ಅವರ ಅಂತ್ಯಸಂಸ್ಕಾರ ನಡೆದಿದೆ ಎಂದು  ಕೋಯಾ ತಿಳಿಸಿದ್ದರು. 

ತನ್ನ ತಂದೆ ಪಾಕಿಸ್ತಾನದ ಕರಾಚಿಯಲ್ಲಿ 1953ರ ಸುಮಾರಿಗೆ ಹೋಟೆಲ್‌ನಲ್ಲಿ ಸಹಾಯಕರಾಗಿ ಕೆಲ ಕಾಲ ಕೆಲಸ ಮಾಡಿದ್ದರಿಂದ ಪೊಲೀಸರು ತಂದೆ ಅವರಿಗೆ ಪಾಕಿಸ್ತಾನಿ ಪ್ರಜೆ ಎಂದು ಹಣೆಪಟ್ಟಿ ಹಚ್ಚಿದ್ದಾರೆ. ಈ ವಿಚಾರವಾಗಿ ತಮ್ಮ ತಂದೆಯವರೇ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿದ್ದರು. ಸ್ವಯಂಪ್ರೇರಣೆಯಿಂದ ಪಾಕಿಸ್ತಾನದ ಪೌರತ್ವ ಪಡೆಯದೆ ಇರುವುದರಿಂದ ತಮ್ಮ ತಂದೆ ಭಾರತದ ಪ್ರಜೆ ಎಂದು ಸರ್ಕಾರ ಆಗ ದೃಢಪಡಿಸಿತ್ತು ಎಂದು ಕೋಯಾ ವಾದಿಸಿದ್ದರು.

ಈ ವಾದದಲ್ಲಿ ಹುರುಳಿರುವುದನ್ನು ಕಂಡುಕೊಂಡ ನ್ಯಾಯಾಲಯ ಭಾರತದ ವಿರುದ್ಧ ಬಾಹ್ಯ ಆಕ್ರಮಣ ತಡೆಯುವ ನಿಟ್ಟಿನಲ್ಲಿ ಶತ್ರು ಮತ್ತು ಶತ್ರು ಸಂಸ್ಥೆಯೊಂದಿಗೆ ವ್ಯವಹಾರ ನಡೆಸದಂತೆ ಭಾರತ ರಕ್ಷಣಾ ಕಾಯಿದೆ ಜಾರಿಗೆ ತರಲಾಗಿದೆ ಎಂದಿತು.

ಅರ್ಜಿದಾರರ ತಂದೆ ಪಾಕಿಸ್ತಾನದಲ್ಲಿದ್ದಾಗ ಶತ್ರುಗಳ ಜೊತೆ ಅಥವಾ ಶತ್ರು ಸಂಸ್ಥೆಯ ನಿಯಂತ್ರಣದಲ್ಲಿ ವ್ಯವಹಾರ ನಡೆಸಿದ್ದರು ಎಂಬುದಕ್ಕೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಆದ್ದರಿಂದ ಅವರ ಆಸ್ತಿಯನ್ನು ಶತ್ರು ಆಸ್ತಿ ಎಂದು ಪರಿಗಣಿಸಬಾರದು ಎಂದು ಅದು ನುಡಿಯಿತು.

ಆದ್ದರಿಂದ ಭಾರತದಲ್ಲಿರುವ ಶತ್ರುವಿನ ಆಸ್ತಿಯ ಅಭಿರಕ್ಷಕ ಸಂಸ್ಥೆ (ಸಿಇಪಿಐ) ಆರಂಭಿಸಿದ್ದ ಪ್ರಕ್ರಿಯೆಗಳನ್ನು ರದ್ದುಗೊಳಿಸಿದ ಪೀಠ ಅರ್ಜಿದಾರರರಿಗೆ ಮೂಲ ತೆರಿಗೆ ಪಾವತಿಸಲು ಅನುವು ಮಾಡಿಕೊಡುವಂತೆ ಗ್ರಾಮ ಅಧಿಕಾರಿಗೆ ಸೂಚಿಸಿತು.