KSRTC 
ಸುದ್ದಿಗಳು

ಸಂಧಾನ ಪ್ರಕ್ರಿಯೆಯಲ್ಲಿ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ಜಂಟಿ ಕ್ರಿಯಾ ಸಮಿತಿ ಭಾಗವಹಿಸಿಬೇಕು: ಹೈಕೋರ್ಟ್‌

ಮುಷ್ಕರ ನಡೆಸಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ.‌ ಸರ್ಕಾರ ಮತ್ತು ಸಾರಿಗೆ ನೌಕರರ ಸಂಘಟನೆಗಳು ನಡುವಿನ ತಕ್ಕಾಟದಿಂದ  ಜನಸಾಮಾನ್ಯರು ತೊಂದರೆಗೆ ಒಳಗಾಗಬಾರದು ಎಂದ ನ್ಯಾಯಾಲಯ.

Bar & Bench

ವೇತನ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿ ಟ್ರೇಡ್ ಯೂನಿಯನ್‌ ಜಂಟಿ ಕ್ರಿಯಾ ಸಮಿತಿ‌ ನಡೆಸಲು ಉದ್ದೇಶಿಸಿದ್ದ ಮುಷ್ಕರಕ್ಕೆ ನಿರ್ಬಂಧ ಹೇರಿ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಜೂನ್ 2ರವರೆಗೆ ವಿಸ್ತರಿಸಿರುವ ಹೈಕೋರ್ಟ್, ಸಂಧಾನದ ಮೂಲಕ ವೇತನ‌ ಪರಿಷ್ಕರಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಗುರುವಾರ ನಿರ್ದೇಶಿಸಿದೆ.

ಮುಷ್ಕರ ಪ್ರಶ್ನಿಸಿ ಮನೆಕೆಲಸ ಮಾಡುತ್ತಿರುವ ಬೆಂಗಳೂರಿನ ಸಿ ವೇದಾವತಿ ಹಾಗೂ ಕಟ್ಟಡ ಕಾರ್ಮಿಕ ಎಚ್‌ ವಿ ಶ್ರೀಧರ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸೂರಜ್‌ ಗೋವಿಂದರಾಜ್‌ ಮತ್ತು ಡಾ. ಕೆ ಮನ್ಮಥ ರಾವ್‌ ಅವರ ವಿಭಾಗೀಯ ಪೀಠ ನಡೆಸಿತು.

ಸಾರಿಗೆ ನೌಕರರ ವೇತನ ಹೆಚ್ಚಳ ಸಂಬಂಧ ಕೈಗಾರಿಕಾ ನ್ಯಾಯ ಮಂಡಳಿಯ ಮುಂದೆ ಸಂಧಾನ ಪ್ರಕ್ರಿಯೆ ನಡೆಯುತ್ತಿದೆ. ಮೇ 25ರಂದು ವಿಚಾರಣೆ ನಿಗದಿಯಾಗಿದೆ. ಅಂದು ಸಾರಿಗೆ ನಿಗಮಗಳ 9 ಮಂದಿ ನಿರ್ದೇಶಕರು ಭಾಗವಹಿಸಲಿದ್ದಾರೆ. ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಗುತ್ತದೆ ಎಂದು  ಸರ್ಕಾರಿ ವಕೀಲರು ತಿಳಿಸಿದ್ದಾರೆ.‌ ಸಂಧಾನ ಸಭೆಯಲ್ಲಿ ಜಂಟಿಕ್ರಿಯಾ ಸಮಿತಿಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂಬುದಾಗಿ ಸಮಿತಿಯ ವಕೀಲರು ತಿಳಿಸಿದ್ದಾರೆ.  ಹಾಗಾಗಿ, ನೌಕರರ ಮುಷ್ಕರ ನಡೆಸಬಾರದು. ನೌಕರರ ಮತ್ತು ಸರ್ಕಾರದ ನಡುವಿನ ತಿಕ್ಕಾಟದಿಂದ ಜನ ಸಾಮಾನ್ಯರಿಗೆ ತೊಂದರೆಯಾಗವಾರದು. ಮಾತುಕತೆ ಮೂಲಕ‌ವೇ ವೇತನ‌ ಪರಿಷ್ಕರಣೆ ವಿವಾದವನ್ನು ಬಗೆಹರಿಸಿಕೊಳ್ಳಬೇಕು ಎಂದು ಪೀಠ ಸಲಹೆ ನೀಡಿ, ವಿಚಾರಣೆಯನ್ನು ನ್ಯಾಯಾಲಯವು ಜೂನ್ 2ಕ್ಕೆ ಮುಂದೂಡಿತು.

ಇನ್ನೂ ವಿಚಾರಣೆ ವೇಳೆ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ತಾರಾನಾಥ್ ಪೂಜಾರಿ ಅವರು “ಸರ್ಕಾರ ಹೆಚ್ಚಳ‌ ಮಾಡಿರುವ ಶೇ.12.5 ವೇತನ ಪ್ರಮಾಣವನ್ನು ಸಾರಿಗೆ ನಿಗಮಗಳ ಬಹುತೇಕ ಸಂಘಟನೆ ಗಳು ಒಪ್ಪಿಕೊಂಡಿವೆ. ಸರ್ಕಾರ ಈಗಾಗಲೇ 450 ಕೋಟಿ ರೂಪಾಯಿ ಬಿಡುಗಡೆ ಸಹ ಮಾಡಲಾಗಿದೆ. ಈಗ ಮುಷ್ಕರಕ್ಕೆ ಕರೆ ಕೊಟ್ಟಿರುವವರು ಜಂಟಿ ಕ್ರಿಯಾ ಸಮಿತಿಯವರು‌ ನಿವೃತ್ತ‌ ಉದ್ಯೋಗಿಗಳು. ಕಾರ್ಮಿಕರನ್ನು ಪ್ರತಿನಿಧಿಸುವುದಿಲ್ಲ ಎಂದರು.

ಇನ್ನೂ ವೇತನ ಪರಿಷ್ಕರಣೆ ವಿಚಾರವಾಗಿ ಸಂಧಾನ ಪ್ರಕ್ರಿಯೆ ನಡೆಯುತ್ತಿದೆ. ಕಾರ್ಮಿಕ ಆಯುಕ್ತರ ಮುಂದೆ ಸಂಧಾನವು ಮೇ 25ಕ್ಕೆ ನಿಗದಿಯಾಗಿದೆ‌. ಈ ವೇಳೆ ಸಾರಿಗೆ ಇಲಾಖೆಯ 9 ನಿಗಮಗಳ ಮಂದಿ ನಿರ್ದೇಶಕರು ಭಾಗವಹಿಸಲಿದ್ದಾರೆ. ಈ ವೇಳೆ ನೌಕರರ ಸಂಘಟನೆಗಳು ಭಾಗವಹಿಸಿ ಮಾತುಕತೆ ನಡೆಸಬೇಕು ಎಂದು ತಿಳಿಸಿದರು.

ಸಾರಿಗೆ ನೌಕರರ ಸಂಘಟನೆಗಳ‌ ಪರ ವಕೀಲ ಕ್ಲಿಫ್ಟನ್‌ ರೋಜಾರಿಯೋ ಅವರು ಸಾರಿಗೆ ಇಲಾಖೆಯ ಸಂಬಂಧಪಟ್ಟ 9 ನಿಗಮಗಳ ನಿರ್ದೇಶರು ಸಂಧಾನ ಸಭೆಯಲ್ಲಿ ಭಾಗಿಯಾದರೆ ಜಂಟಿ ಕ್ರಿಯಾ ಸಮಿತಿಯ ಪ್ರತಿನಿಧಿಗಳು ಸಹ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಆಗ ಪೀಠವು ಸಂಧಾನ ಮಾತುಕತೆ ನಡುವೆ ಮುಷ್ಕರ ನಡೆಸುವುದು ಸೂಕ್ತವಲ್ಲ. ಮುಷ್ಕರ ನಡೆಸಬಾರದು. ಮಾತುಕತೆ ನಡೆಸುವ ಮೂಲಕ‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಎಸ್ಎಸ್ಎಲ್‌ಸಿ ಪೂರಕ ಪರೀಕ್ಷೆ ವೇಳೆ ಮುಷ್ಕರ ಸರಿಯಲ್ಲ. ಮುಷ್ಕರ ನಡೆಸಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ.‌ ಸರ್ಕಾರ ಮತ್ತು ಸಾರಿಗೆ ನೌಕರರ ಸಂಘಟನೆಗಳು ನಡುವಿನ ತಕ್ಕಾಟದಿಂದ  ಜನಸಾಮಾನ್ಯರು ತೊಂದರೆಗೆ ಒಳಗಾಗಬಾರದು ಎಂದು ನುಡಿಯಿತು.