ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ಬಂಧ

“ವಿವಿಧ ಯೂನಿಯನ್‌ಗಳ ನೇತೃತ್ವ ವಹಿಸಿರುವ ಜಂಟಿ ಕ್ರಿಯಾ ಸಮಿತಿಯು 29.04.2026ರ ನೋಟಿಸ್‌ ಆಧರಿಸಿ ಮುಷ್ಕರ ನಡೆಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ” ಎಂದು ಆದೇಶಿಸಿರುವ ನ್ಯಾಯಾಲಯ.
KSRTC Bus & HC
KSRTC Bus & HC
Published on

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಸಿಬ್ಬಂದಿ ಟ್ರೇಡ್‌ ಯೂನಿಯನ್‌ಗಳ ಜಂಟಿ ಕ್ರಿಯಾ ಸಮಿತಿ ನಾಳೆಯಿಂದ ಕರೆದಿದ್ದ ಸಾರಿಗೆ ನೌಕರರ ಮುಷ್ಕರಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ತಡೆಯೊಡ್ಡಿದೆ.

ಮುಷ್ಕರ ಪ್ರಶ್ನಿಸಿ ಮನೆಕೆಲಸ ಮಾಡುತ್ತಿರುವ ಬೆಂಗಳೂರಿನ ಸಿ ವೇದಾವತಿ ಹಾಗೂ ಕಟ್ಟಡ ಕಾರ್ಮಿಕ ಎಚ್‌ ವಿ ಶ್ರೀಧರ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸೂರಜ್‌ ಗೋವಿಂದರಾಜ್‌ ಮತ್ತು ಡಾ. ಕೆ ಮನ್ಮಥ ರಾವ್‌ ಅವರ ವಿಭಾಗೀಯ ಪೀಠ ನಡೆಸಿತು.

Justices Suraj Govindaraj and Dr. K Manmadha Rao
Justices Suraj Govindaraj and Dr. K Manmadha Rao

“ವಿವಿಧ ಯೂನಿಯನ್‌ಗಳ ನೇತೃತ್ವ ವಹಿಸಿರುವ ಜಂಟಿ ಕ್ರಿಯಾ ಸಮಿತಿಯು 29.04.2026ರ ನೋಟಿಸ್‌ ಆಧರಿಸಿ ಮುಷ್ಕರ ನಡೆಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ” ಎಂದು ಪೀಠ ಆದೇಶಿಸಿತು.

“ಸಾರಿಗೆ ಸಚಿವರು ಮತ್ತು ಅಥವಾ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಯಾವಾಗ ಜಂಟಿ ಕ್ರಿಯಾ ಸಮಿತಿಯ ಜೊತೆ ಸಭೆ ನಡೆಸಲಾಗುತ್ತದೆ ಎಂಬುದಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಸೂಚನೆ ಪಡೆದು ವಾದಿಸಲು ಎರಡು ದಿನ ಕಾಲಾವಕಾಶ ಕೋರಿದ್ದಾರೆ” ಎಂದಿರುವ ಪೀಠವು ಅದಕ್ಕಾಗಿ ವಿಚಾರಣೆಯನ್ನು ಮೇ 21ಕ್ಕೆ ಮುಂದೂಡಿದೆ.

ಕೆಎಸ್‌ಆರ್‌ಟಿ ಸಿಬ್ಬಂದಿಯ ಟ್ರೇಡ್‌ ಯೂನಿಯನ್‌ಗಳ ಜಂಟಿ ಕ್ರಿಯಾ ಸಮಿತಿ ಪರ ವಕೀಲ ಕ್ಲಿಫ್ಟನ್‌ ಡಿ ರೋಜಾರಿಯೋ ಅವರು “ನಮ್ಮ ಬೇಡಿಕೆಗಳನ್ನು ಸರಿಯಾಗಿ ಈಡೇರಿಸಿಲ್ಲ. ಕಾನೂನಿನ ಪ್ರಕಾರವೇ ಮುಷ್ಕರ ನಡೆಸಲು ನೋಟಿಸ್‌ ನೀಡಲಾಗಿದೆ. ಅದನ್ನು ಪರಿಗಣಿಸದೇ ಸರ್ಕಾರವೇ ಈ ಸಂದರ್ಭ ನಿರ್ಮಾಣ ಮಾಡಿದೆ” ಎಂದರು.

Clifton D'rozario
Clifton D'rozario

ಈ ಹಂತದಲ್ಲಿ ಪೀಠವು “ಈಗ ಮುಷ್ಕರ ಬೇಡ. ಈಗಾಗಲೇ ನಿಮಗೆ ಶೇ.12.5ರಷ್ಟು ವೇತನ ಪರಿಷ್ಕರಣೆ ನೀಡಲಾಗಿದೆ. 450 ಕೋಟಿ ರೂಪಾಯಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಇನ್ನೊಂದು 200 ಕೋಟಿ ರೂಪಾಯಿ ಬಿಡುಗಡೆಗೆ ಪ್ರಯತ್ನಿಸೋಣ” ಎಂದಿತು. ಅಲ್ಲದೇ, “ಯಾವಾಗ ಸಭೆ ನಡೆಸುತ್ತೀರಿ?” ಎಂದು ಸರ್ಕಾರಕ್ಕೆ ಪ್ರಶ್ನಿಸಿತು. ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ತಾರಾನಾಥ್‌ ಅವರು ಎರಡು ದಿನ ಕಾಲಾವಕಾಶ ಕೋರಿದರು.

ಇದನ್ನು ಆಲಿಸಿದ ಪೀಠವು ಮುಖ್ಯಮಂತ್ರಿ ಅಥವಾ ಸಾರಿಗೆ ಸಚಿವರು, ಸಾರಿಗೆ ಇಲಾಖೆ ಕಾರ್ಯದರ್ಶಿಯು ಜಂಟಿ ಕ್ರಿಯಾ ಸಮಿತಿ ಜೊತೆಗೆ ಯಾವಾಗ ಸಭೆ ನಡೆಸುತ್ತಿದೆ ಎಂಬುದನ್ನು ಗುರುವಾರದ ವಿಚಾರಣೆಯ ವೇಳೆ ತಿಳಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.

ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಮ್‌ ಹುಯಿಲಗೋಳ ಅವರು “ಈಗಾಗಲೇ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳು ಆರಂಭವಾಗಿವೆ. ಮುಷ್ಕರದಿಂದ ಜನ ಸಾಮಾನ್ಯರಿಗೆ ಸಮಸ್ಯೆಯಾಗಲಿದೆ” ಎಂದರು.

Vikram Huilgol
Vikram Huilgol

ರಾಜ್ಯ ಸರ್ಕಾರವು ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ (ತಿದ್ದುಪಡಿ) ಕಾಯಿದೆ ಅಡಿ 01.01.2026 ರಿಂದ 30.06.2026ರವರೆಗೆ ಮುಷ್ಕರ ನಿಷೇಧಿಸಿದೆ. ಈ ಕಾಯಿದೆಯ ಸೆಕ್ಷನ್‌ 4 ಮತ್ತು 5ರ ಅಡಿ ಮುಷ್ಕರದಲ್ಲಿ ಭಾಗವಹಿಸಿದರೆ ಮತ್ತು ಭಾಗವಹಿಸುವಂತೆ ಪ್ರಚೋದಿಸುವ ವ್ಯಕ್ತಿಯನ್ನು ಆರು ತಿಂಗಳು ಜೈಲಿನಲ್ಲಿ ಇಡಬಹುದಾಗಿದೆ. ಕೈಗಾರಿಕಾ ವಿವಾದಗಳ ಕಾಯಿದೆ ಅಡಿಯಲ್ಲೂ ಸಾರಿಗೆ ಸಂಸ್ಥೆಗಳ ಸೇವೆಯನ್ನು ಸಾರ್ವಜನಿಕ ಬಳಕೆ ಸೇವೆ ಎಂದು ಘೋಷಿಸಲಾಗಿದೆ. ಈ ಸಂಬಂಧ ಸಂಧಾನ ಪ್ರಕ್ರಿಯೆ ನಡೆಯುತ್ತಿದ್ದು, ಇದರ ವಿಚಾರಣೆ ಮೇ 25ಕ್ಕೆ ನಿಗದಿಯಾಗಿದೆ. ಕೈಗಾರಿಕಾ ವಿವಾದ ಕಾಯಿದೆ ಸೆಕ್ಷನ್‌ 22(1)(a) ಅನ್ವಯ ಮುಷ್ಕರ ನಡೆಸುವ 14 ದಿನ ಮುಂಚಿತವಾಗಿ ಭಿತ್ತಪತ್ರ ಬಿಡುಗಡೆ ಮಾಡಬೇಕು. ಆದರೆ, ಇದನ್ನು ಐದಾರು ದಿನಗಳ ಮುಂಚಿತವಾಗಿ ಬಿಡುಗಡೆ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಸಾರ್ವಜನಿಕ ಬಸ್‌ಗಳಲ್ಲಿ ಪ್ರತಿದಿನ 1.20 ಕೋಟಿ ಮಂದಿ ಸಂಚಾರ ಮಾಡುತ್ತಿದ್ದು, ಈ ಪೈಕಿ ಶೇ 60 ಮಂದಿ ಮಹಿಳೆಯರಾಗಿದ್ದಾರೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆ ಚಾಲ್ತಿಯಲ್ಲಿರುವುದರಿಂದ ಮಹಿಳೆಯರು ಉಚಿತವಾಗಿ ಓಡಾಡುತ್ತಿದ್ದಾರೆ. ಪ್ರಸ್ತಾಪಿತ ಮುಷ್ಕರವು ಮೇ 20ರಿಂದ ನಡೆಯುವ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳು 18.05.2026 ರಿಂದ 25.05.2026ರವರೆಗೆ ನಡೆಯಲಿವೆ. ಗ್ರಾಮೀಣ ಮತ್ತು ಅರೆ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಸಾರ್ವಜನಿಕ ಬಸ್‌ಗಳನ್ನೇ ಅವಲಂಬಿಸಿರುವುದರಿಂದ ಮುಷ್ಕರದಿಂದ ಅವರಿಗೆ ಸಮಸ್ಯೆಯಾಗಲಿದೆ. ದಿನಗೂಲಿ ಅವಲಂಬಿಸಿರುವವರು, ರೋಗಿಗಳು, ವಯಸ್ಸಾದವರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರು ಸಾರ್ವಜನಿಕ ಬಸ್‌ ಅವಲಂಬಿಸಿದ್ದು, ಮುಷ್ಕರದಿಂದ ಅವರಿಗೆ ಸಮಸ್ಯೆಯಾಗಲಿದೆ ಎಂದು ವಿವರಿಸಲಾಗಿದೆ.

Also Read
ಮೇ 20ರಿಂದ ಸಾರಿಗೆ ನೌಕರರ ಪ್ರಸ್ತಾಪಿತ ಮುಷ್ಕರ: ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ

01.04.2025ರಂದು ರಾಜ್ಯ ಸರ್ಕಾರವು ಸಾರಿಗೆ ಸಿಬ್ಬಂದಿಯ ವೇತನದಲ್ಲಿ ಶೇ 12.5ರಷ್ಟು ಪರಿಷ್ಕರಿಸಿದ್ದು, 1,271.92 ಕೋಟಿ ರೂಪಾಯಿ ಹಂಚಿ ಮಾಡಿದೆ. ಮೊದಲ ವಂತಿಗೆ ರೂಪದಲ್ಲಿ 450 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಸಂಧಾನ ಸಂಬಂಧಿತ ವಿಚಾರಣೆಯು ಐದು ದಿನ ಇರುವ ಸಂದರ್ಭದಲ್ಲಿ ಪ್ರಸ್ತಾವಿತ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಆಕ್ಷೇಪಿಸಲಾಗಿದೆ.

ಹೀಗಾಗಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ಟ್ರೇಡ್‌ ಯೂನಿಯನ್‌ಗಳ ಜಂಟಿ ಕ್ರಿಯಾ ಸಮಿತಿಗೆ ಮುಷ್ಕರ ನಡೆಸದಂತೆ ನಿರ್ದೇಶಿಸಬೇಕು. ರಾಜ್ಯ ಸರ್ಕಾರ ಮತ್ತು ಕಾರ್ಪೊರೇಶನ್‌ ಯಾವುದೇ ಮುಷ್ಕರ ನಡೆಯದಂತೆ ಅಗತ್ಯ ಕ್ರಮಕೈಗೊಳ್ಳಲು ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Kannada Bar & Bench
kannada.barandbench.com