ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ ಅವರು ಸತತ ಏಳನೇ ಬಾರಿಗೆ ಭಾರತೀಯ ವಕೀಲರ ಪರಿಷತ್ (ಬಿಸಿಐ) ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ.
ಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾಗಿರುವ ಅವರು ಬಿಜೆಪಿಗೆ ಸೇರಿದವರಾಗಿದ್ದು ಬಿಹಾರದಿಂದ ರಾಜ್ಯಸಭಾ ಸದಸ್ಯರೂ ಆಗಿದ್ದಾರೆ.
ಭಾರತೀಯ ವಕೀಲರ ಪರಿಷತ್ತಿನ ಉಪಾಧ್ಯಕ್ಷ ಸ್ಥಾನಕ್ಕೆ ತಮಿಳುನಾಡು ಮತ್ತು ಪುದುಚೇರಿಯ ಎಸ್ ಪ್ರಭಾಕರನ್ ಮತ್ತು ದೆಹಲಿಯ ವೇದ್ ಪ್ರಕಾಶ್ ಶರ್ಮಾ ಸ್ಪರ್ಧಿಸುತ್ತಿದ್ದಾರೆ.
ಈ ಸ್ಥಾನಕ್ಕೆ ಮಾರ್ಚ್ 2 ರಂದು ಚುನಾವಣೆ ನಡೆಯಲಿದ್ದು, ಶಿಷ್ಟಾಚಾರದ ಪ್ರಕಾರ, ಹೊಸದಾಗಿ ಮರು ಆಯ್ಕೆಯಾದ ಅಧ್ಯಕ್ಷರ ನೇತೃತ್ವದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.
ಮೇ 17 ರಂದು ನವದೆಹಲಿಯಲ್ಲಿ ವಕೀಲರ ಪ್ರತಿನಿಧಿಗಳು ಮತ್ತು ರಾಜ್ಯ ವಕೀಲರ ಪರಿಷತ್ತುಗಳ ಸದಸ್ಯರ ಮಹತ್ವದ ರಾಷ್ಟ್ರೀಯ ಸಭೆ ನಡೆಯಲಿದೆ. ಈ ಉನ್ನತ ಮಟ್ಟದ ಸಭೆಯಲ್ಲಿ ವಕೀಲರ ಶ್ರೇಯೋಭಿವೃದ್ಧಿ, ಬಹುನಿರೀಕ್ಷಿತ ವಕೀಲರ ರಕ್ಷಣಾ ಕಾಯಿದೆ ಮತ್ತು ವಕೀಲರ ಭವಿಷ್ಯವನ್ನು ರೂಪಿಸುವ ವಿವಿಧ ನೀತಿ ವಿಷಯಗಳು ಸೇರಿದಂತೆ ಕಾನೂನು ವೃತ್ತಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಚರ್ಚಗೆ ಬರಲಿವೆ.
ಈ ಚರ್ಚೆಗಳು ದೇಶಾದ್ಯಂತ ಇರುವ ಕಾನೂನು ವೃತ್ತಿಪರರ ರಕ್ಷಣೆ ಮತ್ತು ಪ್ರಗತಿಪರ ಕ್ರಮಗಳಿಗೆ ಕಾರಣವಾಗುವ ನಿರೀಕ್ಷೆಯಿದೆ.