ರಾಜ್ಯಸಭೆಗೆ ನಡೆಯಲಿರುವ ಉಪಚುನಾವಣೆಗೆ ಅಭ್ಯರ್ಥಿಯಾಗಿ ಬಿಹಾರದಿಂದ ಭಾರತೀಯ ವಕೀಲರ ಪರಿಷತ್ (ಬಿಸಿಐ) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.
ಸೆಪ್ಟೆಂಬರ್ 3 ರಂದು ಚುನಾವಣೆ ನಡೆಯಲಿದ್ದು ಹರಿಯಾಣದಿಂದ ಕಿರಣ್ ಚೌಧರಿ, ಮಧ್ಯಪ್ರದೇಶದಿಂದ ಜಾರ್ಜ್ ಕುರಿಯನ್, ತ್ರಿಪುರಾದಿಂದ ರವನೀತ್ ಸಿಂಗ್ ಬಿಟ್ಟು ಮತ್ತು ರಾಜೀಬ್ ಭಟ್ಟಾಚಾರ್ಯ, ಅಸ್ಸಾಂನಿಂದ ಮಿಷನ್ ರಂಜನ್ ದಾಸ್ ಮತ್ತು ರಾಮೇಶ್ವರ್ ತೇಲಿ, ಒಡಿಶಾದಿಂದ ಮಮತಾ ಮೊಹಾಂತ ಮತ್ತು ಮಹಾರಾಷ್ಟ್ರದಿಂದ ಧೈರ್ಯಶೀಲ್ ಪಾಟೀಲ್ ಅವರನ್ನು ಕೂಡ ಬಿಜೆಪಿ ಅಖಾಡಕ್ಕಿಳಿಸಿದೆ.
ನಾಲ್ಕು ರಾಜ್ಯಗಳಿಗೆ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕಾಗಿ ಪ್ರಧಾನ ಮಂತ್ರಿ (ಪಿಎಂ) ನರೇಂದ್ರ ಮೋದಿಯವರನ್ನು ಮಿಶ್ರಾ ಮಾರ್ಚ್ 2022ರಲ್ಲಿ ಅಭಿನಂದಿಸಿದ್ದರು.
ಬಿಜೆಪಿಯೊಂದಿಗೆ ಅವರು ಅಧಿಕೃತವಾಗಿ ಯಾವುದೇ ನಂಟು ತೋರಿಸಿಕೊಳ್ಳದಿದ್ದರೂ ಇಡೀ ದೇಶದ ಜನರು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಒಪ್ಪಿಕೊಂಡಿರುವುದಕ್ಕೆ 2022ರ ವಿಧಾನಸಭಾ ಚುನಾವಣಾ ಫಲಿತಾಂಶ ಸಾಕ್ಷಿ ಎಂದಿದ್ದರು.