Shailesh Kumar and Karnataka HC
Shailesh Kumar and Karnataka HC 
ಸುದ್ದಿಗಳು

[ಸೌದಿಯಲ್ಲಿ ಮಂಗಳೂರು ನಿವಾಸಿ ಬಂಧನ] ರಿಯಾದ್‌ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿ: ಕೇಂದ್ರಕ್ಕೆ ಹೈಕೋರ್ಟ್‌ ಸೂಚನೆ

Siddesh M S

ಇಸ್ಲಾಂ ನಿಂದನೆ ಮತ್ತು ಸೌದಿ ದೊರೆಯ ವಿರುದ್ಧ ಆಕ್ಷೇಪಾರ್ಹವಾದ ಪೋಸ್ಟ್‌ ಅನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಆರೋಪದಲ್ಲಿ ಸೌದಿ ಅರೇಬಿಯಾದಲ್ಲಿ 15 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಮಂಗಳೂರಿನ ನಿವಾಸಿ ಶೈಲೇಶ್‌ ಕುಮಾರ್‌ ಅವರ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಯದ್ಧೋಪಾದಿಯಲ್ಲಿ ನಡೆಸಿ, ಅದನ್ನು ಸೌದಿ ಅರೇಬಿಯಾದ ರಿಯಾದ್‌ನಲ್ಲಿನ ತೀರ್ಪು ಮರುಪರಿಶೀಲನಾ ಪೀಠದ ಮುಂದೆ ಇಡಬೇಕು ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಆದೇಶಿಸಿದೆ. ಹೀಗೆ ಮಾಡುವುದರಿಂದ ಶೈಲೇಶ್‌ ಮುಗ್ಧತೆ ಸಾಬೀತಾಗಿ, ಬಿಡುಗಡೆ ಹೊಂದಬಹುದು ಎಂಬ ಆಶಯವನ್ನು ಹೈಕೋರ್ಟ್‌ ವ್ಯಕ್ತಪಡಿಸಿದೆ.

ಶೈಲೇಶ್‌ ಕುಮಾರ್‌ ಅವರ ಪತ್ನಿ ಕವಿತಾ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಿಸ್ತೃತವಾಗಿ ನಡೆಸಿತು. ಇದೇ ವೇಳೆ, ವಿದೇಶಿ ನೆಲದಲ್ಲಿ ಭಾರತೀಯ ಪ್ರಜೆಯ ಬದುಕು ಮತ್ತು ಸ್ವಾತಂತ್ರ್ಯವು ಅಪಾಯಕ್ಕೆ ಸಿಲುಕಿದ್ದು, ಇದನ್ನು ಪ್ರತಿಷ್ಠೆಯ ವಿಚಾರವನ್ನಾಗಿ ಮಾಡಿಕೊಳ್ಳದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯವು ಮೌಖಿಕವಾಗಿ ಕಿವಿಮಾತು ಹೇಳಿದೆ.

“ತನಿಖೆಯು ಫೇಸ್‌ಬುಕ್‌ ಖಾತೆಗೆ ಸೀಮಿತವಾಗದೇ, ವಿಸ್ತೃತವಾಗಿರಬೇಕು” ಎಂದು ತನಿಖಾಧಿಕಾರಿಗೆ ನಿರ್ದೇಶಿರುವ ನ್ಯಾಯಾಲಯವು “ಕೇಂದ್ರ ಸರ್ಕಾರವು ಕಾರ್ಯತತ್ಪರವಾಗಿ ಕ್ರಮ ತೆಗೆದುಕೊಂಡಿರುವ ಕುರಿತು ವರದಿ ನೀಡಬೇಕು” ಎಂದು ಆದೇಶಿಸಿದೆ.

“ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್‌ ಪೊಲೀಸರು ವಿಸ್ತೃತ ಸಂಪನ್ಮೂಲಗಳನ್ನು ಒಳಗೊಂಡು ತನಿಖೆ ನಡೆಸಲಿದ್ದು, ವಿದೇಶಾಂಗ ಸಚಿವಾಲಯವು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ನಡೆಸಬೇಕು. ಹೀಗೆ ಮಾಡಿದರೆ ಆತುರದಲ್ಲಿ ಭಾರತೀಯ ಪ್ರಜೆಯ ವಿರುದ್ಧ ಪೂರ್ವಾಗ್ರಹ ಪೀಡಿತ ಕ್ರಮ ಉಂಟಾಗುವುದಿಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

“ಶೈಲೇಶ್‌ಗೆ ವಿಧಿಸಿರುವ ಶಿಕ್ಷೆ ಆದೇಶವು ಸೌದಿಯ ರಿಯಾದ್‌ನಲ್ಲಿರುವ ಮರುಪರಿಶೀಲನಾ ಪೀಠದ ಮುಂದೆ ಹೋಗಲಿದ್ದು, ಸೈಬರ್‌ ಪೊಲೀಸರು ತನಿಖಾ ವರದಿಯನ್ನು ಯುದ್ದೋಪಾದಿಯಲ್ಲಿ ಸಿದ್ಧಪಡಿಸಿ ಅದನ್ನು ಮರುಪರಿಶೀಲನಾ ಪೀಠದ ಮುಂದೆ ಮಂಡಿಸಿದರೆ, ವಶಕ್ಕೆ ಪಡೆಯಲಾಗಿರುವ ಭಾರತೀಯ ಪ್ರಜೆಯ ಮುಗ್ಧತೆಯನ್ನು ಒರೆಗೆ ಹಚ್ಚಿದಂತಾಗುತ್ತದೆ. ಆ ಮೂಲಕ ಅವರು ಬಿಡುಗಡೆ ಹೊಂದಬಹುದು” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

“ಶೈಲೇಶ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಕೇಂದ್ರ ಸರ್ಕಾರದ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ನಡೆಸಿರುವ ಸಂವಹನ ಮತ್ತಿತರ ವಿಚಾರಗಳನ್ನು ಒಳಗೊಂಡ ಅಫಿಡವಿಟ್‌ನಲ್ಲಿ ಗೌಪ್ಯ ಮಾಹಿತಿ ಇರುವುದರಿಂದ ಅದನ್ನು ರಿಜಿಸ್ಟ್ರಿಯು ಮುಚ್ಚಿದ ಲಕೋಟೆಯಲ್ಲಿ ಇಡಬೇಕು” ಎಂದು ನ್ಯಾಯಾಲಯವು ಆದೇಶ ಮಾಡಿದೆ.

“ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿರುವ ವಕೀಲ ಮಧುಕರ್‌ ದೇಶಪಾಂಡೆ ಅವರು 21.6.2023ರ ದಿನಾಂಕ ಹೊಂದಿರುವ ಅಫಿಡವಿಟ್‌ ಸಲ್ಲಿಸಿದ್ದಾರೆ. ವಿದೇಶಾಂಗ ಇಲಾಖೆಯ ಅಧಿಕಾರಿಗಳು ವಿದೇಶಿ ಜೈಲಿನಲ್ಲಿರುವ ಶೈಲೇಶ್‌ ಕುಮಾರ್‌ ಬದುಕು ಮತ್ತು ಸ್ವಾತಂತ್ರ್ಯ ರಕ್ಷಿಸುವ ನಿಟ್ಟಿನಲ್ಲಿ ತೆಗೆದುಕೊಂಡಿರುವ ಕ್ರಮಗಳನ್ನು ವಿವರಿಸಿದ್ದಾರೆ. ಶೈಲೇಶ್‌ ಅವರಿಗೆ 15 ವರ್ಷ ಶಿಕ್ಷೆ ವಿಧಿಸಲಾಗಿದೆ. ಇದರ ಜೊತೆಗೆ ರಾಜತಾಂತ್ರಿಕ ಮಟ್ಟದಲ್ಲಿ ನಡೆದಿರುವ ಸಂವಹನದ ಮಾಹಿತಿಯನ್ನೂ ನೀಡಲಾಗಿದೆ. ರಾಜತಾಂತ್ರಿಕ ಅಧಿಕಾರಿಗಳು ತಕ್ಕ ಮಟ್ಟಿಗಿನ ಕಾಳಜಿ ಮತ್ತು ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಆದರೆ, ಇದೇ ರೀತಿಯ ಪ್ರಕರಣಗಳಲ್ಲಿ, ಅದರಲ್ಲಿಯೂ ವಿಶೇಷವಾಗಿ (ಗೂಢಚಾರಿಕೆ ಆರೋಪದಲ್ಲಿ ಪಾಕಿಸ್ತಾನ ನೆಲೆದಲ್ಲಿ ಬಂಧಿತರಾಗಿದ್ದ) ಕುಲಭೂಷಣ್‌ ಪ್ರಕರಣದಲ್ಲಿ ತೋರಿರುವ ಕಾಳಜಿಯನ್ನು ತೋರಿಲ್ಲ ಎಂಬ ವಾದಕ್ಕೆ ಆಸ್ಪದವಿದೆ” ಎಂದೂ ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

“ಶೈಲೇಶ್‌ ಕುಮಾರ್‌ ಮುಗ್ಧರಾಗಿದ್ದು, ಕೆಲವರು ಕಿಡಿಗೇಡಿತನ ಮಾಡಿ ಅವರನ್ನು ಕಾನೂನಿನ ಬಲೆಯಲ್ಲಿ ಸಿಲುಕಿಸಿದ್ದಾರೆ. ಇದಕ್ಕೆ ಪೂರಕವಾಗಿ ಪ್ರತಿವಾದಿಗಳು ವಾದಿಸಿದ್ದಾರೆ. ರಾಜ್ಯ ಸರ್ಕಾರದ ವಕೀಲರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ತಜ್ಞರನ್ನು ಒಳಗೊಂಡು ತನಿಖೆ ನಡೆಸಲಾಗುವುದು ಎಂದಿದ್ದಾರೆ. ಈ ವಿಚಾರದಲ್ಲಿ ಸತ್ಯ ಹುಡುಕಲು ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ್ದಾರೆ” ಎಂದು ಆದೇಶದಲ್ಲಿ ನ್ಯಾಯಾಲಯ ದಾಖಲಿಸಿದೆ.

“ಸಿಇಎನ್‌ ಠಾಣೆಯ ತನಿಖಾಧಿಕಾರಿಯು ಸತೀಶ್‌ ಅವರು ಮೆಟಾ/ಫೇಸ್‌ಬುಕ್‌ ತನಿಖೆಗೆ ಸಹಕರಿಸಿದೆ ಎಂದು ತಿಳಿಸಿದ್ದು, ಫೇಸ್‌ಬುಕ್‌ ವಕೀಲ ತೇಜಸ್‌ ಕರಿಯಾ ಅದನ್ನೇ ಹೇಳಿದ್ದಾರೆ” ಎಂದು ಪೀಠವು ಆದೇಶದಲ್ಲಿ ಉಲ್ಲೇಖಿಸಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಪಿ ಪಿ ಹೆಗ್ಡೆ ಅವರು ಪೊಲೀಸರು ಶೈಲೇಶ್‌ ಕುಮಾರ್‌ ಫೇಸ್‌ಬುಕ್‌ ಖಾತೆಯ ಸುತ್ತ ಸಮರ್ಥವಾಗಿ ತನಿಖೆ ನಡೆಸಿಲ್ಲ ಎಂದು ಆಕ್ಷೇಪಿಸಿರುವುದನ್ನೂ ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ. ಜುಲೈಗೆ ವಿಚಾರಣೆ ಮುಂದೂಡಲಾಗಿದೆ.