ಸೌದಿಯಲ್ಲಿ ಭಾರತದ ಪ್ರಜೆ ಬಂಧನ: ಡಿಲೀಟ್‌ ಆಗಿರುವ ನಕಲಿ ಖಾತೆ ದತ್ತಾಂಶ ಸಂಗ್ರಹಿಸಲು ಹೈಕೋರ್ಟ್‌ಗೆ ಫೇಸ್‌ಬುಕ್‌ ಭರವಸೆ

“ತನಿಖಾಧಿಕಾರಿಯ ಜೊತೆಗೆ ಮೆಟಾದ ತಾಂತ್ರಿಕ ತಂಡವು ಸಮಾಲೋಚನೆ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಯೋಜನೆಯೊಂದಿಗೆ ಹಾಜರಾಗಲಿದೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.
Karnataka HC and Facebook
Karnataka HC and Facebook

ಸೌದಿ ಅರೇಬಿಯಾದ ದೊರೆ ಮತ್ತು ಇಸ್ಲಾಂ ಕುರಿತು ಆಕ್ಷೇಪಾರ್ಹ ಮಾಹಿತಿ ಪೋಸ್ಟ್‌ ಮಾಡಿದ್ದ ಆರೋಪದ ಮೇಲೆ ಸೌದಿಯಲ್ಲಿ ಬಂಧಿತನಾಗಿರುವ ಭಾರತದ ಪ್ರಜೆಗೆ ಸಂಬಂಧಿಸಿದಂತೆ ಆ ಖಾತೆಯಲ್ಲಿನ ದತ್ತಾಂಶ ತೆಗೆದುಕೊಡಲು ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದು ಮೆಟಾ (ಫೇಸ್‌ಬುಕ್‌ ಸದ್ಯದ ಹೆಸರು) ಕರ್ನಾಟಕ ಹೈಕೋರ್ಟ್‌ಗೆ ಈಚೆಗೆ ಭರವಸೆ ನೀಡಿದೆ. ತಮ್ಮ ಫೇಸ್‌ಬುಕ್‌ ಖಾತೆಯನ್ನು ಅನಾಮಿಕರು ಹ್ಯಾಕ್‌ ಮಾಡಿ ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎನ್ನುವುದು ಬಂಧನದಲ್ಲಿರುವ ಭಾರತದ ಪ್ರಜೆಯ ಆರೋಪವಾಗಿದೆ.

ಮಂಗಳೂರಿನ ಕವಿತಾ ಶೈಲೇಶ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

“ತನಿಖಾಧಿಕಾರಿಯ ಜೊತೆಗೆ ಮೆಟಾದ ತಾಂತ್ರಿಕ ತಂಡವು ಸಮಾಲೋಚನೆ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಯೋಜನೆಯೊಂದಿಗೆ ಹಾಜರಾಗಲಿದೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.

“ದತ್ತಾಂಶ ಪಡೆಯುವ ನಿಟ್ಟಿನಲ್ಲಿ ಅಗತ್ಯವಾದ ಎಲ್ಲವನ್ನೂ ಮೆಟಾ ವೇದಿಕೆಯು ಮಾಡಬೇಕಿದೆ ಎಂಬುದನ್ನು ಸ್ಪಷ್ಟಪಡಿಸಲಾಗುತ್ತಿದ್ದು, ಮೆಟಾದ ಮುಂದೆ ಸಾಮಾನ್ಯವಾಗಿ ಎದುರಾಗುವ ನಿರ್ಬಂಧಗಳಿಂದ ಅದಕ್ಕೆ ವಿನಾಯಿತಿ ಇರುತ್ತದೆ. ಇದಕ್ಕೆ ಈ ನ್ಯಾಯಾಲಯ ರಕ್ಷಣೆ ಒದಗಿಸುತ್ತದೆ” ಎಂದು ಪೀಠ ಸ್ಪಷ್ಟಪಡಿಸಿದೆ.

ಜೂನ್‌ 14ರಂದು ಮಧ್ಯಸ್ಥಿಕೆ ವೇದಿಕೆಯಾದ ಮೆಟಾ ಸೂಕ್ತ ರೀತಿಯಲ್ಲಿ ಸ್ಪಂದಿಸದೇ ಇರುವುದರಿಂದ ತನಿಖೆಗೆ ಅಡ್ಡಿಯಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ವಿಚಾರ ತರಲಾಗಿತ್ತು.

ಇದಕ್ಕೆ ಮೆಟಾ ಪರ ವಕೀಲರು “ಏನು ಮಾಹಿತಿ ಬೇಕು ಎಂಬುದನ್ನು ಪೊಲೀಸರು ತಿಳಿಸಬೇಕು. ಏನು ಅಗತ್ಯವಿದೆ ಎಂಬ ಮಾಹಿತಿ ನೀಡಿದರೆ ಕಂಪೆನಿಯ ತಾಂತ್ರಿಕ ತಂಡವು ಪೊಲೀಸರಿಗೆ ಬಂಧಿತ ವ್ಯಕ್ತಿಗೆ ಸಂಬಂಧಿಸಿದ ಯಾವೆಲ್ಲಾ ಮಾಹಿತಿ ಬೇಕು ಎಂಬುದನ್ನು ತೆಗೆದುಕೊಡಲು ಎಲ್ಲಾ ಪ್ರಯತ್ನ ಮಾಡಲಿದ್ದಾರೆ” ಎಂದು ವಿವರಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚಾರಣೆಯನ್ನು ಜೂನ್‌ 22ಕ್ಕೆ ಮುಂದೂಡಿದೆ.

ಇದಕ್ಕೂ ಮುನ್ನ, ಜೂನ್‌ 12ರಂದು ನ್ಯಾಯಾಲಯವು ವಿದೇಶದ ಜೈಲಿನಲ್ಲಿ ಭಾರತದ ಪ್ರಜೆ ಇರುವಾಗ ಹಾಗೂ ತನ್ನ ಫೇಸ್‌ಬುಕ್‌ ಖಾತೆ ಹ್ಯಾಕ್‌ ಮಾಡಲಾಗಿದೆ ಎಂದು ಅವರು ನಿರ್ದಿಷ್ಟವಾಗಿ ಹೇಳುತ್ತಿದ್ದರೂ ತನಿಖೆ ಏತಕ್ಕಾಗಿ ಇಷ್ಟು ವಿಳಂಬವಾಗಿದೆ ಎಂಬುದನ್ನು ಮಂಗಳೂರು ಪೊಲೀಸ್‌ ಆಯುಕ್ತರು ವಿವರಿಸಬೇಕು ಎಂದು ಆದೇಶಿಸಿತ್ತು.

ಅಲ್ಲದೇ, ಮುಚ್ಚಿದ ಲಕೋಟೆಯಲ್ಲಿ ನೀಡುವ ವರದಿಯ ಜೊತೆಗೆ ವಿದೇಶದ ಜೈಲಿನಲ್ಲಿರುವ ಭಾರತದ ಪ್ರಜೆಯ ಕುರಿತು ಅಂತಾರಾಷ್ಟ್ರೀಯ ಕ್ರಿಮಿನಲ್‌ ಕಾನೂನಿನ ಅನ್ವಯ ನ್ಯಾಯಯುತವಾಗಿ ವಿಚಾರಣೆ ನಡೆದಿದೆಯೇ ಎಂಬುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹೇಳಿಕೆ ನೀಡಬೇಕು ಎಂದು ನಿರ್ದೇಶಿಸಿತ್ತು.

ಮೇ 29ರ ವಿಚಾರಣೆಯಂದು ನ್ಯಾಯಾಲಯವು ಮೂಲ ಅರ್ಜಿಯಲ್ಲಿ ತಿದ್ದುಪಡಿ ಮಾಡಿ, ಮೆಟಾ ಸಂಸ್ಥೆಯನ್ನೂ ಪ್ರತಿವಾದಿಯನ್ನಾಗಿಸಲು ಆದೇಶಿಸಿತ್ತು. ಆನಂತರ ಮೆಟಾ ಸಂಸ್ಥೆಗೆ ನೋಟಿಸ್‌ ಸಹ ಜಾರಿ ಮಾಡಿತ್ತು. ಅಲ್ಲದೇ “ಮೆಟಾವನ್ನು ಹೆಚ್ಚುವರಿ ಪ್ರತಿವಾದಿಯನ್ನಾಗಿ ಮಾಡುವ ಅಗತ್ಯವಿದ್ದು, ಪೊಲೀಸರ ಕೋರಿಕೆಗೆ ಪ್ರತಿಕ್ರಿಯಿಸದಿದ್ದರೆ ಮೆಟಾ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು” ಎಂದು ಆದೇಶದಲ್ಲಿ ದಾಖಲಿಸಿತ್ತು.

Also Read
ಫೇಸ್‌ಬುಕ್ ಭಾರತದ ಮುಖ್ಯಸ್ಥರಿಗೆ ದೆಹಲಿ ಸರ್ಕಾರದ ಸಮಿತಿಯಿಂದ ಸಮನ್ಸ್‌: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಫೇಸ್‌ಬುಕ್

ಪ್ರಕರಣದ ಹಿನ್ನೆಲೆ: ಮಂಗಳೂರಿನ ಕವಿತಾ ಶೈಲೇಶ್‌ ಅವರು ತಮ್ಮ ಪತಿ ಶೈಲೇಶ್‌ ಅವರು ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದು, ಅವರ ಫೇಸ್‌ಬುಕ್‌ ಖಾತೆಯನ್ನು ಅನಾಮಿಕರು ಹ್ಯಾಕ್‌ ಮಾಡಿ ಇಸ್ಲಾಂ ಮತ್ತು ಸೌದಿಯ ದೊರೆಯ ಬಗ್ಗೆ ಆಕ್ಷೇಪಾರ್ಹವಾದ ಪೋಸ್ಟ್‌ ಹಾಕಿದ್ದರು. ಈ ಸಂಬಂಧ ಮಂಗಳೂರಿನಲ್ಲಿ ತಾನು ದೂರು ದಾಖಲಿಸಿದ್ದೇನೆ. ಈ ಮಧ್ಯೆ, ಸೌದಿಯಲ್ಲಿ ಪೊಲೀಸರು ಶೈಲೇಶ್‌ ಅವರನ್ನು ಬಂಧಿಸಿದ್ದಾರೆ ಎನ್ನುವ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ತಾನು ದಾಖಲಿಸಿರುವ ದೂರಿಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ತನಿಖೆ ಆರಂಭಿಸಿದ್ದು, ನಕಲಿ ಖಾತೆ ಸೃಷ್ಟಿಸುವುದಕ್ಕೆ ಸಂಬಂಧಿಸಿದಂತೆ ಮೆಟಾದಿಂದ ಮಾಹಿತಿ ಕೋರಿದ್ದಾರೆ. ಆದರೆ, ಇದುವರೆಗೆ ಮೆಟಾ ಸಂಸ್ಥೆಯು ಪೊಲೀಸರ ಕೋರಿಕೆಗೆ ಪ್ರತಿಕ್ರಿಯಿಸಿಲ್ಲ ಎಂದು ಆಕ್ಷೇಪಿಸಿದ್ದರು.

Related Stories

No stories found.
Kannada Bar & Bench
kannada.barandbench.com