A1
ಸುದ್ದಿಗಳು

ಮಳಲಿ ಮಸೀದಿ ವಿವಾದ: ಮಸೀದಿ ಆಡಳಿತ ಮಂಡಳಿಯ ಎರಡು ಮಧ್ಯಂತರ ಅರ್ಜಿಗಳ ತಿರಸ್ಕರಿಸಿದ ಮಂಗಳೂರು ನ್ಯಾಯಾಲಯ

ಹಿಂದೂ ಪಕ್ಷಕಾರರ ಅರ್ಜಿ ತಿರಸ್ಕರಿಸುವಂತೆ ಕೋರಿ ಮಳಲಿ ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದ ಮೂರು ಮತ್ತು ನಾಲ್ಕನೇ ಅರ್ಜಿಗಳನ್ನು ನ್ಯಾಯಾಧೀಶೆ ನಿಖಿತಾ ಅಕ್ಕಿ ಅವರು ಇಂದು ವಜಾಗೊಳಿಸಿದರು.

Bar & Bench

ಮಂಗಳೂರಿನ ಮಳಲಿಪೇಟೆ ಜುಮ್ಮಾ ಮಸೀದಿಯಲ್ಲಿ ದೇಗುಲ ರಚನೆ ಕಂಡು ಬಂದ ಹಿ ನ್ನೆಲೆಯಲ್ಲಿ ಕಟ್ಟಡ ದುರಸ್ತಿ ಕಾರ್ಯಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಹಿಂದೂ ಪಕ್ಷಕಾರರು ಸಲ್ಲಿಸಿದ್ದ ಅರ್ಜಿ ವಿಚಾರಣಾರ್ಹವಲ್ಲ, ಅದನ್ನು ವಜಾಗೊಳಿಸಬೇಕು ಎಂದು ಕೋರಿದ್ದ ಮಸೀದಿ ಸಮಿತಿಯ ಎರಡು ಮಧ್ಯಂತರ ಅರ್ಜಿಗಳನ್ನು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ.

ಹಿಂದೂ ಪಕ್ಷಕಾರರ ಅರ್ಜಿ ತಿರಸ್ಕರಿಸುವಂತೆ ಕೋರಿ ಮಳಲಿ ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದ ಮೂರು ಮತ್ತು ನಾಲ್ಕನೇ ಅರ್ಜಿಗಳನ್ನು ನ್ಯಾಯಾಧೀಶೆ ನಿಖಿತಾ ಅಕ್ಕಿ ಅವರು ಇಂದು ವಜಾಗೊಳಿಸಿದರು.

ಸಿವಿಲ್‌ ಪ್ರಕ್ರಿಯಾ ಸಂಹಿತೆಯ ಆದೇಶ 7 ನಿಯಮ 11 ರ ಅಡಿಯಲ್ಲಿ ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದ ಈ ಎರಡು ಮಧ್ಯಂತರ ಅರ್ಜಿಗಳಲ್ಲಿ “ಕರ್ನಾಟಕ ಸರ್ಕಾರವು ಜುಲೈ 21, 2016 ರಂದು ಮಸೀದಿಯ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಿದೆ. ಹೀಗಾಗಿ ಪೂಜಾ ಸ್ಥಳ (ವಿಶೇಷ ನಿಯಮಾವಳಿ) ಕಾಯಿದೆಯ ಸೆಕ್ಷನ್‌ 4 (1) ಮತ್ತು (2)ರ ಅಡಿ ಮೊಕದ್ದಮೆ ವಿಚಾರಣಾರ್ಹವಲ್ಲ” ಎಂದು ಕೋರಲಾಗಿತ್ತು.

ಎರಡೂ ಅರ್ಜಿಗಳನ್ನು ತಿರಸ್ಕರಿಸಿದ ನ್ಯಾಯಾಲಯ 2023ರ ಜನವರಿ 8ಕ್ಕೆ ಪ್ರಕರಣವನ್ನು ಮುಂದೂಡಿದೆ. ಅಂದು ತಡೆಯಾಜ್ಞೆ ಕೋರಿ ಫಿರ್ಯಾದಿ ಸಲ್ಲಸಿದ್ದ ಎರಡನೇ ಮಧ್ಯಂತರ ಅರ್ಜಿಯ ವಿಚಾರಣೆ ನಡೆಯಲಿದೆ.

ಹಿನ್ನೆಲೆ

ಮಳಲಿ ಮಸೀದಿ ಜಾಗದಲ್ಲಿ ಅಡ್ವೊಕೇಟ್‌ ಕಮಿಷನರ್ ಅವರ ಮೂಲಕ ಸಮೀಕ್ಷೆ ನಡೆಸಲು ಆದೇಶಿಸಬೇಕು ಎಂದು ಅರ್ಜಿದಾರರಾದ ಟಿ ಎ ಧನಂಜಯ್‌ ಹಾಗೂ ಬಿ ಎ ಮನೋಜ್‌ ಕುಮಾರ್‌ ಕೋರಿದ್ದರು. ಇದಕ್ಕೆ ಮಸೀದಿ ನಿರ್ವಹಣಾ ಮಂಡಳಿಯಿಂದ ಆಕ್ಷೇಪ ವ್ಯಕ್ತವಾಗಿತ್ತು. ಈ ರೀತಿ ಆದೇಶ ನೀಡಲು ವಿಚಾರಣಾ ನ್ಯಾಯಾಲಯಕ್ಕೆ ಅಧಿಕಾರ ಇಲ್ಲ. ಹೀಗಾಗಿ ಅರ್ಜಿಯನ್ನು ವಜಾ ಮಾಡಬೇಕು ಎಂದು ಅದು ವಿನಂತಿಸಿತ್ತು.

ಈ ಹಿಂದಿನ ವಿಚಾರಣೆ ವೇಳೆ ಮಸೀದಿ ಪರ ವಾದ ಮಂಡಿಸಿದ್ದ ವಕೀಲ ಎಂ ಪಿ ಶೆಣೈ ಅವರು “ಮಳಲಿಪೇಟೆಯಲ್ಲಿರುವುದು ಮಸೀದಿ ಎಂದು ಮತ್ತೆ ಸಾಬೀತುಪಡಿಸುವ ಅಗತ್ಯವಿಲ್ಲ. ಸರ್ಕಾರಿ ವಕ್ಫ್‌ ದಾಖಲೆ ಪ್ರಕಾರ ಅಲ್ಲಿ ಮಸೀದಿ ಇರುವುದು ದಾಖಲಾಗಿದೆ. ವಕ್ಫ್‌ ಕಾನೂನಿನ ಪ್ರಕಾರ ಮಸೀದಿ ಎಂಬುದು ಪ್ರಾರ್ಥನಾ ಸ್ಥಳ. ಅಂತಹ ಸ್ಥಳವನ್ನು ನಿಯಮಾನುಸಾರ ವಕ್ಫ್‌ ಆಸ್ತಿ ಎಂದು ಕರೆಯುತ್ತಾರೆ" ಎಂಬುದಾಗಿ ವಾದಿಸಿದ್ದರು.

ಆದರೆ ಹಿಂದೂ ಪಕ್ಷಕಾರರ ಪರ ವಾದ ಮಂಡಿಸಿದ್ದ ಚಿದಾನಂದ ಎಂ ಕೆದಿಲಾಯ "ಮಳಲಿ ಮಸೀದಿಯು ಐತಿಹಾಸಿಕ ಸ್ಮಾರಕವೋ ಮಸೀದಿಯೋ ಎಂಬುದನ್ನು ವಕ್ಫ್‌ ನ್ಯಾಯಮಂಡಳಿ ನಿರ್ಧರಿಸಲು ಸಾಧ್ಯವಿಲ್ಲ. ಹೀಗಾಗಿ ವಿವಾದವನ್ನು ಸಿವಿಲ್‌ ನ್ಯಾಯಾಲಯ ಕೂಡಲೇ ತೀರ್ಮಾನಿಸಬೇಕು" ಎಂದಿದ್ದರು.

ಎರಡೂ ಕಡೆಯ ವಾದಗಳನ್ನು ಆಲಿಸಿದ್ದ ನ್ಯಾಯಾಲಯ ಆಗಸ್ಟ್‌ 27ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿತ್ತು. ಆದರೆ ಅದನ್ನು ಅಕ್ಟೋಬರ್‌ 17ಕ್ಕೆ ಮುಂದೂಡಿತ್ತು. ಅಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ ನ. 9ಕ್ಕೆ ಆದೇಶ ನೀಡುವುದಾಗಿ ತಿಳಿಸಿತ್ತು.