ದಕ್ಷಿಣ ಕನ್ನಡ ಜಿಲ್ಲೆಯ ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ಮೂಲ ದಾವೆಯ ಸಿಂಧುತ್ವದ ಕುರಿತು ವಿಚಾರಣೆ ನಡೆಸುತ್ತಿರುವ ಮಂಗಳೂರಿನ ಸಿವಿಲ್ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮನವಿಗೆ ಸಂಬಂಧಿಸಿದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ಕಾಯ್ದಿರಿಸಿದೆ.
ಮಂಗಳೂರಿನ ತೆಂಕಳೈಪಾಡಿ ಗ್ರಾಮದ ಧನಂಜಯ್ ಹಾಗೂ ಬಡುಗಳೈಪಾಡಿ ಗ್ರಾಮದ ಮನೋಜ್ ಕುಮಾರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ಅವರ ನೇತೃತ್ವದ ಏಕ ಸದಸ್ಯ ಪೀಠವು ನಡೆಸಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮೂಲ ದಾವೆಯ ಸಿಂಧುತ್ವದ ಕುರಿತು ವಾದ-ಪ್ರತಿವಾದ ಆಲಿಸಿದರೂ, ಯಾವುದೇ ಆದೇಶ ಹೊರಡಿಸಬಾರದು ಎಂದು ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ಜೂನ್ 13ರಂದು ನೀಡಿರುವ ಮಧ್ಯಂತರ ಆದೇಶ ಮುಂದುವರಿಯಲಿದೆ ಎಂದು ಪೀಠ ಸ್ಪಷ್ಟಪಡಿಸಿದೆ.
ಇದಕ್ಕೂ ಮುನ್ನ ಮಸೀದಿಯ ಅಧ್ಯಕ್ಷರ ಪರ ಹಿರಿಯ ವಕೀಲ ಜಯಕುಮಾರ್ ಎಸ್. ಪಾಟೀಲ್ ಅವರು “ಮೂಲ ದಾವೆಯನ್ನು ಆಲಿಸಲು ವಿಚಾರಣಾಧೀನ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ನಿರ್ಧಾರವಾಗುವ ಮೊದಲು ಕಮಿಷನರ್ ವರದಿ ಅಗತ್ಯವಿಲ್ಲ. ಒಂದು ವೇಳೆ, ಮೊದಲು ಕಮಿಷನರ್ ನೇಮಿಸಿ, ವರದಿ ಬಂದ ನಂತರ ದಾವೆಯ ಸಿಂಧುತ್ವದ ಬಗ್ಗೆ ವಿಚಾರಣೆ ನಡೆದು ವ್ಯತಿರಿಕ್ತ ತೀರ್ಪು ಬಂದರೆ, ಕಮಿಷನರ್ ನೇಮಕ ಮತ್ತವರ ವರದಿ ಎರಡಕ್ಕೂ ಮಾನ್ಯತೆ ಇರುವುದಿಲ್ಲ. ಆದ್ದರಿಂದ, ಮೊದಲು ಮೂಲ ದಾವೆಯ ಸಿಂಧುತ್ವ ನಿರ್ಧಾರವಾಗಬೇಕು” ಎಂದರು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅವರು “ಸ್ಥಳ ಪರಿಶೀಲನೆ ನಡೆದು ಮಾಹಿತಿಗಳನ್ನು ವೈಜ್ಞಾನಿಕವಾಗಿ ಪಡೆದುಕೊಂಡರೆ ಮಾತ್ರ ಕಟ್ಟಡದ ಇತಿಹಾಸ ಮತ್ತು ಪುರಾತನತೆ ಗೊತ್ತಾಗುತ್ತದೆ. ಅಸಲಿ ದಾವೆ ಮತ್ತು ಸ್ಥಳ ಪರಿಶೀಲನೆ ವಿಚಾರ ಬಂದಾಗ ಮೊದಲು ಅಸಲಿ ದಾವೆ ಅರ್ಜಿಗೆ ಮನ್ನಣೆ ಕೊಡಬೇಕೋ ಅಥವಾ ಸ್ಥಳ ಪರಿಶೀಲನೆಗೆ ಮಾನ್ಯತೆ ನೀಡಬೇಕೋ ಎಂದು ಕಾನೂನಿನಲ್ಲಿ ನಿರ್ದಿಷ್ಠವಾಗಿ ಹೇಳಲಾಗಿಲ್ಲ. ವೈಜ್ಞಾನಿಕ ವರದಿಯಿಂದ ಇದಕ್ಕೆ ಉತ್ತರ ಸಿಗಲಿದೆ. ಇಲ್ಲಿ ಜ್ಞಾನವಾಪಿ ಮಸೀದಿ ಪ್ರಕರಣ ಅನ್ವಯವಾಗುತ್ತದೆ. ಈ ಅಂಶಗಳನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿಲ್ಲ ಎಂದು ಪೀಠಕ್ಕೆ ವಿವರಿಸಿದರು.
ಪ್ರಕರಣದ ಹಿನ್ನೆಲೆ: ಮಳಲಿ ಮಸೀದಿ ನವೀಕರಣ ಕಾಮಗಾರಿಯ ವೇಳೆ ದೇವಾಲಯ ಮಾದರಿ ರಚನೆ ಪತ್ತೆಯಾಗಿದೆ ಎನ್ನಲಾಗಿದ್ದು, ಆ ರಚನೆಯನ್ನು ಕೆಡವದಂತೆ ನಿರ್ಬಂಧ ವಿಧಿಸುವಂತೆ ಕೋರಿ ಧನಂಜಯ್ ಹಾಗೂ ಮನೋಜ್ ಕುಮಾರ್ ಸಿವಿಲ್ ನ್ಯಾಯಾಲಯಕ್ಕೆ ದಾವೆ ಹೂಡಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್, ರಚನೆ ತೆರವುಗೊಳಿಸದಂತೆ ಪ್ರತಿಬಂಧಕಾಜ್ಞೆ ಹೊರಡಿಸಿತ್ತು. ಈ ಮಧ್ಯೆ ಮಸೀದಿಯ ಆಡಳಿತ ಮಂಡಳಿ ಮಧ್ಯಂತರ ಅರ್ಜಿ ಸಲ್ಲಿಸಿ, ವಿವಾದಿತ ಸ್ಥಳ ವಕ್ಫ್ ಆಸ್ತಿಯಾಗಿದೆ. ಜತೆಗೆ, ಸಾರ್ವಜನಿಕ ಪೂಜಾ ಸ್ಥಳ ಕಾಯ್ದೆಯ ಅಡಿಯಲ್ಲಿ ಅಸಲು ದಾವೆ ವಿಚಾರಣಾ ಮಾನ್ಯತೆ ಹೊಂದಿಲ್ಲ ಎಂದು ವಾದಿಸಿದ್ದರು. ಮತ್ತೊಂದೆಡೆ, ಮೂಲ ದಾವೆದಾರರೂ ಮಧ್ಯಂತರ ಅರ್ಜಿ ಸಲ್ಲಿಸಿ, ಮೊದಲು ಕಮಿಷನರ್ ಒಬ್ಬರನ್ನು ನೇಮಕ ಮಾಡಿ ಸ್ಥಳ ಪರಿಶೀಲನೆ ನಡೆಸುವಂತೆ ಕೋರಿದ್ದರು. ಆದರೆ, ಸಿವಿಲ್ ನ್ಯಾಯಾಲಯ ಮೊದಲು ದಾವೆಯ ಸಿಂಧುತ್ವದ ಕುರಿತು ವಿಚಾರಣೆ ನಡೆಸುತ್ತಿದೆ. ಇದರಿಂದ, ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.