ಸುದ್ದಿಗಳು

ಮಳಲಿ ಮಸೀದಿ ಸ್ಮಾರಕವೆನ್ನಲು ಕೇಂದ್ರ ನೋಟಿಫೈ ಮಾಡಿಲ್ಲಎಂದು ಮುಸ್ಲಿಂ ಪಕ್ಷಕಾರರ ವಾದ; ನಾಳೆ ವಿಚಾರಣೆ

Bar & Bench

ಮಳಲಿ ಮಸೀದಿ ವಿವಾದದ ವಿಚಾರಣೆ ನಾಳೆ (ಜೂ 14) ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯದಲ್ಲಿ ಮುಂದುವರೆಯಲಿದೆ.

ಕಳೆದ ಶುಕ್ರವಾರ (ಜೂ 10) ನಡೆದಿದ್ದ ವಿಚಾರಣೆ ವೇಳೆ ಮಸೀದಿ ಪರ ವಕೀಲ ಎಂ ಪಿ ಶೆಣೈ ವಾದ ಮಂಡಿಸಿ “ಮಳಲಿಪೇಟೆಯಲ್ಲಿರುವುದು ಮಸೀದಿ ಎಂದು ಮತ್ತೆ ಸಾಬೀತುಪಡಿಸುವ ಅಗತ್ಯವಿಲ್ಲ. ಸರ್ಕಾರಿ ವಕ್ಫ್‌ ದಾಖಲೆ ಪ್ರಕಾರ ಅಲ್ಲಿ ಮಸೀದಿ ಇರುವುದು ದಾಖಲಾಗಿದೆ. ವಕ್ಫ್‌ ಕಾನೂನಿನ ಪ್ರಕಾರ ಮಸೀದಿ ಎಂಬುದು ಪ್ರಾರ್ಥನಾ ಸ್ಥಳ. ಅಂತಹ ಸ್ಥಳವನ್ನು ನಿಯಮಾನುಸಾರ ವಕ್ಫ್‌ ಆಸ್ತಿ ಎಂದು ಕರೆಯುತ್ತಾರೆ" ಎಂಬುದಾಗಿ ವಾದಿಸಿದ್ದರು.

“ಜಾಗವೊಂದನ್ನು ಸ್ಮಾರಕ ಎಂದು ಕರೆಯಲು ಕೇಂದ್ರ ಸರ್ಕಾರ ನೋಟಿಫೈ ಮಾಡಿರಬೇಕು. ಆದರೆ ಮಳಲಿ ಮಸೀದಿ ಕುರಿತು ಈ ರೀತಿಯ ಯಾವುದೇ ಗೆಜೆಟೆಡ್‌ ನೋಟಿಫಿಕೇಷನ್‌ ಆಗಿಲ್ಲ. ಹೀಗಾಗಿ ಅದನ್ನು ಐತಿಹಾಸಿಕ ಸ್ಮಾರಕ ಎನ್ನಲಾಗದು. ಅದಲ್ಲದೇ ಇದು ಸ್ಮಾರಕವೋ ಅಲ್ಲವೋ ಎಂದು ನಿರ್ಧರಿಸುವುದು ಸಿವಿಲ್‌ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಅರ್ಜಿಯನ್ನು ವಜಾಗೊಳಿಸಬೇಕು" ಎಂದು ನ್ಯಾಯಾಧೀಶೆ ಎಚ್‌ ಸುಜಾತಾ ಅವರನ್ನು ವಕೀಲರು ಕೋರಿದ್ದರು.

ಈ ವಾದಕ್ಕೆ ಪ್ರತಿಕ್ರಿಯೆ ನೀಡಲು ಹಿಂದೂ ಪಕ್ಷಕಾರರ ಪರ ವಕೀಲ ಚಿದಾನಂದ ಎಂ ಕೆದಿಲಾಯ ಅವರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಮಂಗಳವಾರಕ್ಕೆ ಪ್ರಕರಣ ಮುಂದೂಡಿತ್ತು.