A1
ಸುದ್ದಿಗಳು

ಮಳಲಿ ಮಸೀದಿ ಪ್ರಕರಣ ಕುರಿತ ಆದೇಶ ನವೆಂಬರ್‌ 9ಕ್ಕೆ: ಮಂಗಳೂರು ನ್ಯಾಯಾಲಯ

ನ್ಯಾಯಾಲಯಕ್ಕೆ ಪ್ರಕರಣದ ವಿಚಾರಣೆ ನಡೆಸುವ ಅಧಿಕಾರ ವ್ಯಾಪ್ತಿ ಇದೆಯೇ ಎಂಬ ಕುರಿತು ಇಂದು ತೀರ್ಪು ನೀಡಬೇಕಿದ್ದ ಕೋರ್ಟ್‌, ತನ್ನ ಆದೇಶ ಪ್ರಕಟಣೆಯನ್ನು ನವೆಂಬರ್‌ 9ಕ್ಕೆಮುಂದೂಡಿದೆ.

Bar & Bench

ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ನವೆಂಬರ್‌  9ಕ್ಕೆ ಆದೇಶ ಪ್ರಕಟಿಸುವುದಾಗಿ ಸೋಮವಾರ ತಿಳಿಸಿದೆ.

ನ್ಯಾಯಾಲಯಕ್ಕೆ ಪ್ರಕರಣದ ವಿಚಾರಣೆ ನಡೆಸುವ ಅಧಿಕಾರ ವ್ಯಾಪ್ತಿ ಇದೆಯೇ ಎಂಬ ಕುರಿತು ಇಂದು ತೀರ್ಪು ನೀಡಬೇಕಿದ್ದ ಕೋರ್ಟ್‌, ತನ್ನ ಆದೇಶದ ಪ್ರಕಟಣೆಯನ್ನು ನವೆಂಬರ್‌  9ಕ್ಕೆಮುಂದೂಡಿದೆ. ಅಲ್ಲಿಯವರೆಗೆ ಕಟ್ಟಡಕ್ಕೆ ಸಂಬಂಧಿಸಿದಂತೆ ಯಥಸ್ಥಿತಿ ಕಾಯ್ದುಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.

ಮಳಲಿ ಮಸೀದಿ ಜಾಗದಲ್ಲಿ ಅಡ್ವೊಕೇಟ್‌ ಕಮಿಷನರ್ ಅವರ ಮೂಲಕ ಸಮೀಕ್ಷೆ ನಡೆಸಲು ಆದೇಶಿಸಬೇಕು ಎಂದು ಅರ್ಜಿದಾರರಾದ ಟಿ ಎ ಧನಂಜಯ್‌ ಹಾಗೂ ಬಿ ಎ ಮನೋಜ್‌ ಕುಮಾರ್‌ ಕೋರಿದ್ದರು. ಇದಕ್ಕೆ ಮಸೀದಿ ನಿರ್ವಹಣಾ ಮಂಡಳಿಯಿಂದ ಆಕ್ಷೇಪ ವ್ಯಕ್ತವಾಗಿತ್ತು. ಈ ರೀತಿ ಆದೇಶ ನೀಡಲು ವಿಚಾರಣಾ ನ್ಯಾಯಾಲಯಕ್ಕೆ ಅಧಿಕಾರ ಇಲ್ಲ. ಹೀಗಾಗಿ ಅರ್ಜಿಯನ್ನು ವಜಾ ಮಾಡಬೇಕು ಎಂದು ಅದು ವಿನಂತಿಸಿತ್ತು.

ಈ ಹಿಂದಿನ ವಿಚಾರಣೆ ವೇಳೆ ಮಸೀದಿ ಪರ ವಾದ ಮಂಡಿಸಿದ್ದ ವಕೀಲ ಎಂ ಪಿ ಶೆಣೈ ಅವರು “ಮಳಲಿಪೇಟೆಯಲ್ಲಿರುವುದು ಮಸೀದಿ ಎಂದು ಮತ್ತೆ ಸಾಬೀತುಪಡಿಸುವ ಅಗತ್ಯವಿಲ್ಲ. ಸರ್ಕಾರಿ ವಕ್ಫ್‌ ದಾಖಲೆ ಪ್ರಕಾರ ಅಲ್ಲಿ ಮಸೀದಿ ಇರುವುದು ದಾಖಲಾಗಿದೆ. ವಕ್ಫ್‌ ಕಾನೂನಿನ ಪ್ರಕಾರ ಮಸೀದಿ ಎಂಬುದು ಪ್ರಾರ್ಥನಾ ಸ್ಥಳ. ಅಂತಹ ಸ್ಥಳವನ್ನು ನಿಯಮಾನುಸಾರ ವಕ್ಫ್‌ ಆಸ್ತಿ ಎಂದು ಕರೆಯುತ್ತಾರೆ" ಎಂಬುದಾಗಿ ವಾದಿಸಿದ್ದರು.

ಆದರೆ ಹಿಂದೂ ಪಕ್ಷಕಾರರ ಪರ ವಾದ ಮಂಡಿಸಿದ್ದ ಚಿದಾನಂದ ಎಂ ಕೆದಿಲಾಯ "ಮಳಲಿ ಮಸೀದಿಯು ಐತಿಹಾಸಿಕ ಸ್ಮಾರಕವೋ ಮಸೀದಿಯೋ ಎಂಬುದನ್ನು ವಕ್ಫ್‌ ನ್ಯಾಯಮಂಡಳಿ ನಿರ್ಧರಿಸಲು ಸಾಧ್ಯವಿಲ್ಲ. ಹೀಗಾಗಿ ವಿವಾದವನ್ನು ಸಿವಿಲ್‌ ನ್ಯಾಯಾಲಯ ಕೂಡಲೇ ತೀರ್ಮಾನಿಸಬೇಕು" ಎಂದಿದ್ದರು.

ಎರಡೂ ಕಡೆಯ ವಾದಗಳನ್ನು ಆಲಿಸಿದ್ದ ನ್ಯಾಯಾಲಯ ಆಗಸ್ಟ್‌ 27ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿತ್ತು. ಆದರೆ ಅದನ್ನು ಇಂದಿಗೆ ಮುಂದೂಡಿತ್ತು. ಇಂದಿನ ಕಲಾಪದ ವೇಳೆ ನ್ಯಾಯಾಲಯ ನ. 9ಕ್ಕೆ ಆದೇಶ ನೀಡುವುದಾಗಿ ತಿಳಿಸಿದೆ.