ಸುದ್ದಿಗಳು

ಧರ್ಮಸ್ಥಳ ಪ್ರಕರಣ: ಸಾಕ್ಷಿ ದೂರುನಾಗಿದ್ದ ಆರೋಪಿ ಚಿನ್ನನಿಗೆ ಜಾಮೀನು ಮಂಜೂರು ಮಾಡಿದ ಮಂಗಳೂರು ನ್ಯಾಯಾಲಯ

ಸಾಮಾಜಿಕ, ವಿದ್ಯುನ್ಮಾನ, ಮುದ್ರಣ ಸೇರಿದಂತೆ ಯಾವುದೇ ಮಾಧ್ಯಮಗಳಿಗೆ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಸಾಮೂಹಿಕ ಹೂಳುವಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂದರ್ಶನ, ಹೇಳಿಕೆ ನೀಡಬಾರದು ಎಂಬುದು ಸೇರಿ 12 ಷರತ್ತುಗಳನ್ನು ವಿಧಿಸಿರುವ ನ್ಯಾಯಾಲಯ.

Bar & Bench

ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂಳಿರುವುದಾಗಿ ಹೇಳಿಕೆ ನೀಡಿದ್ದ ಹಾಗೂ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಗೆ ಕಾರಣನಾಗಿ ಆನಂತರ ಆರೋಪಿಯಾಗಿ ಬಂಧಿತನಾಗಿದ್ದ ಸಿ ಎನ್‌ ಚಿನ್ನ ಅಲಿಯಾಸ್‌ ಚಿನ್ನಯ್ಯನಿಗೆ ಮಂಗಳೂರಿನ ಜಿಲ್ಲಾ ಸತ್ರ ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿದೆ.

ಆಗಸ್ಟ್‌ 23ರಂದು ಎಸ್‌ಐಟಿ ಅಧಿಕಾರಿಗಳು ಚಿನ್ನನನ್ನು ಬಂಧಿಸಿದ್ದರು. ಸಾಮಾಜಿಕ ಮಾಧ್ಯಮ, ವಿದ್ಯುನ್ಮಾನ ಮತ್ತು ಮುದ್ರಣ ಸೇರಿದಂತೆ ಯಾವುದೇ ಮಾಧ್ಯಮಕ್ಕೆ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಸಾಮೂಹಿಕ ಹೂಳುವಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂದರ್ಶನ ಅಥವಾ ಹೇಳಿಕೆ ನೀಡಬಾರದು ಎಂಬುದು ಸೇರಿ 12 ಷರತ್ತುಗಳನ್ನು ವಿಧಿಸಿ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ ಅವರು ಜಾಮೀನು ಮಂಜೂರು ಮಾಡಿದ್ದಾರೆ.

ಅರ್ಜಿದಾರ ಚಿನ್ನನ ಜಾಮೀನು ಅರ್ಜಿ ಪುರಸ್ಕರಿಸಲಾಗಿದ್ದು, ಒಂದು ಲಕ್ಷ ಮೌಲ್ಯದ ಬಾಂಡ್‌ ಮತ್ತು ಇಬ್ಬರ ಭದ್ರತೆ ಒದಗಿಸಬೇಕು. ಇಂಥದ್ದೇ ಅಪರಾಧದಲ್ಲಿ ಭಾಗಿಯಾಗುವಂತಿಲ್ಲ. ನಾಪತ್ತೆಯಾಗ ಕೂಡದು, ಬೆದರಿಕೆ, ಆಮಿಷ ಒಡ್ಡುವ ಮೂಲಕ ಪ್ರಾಸಿಕ್ಯೂಷನ್‌ ಸಾಕ್ಷಿ ತಿರುಚುವಂತಿಲ್ಲ, ಪ್ರಾಸಿಕ್ಯೂಷನ್‌ ಸಾಕ್ಷಿ ನಾಶಪಡಿಸಕೂಡದು, ತನಿಖಾಧಿಕಾರಿಗೆ ಲಭ್ಯವಾಗಬೇಕು ಮತ್ತು ಅಗತ್ಯಬಿದ್ದಾಗ ಅವರಿಗೆ ಸಹಕರಿಸಬೇಕು, ವಿನಾಯಿತಿ ನೀಡದ ಹೊರತು ಸಕ್ಷಮ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಯ ಎಲ್ಲಾ ದಿನ ಹಾಜರಿರಬೇಕು, ವೈಯಕ್ತಿಕ ಬಾಂಡ್ ನೀಡುವಾಗ ವಿಳಾಸಕ್ಕೆ ಸಂಬಂಧಿಸಿದಂತೆ ಮತದಾರರ ಗುರುತಿನ ಚೀಟಿ ಅಥವಾ ಆಧಾರ್‌ ಕಾರ್ಡ್‌ ಹಾಜರುಪಡಿಸಬೇಕು ಎಂದು ಷರತ್ತು ವಿಧಿಸಲಾಗಿದೆ.

ಮುಂದುವರೆದು, ತಾನು ವಾಸವಿರುವ ಮನೆಯ ವಿಳಾಸವನ್ನು ತಿಳಿಸಬೇಕು ಮತ್ತು ಬದಲಾವಣೆ ಮಾಡಿದರೆ ಅದನ್ನೂ ನ್ಯಾಯಾಲಯಕ್ಕೆ ತಿಳಿಸಬೇಕು, ಚಿನ್ನ ತನ್ನ ಮೊಬೈಲ್‌ ಮತ್ತು ವಾಟ್ಸಾಪ್‌ ನಂಬರ್‌ ಮತ್ತು ಇಮೇಲ್‌ ಐಡಿ (ಇದ್ದರೆ) ಮಾಹಿತಿ ನೀಡಬೇಕು, ಅನುಮತಿ ಇಲ್ಲದೇ ಸಕ್ಷಮ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಹೋಗುವಂತಿಲ್ಲ, ಪ್ರಕರಣದ ಸಂಬಂಧ ತನಿಖಾಧಿಕಾರಿಯು ಆರೋಪ ಪಟ್ಟಿ ಸಲ್ಲಿಸುವವರೆಗೆ ಬಿಡುಗಡೆಯಾದ ದಿನದಿಂದ ದಿನಬಿಟ್ಟು ದಿನ ಸಂಬಂಧಿತ ಪೊಲೀಸ್‌ ಠಾಣೆಯಲ್ಲಿ ಹಾಜರಾತಿ ಹಾಕಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

ಪ್ರಕರಣದ ಹಿನ್ನೆಲೆ: ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿದ್ದಾಗ ಅನೇಕ ಶವಗಳನ್ನು ಹೂಳಿರುವುದಾಗಿ ಹೇಳಿದ್ದ ಚಿನ್ನ ಅಲಿಯಾಸ್‌ ಚಿನ್ನಯ್ಯ, ತನ್ನ ಆರೋಪಕ್ಕೆ ಪೂರಕವಾಗಿ ಕೆಲವು ಮೂಳೆ ಮತ್ತು ತಲೆಬುರುಡೆಯನ್ನು ತನಿಖಾಧಿಕಾರಿಗೆ ಒಪ್ಪಿಸಿದ್ದ.

ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದೆ ಹಲವು ಅಪರಾಧ ಕೃತ್ಯಗಳು ನಡೆದಿವೆ. ನನಗೆ ಜೀವ ಬೆದರಿಕೆ ಒಡ್ಡಿ, ಈ ಅಪರಾಧ ಕೃತ್ಯಗಳ ಮೃತದೇಹಗಳನ್ನು ರಹಸ್ಯವಾಗಿ ವಿಲೇವಾರಿ ಮಾಡಿಸಿದ್ದಾರೆ ಎಂದು ಚಿನ್ನಯ್ಯ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಹಾಗೂ ಧರ್ಮಸ್ಥಳ ಪೊಲೀಸ್‌ ಠಾಣೆಗೆ ಜುಲೈ 3ರಂದು ದೂರು ನೀಡಿದ್ದ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಜುಲೈ 4ರಂದು ಬಿಎನ್‌ಎಸ್‌ ಸೆಕ್ಷನ್‌ 211(ಎ) ಅಡಿ ಪ್ರಕರಣ ದಾಖಲಿಸಲಾಗಿತ್ತು. ಜುಲೈ 11ರಂದು ಬೆಳ್ತಂಗಡಿ ನ್ಯಾಯಾಲಯದಲ್ಲಿ ಚಿನ್ನ ತನ್ನ ಹೇಳಿಕೆ ದಾಖಲಿಸಿದ್ದ.

ಈ ನಡುವೆ ಚಿನ್ನ ತೋರಿದ ಹಲವು ಜಾಗಗಳಲ್ಲಿ ಎಸ್‌ಐಟಿ ಅಧಿಕಾರಿಗಳು ಅಗೆದು ಪರಿಶೀಲನೆ ನಡೆಸಿದ್ದರು. ಎರಡು ಕಡೆ ಅಸ್ಥಿಪಂಜರದ ಅವಶೇಷಗಳು ಸಿಕ್ಕಿದ್ದು, ಅವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಚಿನ್ನನಿಗೆ ಸಾಕ್ಷಿ ಸಂರಕ್ಷಣಾ ಕಾಯಿದೆ ಸಂರಕ್ಷಣೆ ಒದಗಿಸಲಾಗಿತ್ತು. ಚಿನ್ನನೇ ಪ್ರಕರಣದ ದಿಕ್ಕುತಪ್ಪಿಸುತ್ತಿದ್ದಾನೆ ಎಂದು ಸಂಶಯಪಟ್ಟಿದ್ದ ಅಧಿಕಾರಿಗಳು ಆತನನ್ನೇ ಬಂಧಿಸಿ, ಪ್ರಕರಣವನ್ನು ಬಯಲಿಗೆ ಎಳೆದಿದ್ದರು.

ಸೌಜನ್ಯ ಕೊಲೆ ಪ್ರಕರಣದಲ್ಲಿ ಮುಂಚೂಣಿ ಹೋರಾಟಗಾರರಾಗಿದ್ದ ಮಹೇಶ್‌ ತಿಮರೋಡಿ, ಗಿರೀಶ್‌ ಮಟ್ಟಣ್ಣನವರ್‌, ವಿಠಲಗೌಡ, ಟಿ ಜಯಂತ್‌ ಅವರನ್ನೂ ಇದೇ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಎಸ್‌ಐಟಿಯು ತನಿಖೆ ನಡೆಸುತ್ತಿದೆ.