High Court of Manipur at Imphal
High Court of Manipur at Imphal Manipur HC website
ಸುದ್ದಿಗಳು

ಹಿಂಸಾಚಾರ ಮುಕ್ತ ಪ್ರದೇಶಗಳಲ್ಲಿ ಮೊಬೈಲ್ ಅಂತರ್ಜಾಲ ನಿಷೇಧ ತೆಗೆದುಹಾಕುವಂತೆ ಮಣಿಪುರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

Bar & Bench

ಹಿಂಸಾಚಾರ ತಟ್ಟದೆ ಇರುವ ಜಿಲ್ಲಾ ಕೇಂದ್ರಗಳಲ್ಲಿ ಪ್ರಾಯೋಗಿಕವಾಗಿ ಮೊಬೈಲ್‌ ಟವರ್‌ಗಳ ಪುನರಾರಂಭಕ್ಕೆ ಮಣಿಪುರ ಹೈಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ [ಅರಿಬಮ್ ಧನಂಜಯ್ ಶರ್ಮಾ ಮತ್ತಿತರರು ಹಾಗೂ ಮಣಿಪುರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಒಮ್ಮೆ ಹಿಂಸಾಚಾರ ಮುಕ್ತ ಪ್ರದೇಶಗಳಲ್ಲಿ ಮೊಬೈಲ್‌ ಟವರ್‌ಗಳ ಪುನರಾರಂಭಿಸಿದ ನಂತರ ಕಾನೂನು ಮತ್ತು ಸುವ್ಯವಸ್ಥೆ ಅನುವು ಮಾಡುವುದಾದರೆ ಈ ಸೇವೆಯನ್ನು ಇತರೆ ಪ್ರದೇಶಗಳಿಗೆ ವಿಸ್ತರಿಸುವಂತೆಯೂ ಮುಖ್ಯ ನ್ಯಾಯಮೂರ್ತಿ ಸಿದ್ಧಾರ್ಥ್ ಮೃದುಲ್ ಮತ್ತು ನ್ಯಾಯಮೂರ್ತಿ ಗೊಲ್ಮೆಯ್ ಗೈಫುಲ್‌ಶಿಲು ಕಬುಯಿ ಅವರಿದ್ದ ವಿಭಾಗೀಯ ಪೀಠ ಸೂಚಿಸಿದೆ.

ರಾಜ್ಯದಲ್ಲಿ ಮೊಬೈಲ್ ಇಂಟರ್ನೆಟ್ ನಿಷೇಧವನ್ನು ನವೆಂಬರ್ 8 ರವರೆಗೆ ವಿಸ್ತರಿಸಿ ಮಣಿಪುರ ರಾಜ್ಯ ಗೃಹ ಆಯುಕ್ತರು  ಭಾನುವಾರ ಆದೇಶ ಹೊರಡಿಸಿದ್ದರು. ಹಿಂಸಾಚಾರ ತಟ್ಟದೆ ಇರುವ ಜಿಲ್ಲಾ ಕೇಂದ್ರಗಳಲ್ಲಿ ಪ್ರಾಯೋಗಿಕವಾಗಿ ಮೊಬೈಲ್ ಟವರ್‌ಗಳನ್ನು ಪುನರಾರಂಭಿಸಲಾಗುವುದು ಎಂದು ಕೂಡ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿತ್ತು.

ಮಣಿಪುರ ಸರ್ಕಾರದ ಪರ ವಿಶೇಷ ವಕೀಲ ಎಂ ರಾರಿ ಅವರು ಆದೇಶದ ಪ್ರತಿಯನ್ನು ಇಂದು ನ್ಯಾಯಾಲಯಕ್ಕೆ ಹಸ್ತಾಂತರಿಸಿದರು. ಅದನ್ನು ಪರಿಶೀಲಿಸಿದ ನಂತರ ನ್ಯಾಯಾಲಯ ಈ ನಿರ್ದೇಶನ ನೀಡಿದೆ. ಭಾಗಶಃ ಹಿಂಸಾಚಾರ ಪೀಡಿತ ಜಿಲ್ಲೆಗಳಲ್ಲಿಯೂ ಮೊಬೈಲ್ ಟವರ್‌ಗಳನ್ನು ತಕ್ಷಣವೇ ಕಾರ್ಯಗತಗೊಳಿಸಬೇಕು ಎಂದು ಅದು ಸ್ಪಷ್ಟಪಡಿಸಿದೆ.

ಮಣಿಪುರದಲ್ಲಿ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸುವುದಕ್ಕೆ ಸಂಬಂಧಿಸಿದ ಎಲ್ಲಾ ಆದೇಶಗಳ ಪ್ರತಿಗಳನ್ನು ತನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸುವಂತೆ ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದೇಶದ ಅನುಪಾಲನೆಯ ಕುರಿತಂತೆ ನವೆಂಬರ್ 9 ರಂದು ಪೀಠ ಪ್ರಕರಣದ ವಿಚಾರಣೆ ನಡೆಸಲಿದೆ.