ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸುವುದನ್ನು ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದ ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಸಲು ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಯನ್ನು ಮಣಿಪುರ ಹೈಕೋರ್ಟ್ ಇತ್ತೀಚೆಗೆ ಪುರಸ್ಕರಿಸಿದೆ [ಅಖಿಲ ಮಣಿಪುರ ಬುಡಕಟ್ಟು ಒಕ್ಕೂಟ ಮತ್ತು ಶ್ರೀ ಮುತುಮ್ ಚುರಮಣಿ ಮೈತೇಯಿ ನಡುವಣ ಪ್ರಕರಣ].
ನ್ಯಾ. ಅಹಂತೇಮ್ ಬಿಮೋಲ್ ಸಿಂಗ್ ಮತ್ತು ನ್ಯಾ. ಎ ಗುಣೇಶ್ವರ್ ಶರ್ಮಾ ಅವರಿದ್ದ ಪೀಠ ಪ್ರಕರಣವನ್ನು ಅರ್ಹತೆಯ ಆಧಾರದಲ್ಲಿ ಪರಿಗಣಿಸುವುದು ನ್ಯಾಯಯುತ ಮತ್ತು ಸೂಕ್ತವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿತು.
ಮಾಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಂ ವಿ ಮುರಳೀಧರನ್ ಅವರು ಕಳೆದ ಮಾರ್ಚ್ 27ರಂದು ನೀಡಿದ್ದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅಖಿಲ ಮಣಿಪುರ ಬುಡಕಟ್ಟು ಒಕ್ಕೂಟ ಸೇರಿದಂತೆ ವಿವಿಧ ಗುಂಪುಗಳು ಅನುಮತಿ ಕೋರಿದ್ದವು. ನಿರ್ದೇಶನ ನೀಡಲಾಗಿದ್ದ ರಿಟ್ ಅರ್ಜಿಯಲ್ಲಿ ಬುಡಕಟ್ಟು ಸಮುದಾಯದ ಹಕ್ಕುಗಳಿಗೆ ಸಂಬಂಧಿಸಿದ ಗುಂಪುಗಳನ್ನು ಪಕ್ಷಕಾರರನ್ನಾಗಿ ಮಾಡಿಕೊಂಡಿರಲಿಲ್ಲ. ನ್ಯಾಯಮೂರ್ತಿ ಮುರಳೀಧರನ್ ಅವರ ತೀರ್ಪು ಮಣಿಪುರದ 34 ಮಾನ್ಯತೆ ಪಡೆದ ಬುಡಕಟ್ಟುಗಳ ಮೂಲಭೂತ ಹಕ್ಕುಗಳು ಮತ್ತು ಸಾಂವಿಧಾನಿಕ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ವಾದಿಸಲಾಗಿತ್ತು.
ಐವರು ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿ ಕಾಲಿನ್ ಗೊನ್ಸಾಲ್ವೇಸ್, ವಾದಿಸಿದ್ದರೆ ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎಂ ದೇವಾನಂದ ವಾದ ಮಂಡಿಸಿದರು. ವಾದಗಳನ್ನು ಆಲಿಸಿದ ನ್ಯಾಯಾಲಯ ತಾನು ಅರ್ಜಿದಾರರ ಮನವಿ ಪುರಸ್ಕರಿಸುವುದಾಗಿಯೂ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡುವಂತೆಯೂ ಸೂಚಿಸಿತು.
ರಾಜ್ಯದಲ್ಲಿ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಗಿದ್ದ ಹೈಕೋರ್ಟ್ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಕಳೆದ ಮೇನಲ್ಲಿ ತರಾಟೆಗೆ ತೆಗೆದುಕೊಂಡಿತ್ತಲ್ಲದೆ ತೀರ್ಪಿಗೆ ತಡೆಯಾಜ್ಞೆ ನೀಡಿತ್ತು. ಆದೇಶ ನೀಡಿದ್ದ ಮುರಳೀಧರನ್ ಅವರನ್ನು ಈ ತಿಂಗಳು ಕಲ್ಕತ್ತಾ ಹೈಕೋರ್ಟ್‌ಗೆ ವರ್ಗಾಯಿಸಲಾಗಿದೆ. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಸಿದ್ಧಾರ್ಥ್ ಮೃದುಲ್ ಅವರು ನಿನ್ನೆ ಮಣಿಪುರ ಹೈಕೋರ್ಟ್ ಕಾಯಂ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.