ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ನಡೆದಿದ್ದ ಹಿಂಸಾಚಾರದಲ್ಲಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಪಾತ್ರ ಇರುವುದನ್ನು ಬಿಂಬಿಸುವ ಕೆಲ ಧ್ವನಿ ಮುದ್ರಿಕೆಗಳ ಅಧಿಕೃತತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಕೇಳಿದೆ.
ತಾನು ಮೊದಲು ಎಫ್‌ಎಸ್‌ಎಲ್ ವರದಿ ಅಧ್ಯಯನ ಮಾಡಿ ಆ ಬಳಿಕ ಕುಕಿ ಆರ್ಗನೈಸೇಶನ್ ಫಾರ್ ಹ್ಯೂಮನ್ ರೈಟ್ಸ್ ಟ್ರಸ್ಟ್ ಸಲ್ಲಿಸಿರುವ ಮನವಿಯ ವಿಚಾರಣೆ ಮುಂದುವರೆಸುವುದಾಗಿ ಸಿಜೆಐ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಪಿ ವಿ ಸಂಜಯ್ ಕುಮಾರ್ ಅವರಿದ್ದ ಪೀಠ ತಿಳಿಸಿತು.
ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಇನ್ನು ಆರು ವಾರದೊಳಗೆ ಸಲ್ಲಿಸುವಂತೆ ಸೂಚಿಸಿರುವ ನ್ಯಾಯಾಲಯ ಮಾರ್ಚ್ 24ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿತು.
ಪ್ರಕರಣವನ್ನುಮೊದಲು ತಾನು ನೇರವಾಗಿ ಆಲಿಸಬೇಕೆ ಅಥವಾ ಹೈಕೋರ್ಟ್ ವಿಚಾರಣೆ ನಡೆಸಬೇಕೆ ಎಂಬ ಕುರಿತು ಆಲೋಚನೆಯಲ್ಲಿ ತೊಡಗಿರುವುದಾಗಿ ಪೀಠ ತಿಳಿಸಿತು.
ಆಗ ಅರ್ಜಿದಾರ ಸಂಘಟನೆ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ಧ್ವನಿಮುದ್ರಿಕೆಗಳ ಪ್ರತಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ. ಮಣಿಪುರ ಗಲಭೆ ನಡೆಯುವ ಮೊದಲು ಒಂದು ಗುಂಪು ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದೇನೆ ಎಂದು ಮುಖ್ಯಮಂತ್ರಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.
ಆದರೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ "ಅರ್ಜಿ ಸಲ್ಲಿಸಿರುವ ಸಂಘಟನೆಯ ಹಿಂದಿನ ಉದ್ದೇಶ ಏನು ಎಂದು ಪ್ರಶ್ನಿಸಿದರು. ಅರ್ಜಿದಾರರು ಸೈದ್ಧಾಂತಿಕವಾಗಿ ಪಕ್ಷಪಾತಿ... ಪ್ರತ್ಯೇಕತಾವಾದದೆಡೆಗೆ ಒಲವಿದೆ... ಮೂವರು ನ್ಯಾಯಮೂರ್ತಿಗಳ ಸಮಿತಿ ಇದಾಗಲೇ ವರದಿ ಸಲ್ಲಿಸಿದೆ. ವಿವಾದವನ್ನು ಜೀವಂತವಾಗಿಡಲು ಅರ್ಜಿ ಸಲ್ಲಿಸಲಾಗಿದೆ" ಎಂದು ಆಕ್ಷೇಪಿಸಿದರು.
ಇದನ್ನು ಒಪ್ಪದ ಪ್ರಶಾಂತ್ ಭೂಷಣ್, ಸರ್ಕಾರೇತರ ವಿಧಿವಿಜ್ಞಾನ ಪ್ರಯೋಗಾಲಯ, ಟ್ರೂತ್ ಲ್ಯಾಬ್ಸ್ ಆಡಿಯೋ ರೆಕಾರ್ಡಿಂಗ್‌ನಲ್ಲಿರುವ ಶೇ 93 ರಷ್ಟು ಧ್ವನಿ ಮುಖ್ಯಮಂತ್ರಿಯವರದ್ದು ಎಂದು ದೃಢಪಡಿಸಿದೆ ಎಂದರು. ಆದರೆ ವರದಿಯ ವಿಶ್ವಾಸಾರ್ಹತೆ ಬಗ್ಗೆ ಮೆಹ್ತಾ ಅನುಮಾನ ವ್ಯಕ್ತಪಡಿಸಿದರು. ಆದರೆ ಟ್ರೂತ್ ಲ್ಯಾಬ್ಸ್‌ನ ಸಂಶೋಧನೆಗಳು ಸರ್ಕಾರದ ಎಫ್‌ಎಸ್‌ಎಲ್ ವರದಿಗಳಿಗಿಂತ ಹೆಚ್ಚು ವಿಶ್ವಾಸಾರ್ಹವಾಗಿವೆ ಎಂದು ಭೂಷಣ್ ಸಮರ್ಥಿಸಿಕೊಂಡರು. ಈ ಹಂತದಲ್ಲಿ ನ್ಯಾಯಾಲಯ ಎಫ್‌ಎಸ್‌ಎಲ್ ವರದಿ ಬಯಸಿತು.
ಇದೇ ವೇಳೆ ತನಗೆ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ನೀಡಿದ ಸಂದರ್ಭದಲ್ಲಿ ಮಣಿಪುರ ಮುಖ್ಯಮಂತ್ರಿ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದು ವಿಚಾರಣೆಯಿಂದ ಹಿಂದೆ ಸರಿಯಲೇ ಎಂದು ನ್ಯಾ. ಸಂಜಯ್ ಕುಮಾರ್ ಅರ್ಜಿದಾರರನ್ನು ಪ್ರಶ್ನಿಸಿದರು. ಆದರೆ ತಾವು ವಿಚಾರಣೆ ನಡೆಸುವುದಕ್ಕೆ ಅರ್ಜಿದಾರರಿಂದ ಯಾವುದೇ ಆಕ್ಷೇಪ ಇಲ್ಲ ಎಂದು ಪ್ರಶಾಂತ್ ಭೂಷಣ್ ತಿಳಿಸಿದರು.