ಕ್ರಿಮಿನಲ್ ಪ್ರಕರಣಗಳಲ್ಲಿ ಹೈಕೋರ್ಟ್‌ಗಳು ಮತ್ತು ವಿಚಾರಣಾ ನ್ಯಾಯಾಲಯಗಳು ಜಾಮೀನು ನೀಡುವ ಬದಲು ವಾಡಿಕೆಯಂತೆ ಜಾಮೀನು ನಿರಾಕರಿಸುವ ಮೂಲಕ ಸುರಕ್ಷಿತ ಆಟ ಆಡುತ್ತಿರುವಂತೆ ತೋರುತ್ತದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಟೀಕಿಸಿದೆ.
ಜಾಮೀನೆಂಬುದು ನಿಯಮ, ಅನಿವಾರ್ವಾದ ಸಂದರ್ಭಗಳಲ್ಲಿ ಮಾತ್ರವೇ ಜೈಲುವಾಸ ಎನ್ನುವ ತತ್ವವನ್ನು ನ್ಯಾಯಾಲಯಗಳು ಅರಿತುಕೊಳ್ಳಲು ಇದು ತಕ್ಕ ಕಾಲ ಎಂದು ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಜಾಮೀನು ನೀಡುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಹೇಳಿತು.
ವಿಚಾರಣಾ ನ್ಯಾಯಾಲಯ ಮತ್ತು ದೆಹಲಿ ಹೈಕೋರ್ಟ್ ಈ ವರ್ಷದ ಆರಂಭದಲ್ಲಿ ಸಿಸೋಡಿಯಾ ಅವರು ಮೂರನೇ ಬಾರಿಗೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದವು. ಈ ಹಿನ್ನೆಲೆಯಲ್ಲಿ ಸಿಸೋಡಿಯಾ ಅವರು ಮತ್ತೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ವಿನಾಕಾರಣ ಜಾಮೀನು ನಿರಾಕರಿಸುತ್ತಿರುವ ಬಗ್ಗೆ ಸಿಜೆಐ ಡಿ ವೈ ಚಂದ್ರಚೂಡ್ ಕಳೆದ ಮಾರ್ಚ್‌ನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರ ವೇಳೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಜಾಮೀನು ನೀಡುವ ವೇಳೆ ನ್ಯಾಯಪೀಠವು ಮಾಡಿದ ಪ್ರಮುಖ ಅವಲೋಕನಗಳು ಹೀಗಿವೆ:
ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಜಿಲಾ ನ್ಯಾಯಾಲಯಗಳು ನಿರ್ಬಂಧ ವಿಧಿಸುತ್ತಿವೆ ಎಂಬ ಆತಂಕ ಹೆಚ್ಚುತ್ತಿದೆ.
ಜಾಮೀನಿಗೆ ಮನ್ನಣೆ ಸಿಗಬೇಕು ಎಂಬ ನಿಯಮ ಜಿಲ್ಲಾ ನ್ಯಾಯಾಲಯಗಳಲ್ಲಿ ನೆಲೆ ಕಳೆದುಕೊಳ್ಳುತ್ತಿದೆ. ಈ ಪ್ರವೃತ್ತಿಯನ್ನು ಸಂಪೂರ್ಣ ಪರಾಮರ್ಶಿಸುವ ಅಗತ್ಯವಿದೆ. ಈ ಪ್ರವೃತ್ತಿ ಏಕೆ ತಲೆದೋರಿದೆ ಎಂಬುದನ್ನು ಎಲ್ಲಾ ಜಿಲ್ಲಾ ನ್ಯಾಯಾಧೀಶರು ತಿಳಿಸಬೇಕು.
ಸಿಸೋಡಿಯಾ ಅವರು ಮತ್ತೆ ವಿಚಾರಣಾ ನ್ಯಾಯಾಲಯ ಇಲ್ಲವೇ ಹೈಕೋರ್ಟನ್ನು ಸಂಪರ್ಕಿಸಬೇಕು ಎಂದು ಹೇಳುವುದು ಹಾವು ಏಣಿ ಆಟದಂತಾಗುತ್ತದೆ. ಹಾಗೆ ಹೇಳುವುದು ನ್ಯಾಯದ ಅಪಹಾಸ್ಯವಾಗುತ್ತದೆ.
ವಿಚಾರಣೆಗಳಿಗೇ ನ್ಯಾಯಾಲಯ ಜೋತುಬೀಳುವಂತಾಗಬಾರದು.
ನಿರ್ದಿಷ್ಟ ಕಾಲಮಿತಿಯೊಳಗೆ ಸಿಸೋಡಿಯಾ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸುವ ಯಾವುದೇ ಸಾಧ್ಯತೆಯಿಲ್ಲ.
ವಿಚಾರಣೆಯನ್ನು ಪೂರ್ಣಗೊಳಿಸುವ ಉದ್ದೇಶಕ್ಕಾಗಿ ಆರೋಪಿತ ವ್ಯಕ್ತಿಗಳನ್ನು ಕಂಬಿ ಹಿಂದೆ ಇರಿಸುವುದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆ.
ಸಿಸೋಡಿಯಾ ಅವರು ಸಮಾಜದಲ್ಲಿ ಆಳವಾದ ಬೇರುಗಳನ್ನು ಹೊಂದಿದ್ದು ಅವರು ಪಲಾಯನ ಮಾಡುವ ಇಲ್ಲವೇ ಸಾಕ್ಷ್ಯಗಳನ್ನು ತಿರುಚುವ ಸಾಧ್ಯತೆಗಳಿಲ್ಲ.