ಇ ಡಿ ಮತ್ತು ಸಿಬಿಐ ಪ್ರಕರಣಗಳೆರಡರಲ್ಲೂ ಮನೀಶ್ ಸಿಸೋಡಿಯಾಗೆ ಸುಪ್ರೀಂ ಕೋರ್ಟ್ ಜಾಮೀನು

ವಿಚಾರಣೆಯಲ್ಲಿ ದೀರ್ಘಕಾಲದ ವಿಳಂಬ ಮಾಡಿರುವುದು ಸಿಸೋಡಿಯಾ ಅವರ ತ್ವರಿತ ವಿಚಾರಣೆಯ ಹಕ್ಕನ್ನು ಉಲ್ಲಂಘಿಸಿದ್ದು ತ್ವರಿತ ವಿಚಾರಣೆಯ ಹಕ್ಕು ಸ್ವಾತಂತ್ರ್ಯದ ಒಂದು ಮುಖ ಎಂದು ನ್ಯಾಯಾಲಯ ಹೇಳಿದೆ.
Manish Sisodia, Supreme Court
Manish Sisodia, Supreme Court
Published on

ದೆಹಲಿ ಅಬಕಾರಿ ನೀತಿ ಪಕ್ಷದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಪಿಪಿ) ನಾಯಕ ಮನೀಶ್ ಸಿಸೋಡಿಯಾಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ನೀಡಿದೆ [ಮನೀಶ್ ಸಿಸೋಡಿಯಾ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].

ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಸಿಸೋಡಿಯಾ ಅವರ ವಿರುದ್ಧ ಸಿಬಿಐ  ಮತ್ತು ಜಾರಿ ನಿರ್ದೇಶನಾಲಯ (ಇ ಡಿ) ಹೂಡಿದ್ದ ಪ್ರಕರಣಗಳೆರಡರಲ್ಲೂ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ  ಜಾಮೀನು ಮಂಜೂರು ಮಾಡಿದೆ.

"ಮೇಲ್ಮನವಿಯನ್ನು ಪುರಸ್ಕರಿಸಲಾಗಿದೆ. ದೆಹಲಿ ಹೈಕೋರ್ಟ್‌ ಆದೇಶವನ್ನು ರದ್ದುಗೊಳಿಸಲಾಗಿದೆ. ಇ ಡಿ ಮತ್ತು ಸಿಬಿಐ ಎರಡೂ ಪ್ರಕರಣಗಳಲ್ಲಿ ಅವರಿಗೆ ಜಾಮೀನು ನೀಡಲಾಗಿದೆ" ಎಂದು ನ್ಯಾಯಾಲಯ ಆದೇಶ ನೀಡಿದೆ.

Also Read
'ಸಿಸೋಡಿಯಾ ಪ್ರಕರಣದ ವಿಚಾರಣೆಗೆ ಎಷ್ಟು ಸಮಯ ಬೇಕು?' ಇ ಡಿಗೆ ಪ್ರಶ್ನೆ; ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ವಿಚಾರಣೆಯಲ್ಲಿ ದೀರ್ಘಕಾಲದ ವಿಳಂಬ ಮಾಡಿರುವುದು ಸಿಸೋಡಿಯಾ ಅವರ ತ್ವರಿತ ವಿಚಾರಣೆಯ ಹಕ್ಕನ್ನು ಉಲ್ಲಂಘಿಸಿದ್ದು ತ್ವರಿತ ವಿಚಾರಣೆಯ ಹಕ್ಕು ಸ್ವಾತಂತ್ರ್ಯದ ಒಂದು ಮುಖವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ತ್ವರಿತ ವಿಚಾರಣೆಯ ಹಕ್ಕನ್ನು ಪ್ರಭುತ್ವ ರಕ್ಷಿಸಲು ಸಾಧ್ಯವಾಗದಿದ್ದಾಗ ಇತ್ತೀಚೆಗೆ ಜಾವೇದ್ ಗುಲಾಂ ನಬಿ ಶೇಖ್ ಪ್ರಕರಣದಲ್ಲಿ ಇದೇ ನಿಲುವನ್ನು ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿದೆ ಎಂದು ತಿಳಿಸಿರುವ ನ್ಯಾಯಾಲಯ ಅಪರಾಧದ ಸ್ವರೂಪವನ್ನು ಲೆಕ್ಕಿಸದೆಯೇ ಸಂವಿಧಾನದ 21ನೇ ವಿಧಿ ಅನ್ವಯವಾಗಲಿದೆ ಎಂದು ಹೇಳಿದೆ.   

ಅವಧಿಯೊಳಗೆ ವಿಚಾರಣೆಯನ್ನು ಪೂರ್ಣಗೊಳಿಸುವ ಯಾವುದೇ ಸಾಧ್ಯತೆಯಿಲ್ಲ ಮತ್ತು ವಿಚಾರಣೆಯನ್ನು ಪೂರ್ಣಗೊಳಿಸುವ ಉದ್ದೇಶಕ್ಕಾಗಿ ಆರೋಪಿತ ವ್ಯಕ್ತಿಗಳನ್ನು ಕಂಬಿ ಹಿಂದೆ ಇರಿಸುವುದು  21ನೇ ವಿಧಿಯ ಉಲ್ಲಂಘನೆ ಎಂದು ತಿಳಿಸಲಾಗಿದೆ.

ಸಿಸೋಡಿಯಾ ಅವರು ಸಮಾಜದಲ್ಲಿ ಆಳವಾದ ಬೇರುಗಳನ್ನು ಹೊಂದಿದ್ದು ಅವರು ಪಲಾಯನ ಮಾಡುವ ಸಾಕ್ಷ್ಯಗಳನ್ನು ತಿರುಚುವ ಸಾಧ್ಯತೆಗಳಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಪ್ರಕರಣದ ವಿಚಾರಣೆ ಈಗಾಗಲೇ ವಿಳಂಬಗೊಂಡಿರುವುದರಿಂದ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ಆರೋಪಿಗಳಿಗೆ ಜಾಮೀನು ನೀಡಲು ಪ್ರಸ್ತುತ ತ್ರಿವಳಿ ಪರೀಕ್ಷೆ ನಡೆಸಬೇಕು ಎಂಬುದು ಪ್ರಸ್ತುತ ಪ್ರಕರಣಕ್ಕೆ ಅನ್ವಯವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

"ದೀರ್ಘಕಾಲದ ಸೆರೆವಾಸ ಅನುಭವಿಸುತ್ತಿದ್ದಲ್ಲಿ ಜಾಮೀನು ನೀಡಬಹುದೆಂದು ಹೇಳುವ ತೀರ್ಪುಗಳನ್ನು ನಾವು ಗಮನಿಸಿದ್ದೇವೆ. ಪ್ರಸ್ತುತ ಪ್ರಕರಣದಲ್ಲಿ ತ್ರಿವಳಿ ಪರೀಕ್ಷೆ ಅನ್ವಯಿಸುವುದಿಲ್ಲ" ಎಂದು ಅದು ವಿವರಿಸಿತು.

Also Read
ದೆಹಲಿ ಅಬಕಾರಿ ನೀತಿ: ಸಿಬಿಐ, ಇ ಡಿ ಪ್ರಕರಣಗಳಲ್ಲಿ ಜಾಮೀನು ಕೋರಿ ಮನೀಶ್ ಸಿಸೋಡಿಯಾ ದೆಹಲಿ ಹೈಕೋರ್ಟ್‌ಗೆ ಅರ್ಜಿ

ವಿಚಾರಣಾ ನ್ಯಾಯಾಲಯದ ಮುಂದೆ ಸಿಸೋಡಿಯಾ ಸಲ್ಲಿಸಿದ್ದ ವಿವಿಧ ಅರ್ಜಿಗಳಿಂದಾಗಿಯೇ ವಿಚಾರಣೆ ವಿಳಂಬವಾಯಿತು ಎಂಬ ಇ ಡಿ ವಾದವನ್ನು ನ್ಯಾಯಾಲಯ ತಳ್ಳಿಹಾಕಿದೆ.

 ಸಿಸೋಡಿಯಾ ಸಲ್ಲಿಸಿರುವ ಅರ್ಜಿಗಳಿಂದಾಗಿಯೇ ವಿಚಾರಣೆ ವಿಳಂಬವಾಗಿದೆ ಎಂಬ ವಿಚಾರಣಾ ನ್ಯಾಯಾಲಯದ ಅಭಿಪ್ರಾಯವೂ ತಪ್ಪು. ಕ್ಷುಲ್ಲಕ ಎನ್ನಿಸುವಂತಹ ಸಿಸೋಡಿಯಾ ಅವರ ಯಾವುದೇ ಅರ್ಜಿಯನ್ನು ತೋರಿಸಲು ಹೇಳಿದಾಗ ಅದನ್ನು ಹೆಚ್ಚುವರಿ ಸಾಲಿಸಿಟರ್‌‌ ಜನರಲ್‌ ತೋರಿಸಲಿಲ್ಲ ಎಂದು ಸುಪ್ರೀಂ ಕೋರ್ಟ್‌‌ ಹೇಳಿದೆ.

ಅಲ್ಲದೆ ಕ್ರಿಮಿನಲ್ ಪ್ರಕರಣಗಳಲ್ಲಿ ಹೈಕೋರ್ಟ್‌ಗಳು ಮತ್ತು ವಿಚಾರಣಾ ನ್ಯಾಯಾಲಯಗಳು ಜಾಮೀನು ನೀಡುವ ಬದಲು ವಾಡಿಕೆಯಂತೆ ಜಾಮೀನು ನಿರಾಕರಿಸಿದರೆ ಅದು ಅವು ಸುರಕ್ಷಿತ ಆಟ ಆಡುತ್ತಿರುವಂತೆ ತೋರುತ್ತದೆ ಎಂದು ಕೂಡ ಅದು ಟೀಕಿಸಿದೆ.

ಸಿಸೋಡಿಯಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಈಗಾಗಲೇ ತಾನು ತಿರಸ್ಕರಿಸಿರುವುದರಿಂದ ಅವರನ್ನು ಮತ್ತೆ ವಿಚಾರಣಾ ನ್ಯಾಯಾಲಯ ಇಲ್ಲವೇ ಹೈಕೋರ್ಟ್‌ ಸಂಪರ್ಕಿಸುವಂತೆ ಹೇಳುವುದು ನ್ಯಾಯದ ಅಪಹಾಸ್ಯವಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ನುಡಿದಿದೆ.

₹ 2 ಲಕ್ಷ ಮೊತ್ತದ ಬಾಂಡ್‌ ಪಡೆದು ಜಾಮೀನು ನೀಡಲು ಆದೇಶಿಸಲಾಗಿದೆ. ಸಿಸೋಡಿಯಾ ಅವರು ತಮ್ಮ ಪಾಸ್‌ಪೋರ್ಟನ್ನು ಪೊಲೀಸ್‌ ಠಾಣೆಗೆ ಒಪ್ಪಿಸಬೇಕು. ಮತ್ತು ಠಾಣೆಗೆ ಹಾಜರಾಗುತ್ತಿರಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

Kannada Bar & Bench
kannada.barandbench.com