ಸುದ್ದಿಗಳು

ಸುರಕ್ಷತಾ ವಿಧಾನ ಅನುಸರಿಸದೇ ಶೌಚಗುಂಡಿಗೆ ಇಬ್ಬರು ಇಳಿದಿದ್ದನ್ನು ಕಂಡಿರುವೆ: ಕರ್ನಾಟಕ ಹೈಕೋರ್ಟ್ ಹಂಗಾಮಿ ಸಿಜೆ

Bar & Bench

"ಅವರು (ಶೌಚಗುಂಡಿ ಕಾರ್ಮಿಕರು) ನಮ್ಮ ಜೀವನವನ್ನು ಆರಾಮದಾಯಕವಾಗಿ ಮಾಡುತ್ತಿದ್ದಾರೆ, ಅವರ ಜೀವನ ಆರಾಮದಾಯಕವಾಗಿದೆಯೆ ಎಂದು ನಾವು ಖಾತ್ರಿಪಡಿಸಿಕೊಳ್ಳಬೇಕು" ಹೀಗೆಂದು ಪೌರಕಾರ್ಮಿಕರ ಕುರಿತಾದ ಕಾಳಜಿಯನ್ನು ಮಂಗಳವಾರ ಕರ್ನಾಟಕ ಹೈಕೋರ್ಟ್‌ ವ್ಯಕ್ತಪಡಿಸಿತು.

ಸುರಕ್ಷತಾ ವಿಧಾನ ಅನುಸರಿಸದೇ ಶೌಚಗುಂಡಿಗೆ ಇಬ್ಬರು ವ್ಯಕ್ತಿಗಳು ಇಳಿದಿದ್ದನ್ನು ಕಂಡಿರುವೆ ಎಂಬುದಾಗಿ ಪೌರಕಾರ್ಮಿಕರ ಸುರಕ್ಷತೆ ಕುರಿತಾದ ಪ್ರಕರಣವೊಂದರ ವಿಚಾರಣೆ ವೇಳೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ತಿಳಿಸಿದರು. ಈ ವೇಳೆ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರನ್ನೂ ಒಳಗೊಂಡ ಪೀಠವು, "ಅವರು (ಶೌಚಗುಂಡಿ ಕಾರ್ಮಿಕರು) ನಮ್ಮ ಜೀವನವನ್ನು ಆರಾಮದಾಯಕವಾಗಿ ಮಾಡುತ್ತಿದ್ದಾರೆ, ಅವರ ಜೀವನ ಆರಾಮದಾಯಕವಾಗಿದೆಯೇ ಎಂಬುದನ್ನು ನಾವು ಖಾತ್ರಿಪಡಿಸಿಕೊಳ್ಳಬೇಕು" ಎಂದು ತಿಳಿಸಿತು.

ಎಲ್ಲಾ ಕಾರ್ಮಿಕರಿಗೆ ಸುರಕ್ಷತಾ ಸಲಕರಣೆಗಳನ್ನು ನೀಡಲಾಗಿದೆಯೇ ಮತ್ತು ಅವುಗಳ ಗುಣಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಲಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಿರ್ದೇಶಿಸುವಂತೆ ಕೋರಿ ಪಿಎಚ್‌ಡಿ ಪದವೀಧರರಾದ ಸತ್ಯಶೀಲನ್‌ ಎಂಬುವವರು ಸಲ್ಲಿಸಿದ್ದ ವಾದಕಾಲೀನ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಸಮರ್ಥ ರೀತಿಯಲ್ಲಿ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಹಾಗೂ ಪೌರಕಾರ್ಮಿಕರಿಗೆ ವೇತನ ಪಾವತಿ ಮತ್ತಿತರ ಪರಿಹಾರಗಳನ್ನು ಕೋರಿ ಅರ್ಜಿ ಸಲ್ಲಿಸಲಾಗಿತ್ತು.

ಮಲದ ಗುಂಡಿಗಳಿಗೆ ಪ್ರವೇಶಿಸುವ ಎಲ್ಲ ಕಾರ್ಮಿಕರಿಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಸುರಕ್ಷತಾ ಸಾಧನಗಳನ್ನು ಒದಗಿಸುವುದನ್ನು ಖಾತ್ರಿಪಡಿಸಬೇಕು ಎಂದು ಕೂಡ ನ್ಯಾಯಾಲಯ ತಿಳಿಸಿದೆ. ಅಲ್ಲದೆ ಅರ್ಜಿಗೆ ಪ್ರತಿಕ್ರಿಯೆ ನೀಡಲು ಮೂರು ವಾರಗಳ ಸಮಯಾವಕಾಶವನ್ನು ಕೂಡ ನ್ಯಾಯಾಲಯ ನೀಡಿದ್ದು ಮುಂದಿನ ವಿಚಾರಣೆ ಅಕ್ಟೋಬರ್ 8ಕ್ಕೆ ನಿಗದಿಯಾಗಿದೆ.

ಶಿವಕುಮಾರ್‌ ಎಂಬ ಹೊರಗುತ್ತಿಗೆ ಪೌರ ಕಾರ್ಮಿಕರು ಶೌಚಗುಂಡಿ ಸ್ವಚ್ಛಗೊಳಿಸುವ ವೇಳೆ ಕೆಲ ಸಮಯದ ಹಿಂದೆ ಮೃತಪಟ್ಟಿದ್ದರು. ಬಿಡಬ್ಲ್ಯೂಎಸ್‌ಎಸ್‌ಬಿ ಸುರಕ್ಷಾ ಸಾಧನಗಳನ್ನು ಕಲ್ಪಿಸಲು ವಿಫಲವಾದ ಹಿನ್ನೆಲೆಯಲ್ಲಿ ಶಿವಕುಮಾರ್‌ ಮೃತಪಟ್ಟಿದ್ದರು ಎಂಬುದು ಅರ್ಜಿದಾರರ ವಾದ. ಹಾಗಾಗಿ ಸಫಾಯಿ ಕರ್ಮಚಾರಿ ಆಂದೋಲನ ಮತ್ತಿತರರು ಹಾಗೂ ಕೇಂದ್ರ ಸರ್ಕಾರ ಮತ್ತಿತರರ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಈ ಹಿಂದೆ ನೀಡಿದ್ದ ತೀರ್ಪಿನಂತೆ ಪರಿಹಾರ ನೀಡುವುದು ಸೇರಿದಂತೆ ವಿವಿಧ ಮನವಿಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.