JUSTICES ASHOK BHUSHAN, L. NAGESWARA RAO, S. ABDUL NAZEER, HEMANT GUPTA, RAVINDRA BHAT 
ಸುದ್ದಿಗಳು

ಮರಾಠಾ ಮೀಸಲಾತಿ: ಶೇ. 50ರ ಮಿತಿ ಲಕ್ಷ್ಮಣ ರೇಖೆಯಾಗಿದ್ದು, ಮೀಸಲಾತಿ ಕಲ್ಪಿಸುವಾಗ ಅದನ್ನು ಅನುಸರಿಸಬೇಕು - ದಾತಾರ್‌

ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌, ಎಲ್‌ ನಾಗೇಶ್ವರ್‌ ರಾವ್‌, ಎಸ್‌ ಅಬ್ದುಲ್‌ ನಜೀರ್‌, ಹೇಮಂತ್‌ ಗುಪ್ತ ಮತ್ತು ರವೀಂದ್ರ ಭಟ್‌ ಅವರನ್ನೊಳಗೊಂಡ ಸಾಂವಿಧಾನಿಕ ಪೀಠವು ಪ್ರಕರಣದ ವಿಚಾರಣೆ ನಡೆಸಿದೆ.

Bar & Bench

ಮರಾಠಾ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ‘ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಮಹಾರಾಷ್ಟ್ರ ರಾಜ್ಯ ಮೀಸಲಾತಿ ಕಾಯಿದೆ’ (ಎಸ್‌ಇಬಿಸಿ ಕಾಯಿದೆ) ಅನ್ನು ಪ್ರಶ್ನಿಸಲಾಗಿರುವ ಮೇಲ್ಮನವಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ನಡೆಸಿದ್ದು, ನಾಳೆಯೂ ವಾದ-ಪ್ರತಿವಾದ ಸರಣಿ ಮುಂದುವರೆಯಲಿದೆ (ಜೈಶ್ರೀ ಲಕ್ಷ್ಮಣರಾವ್‌ ಪಾಟೀಲ್‌ ವರ್ಸಸ್‌ ಮುಖ್ಯಮಂತ್ರಿ).

ಮೀಸಲಾತಿಯನ್ನು ಶೇ. 50ಕ್ಕೆ ಮಿತಿಗೊಳಿಸಿರುವ ಇಂದಿರಾ ಸಾಹ್ನಿ ವರ್ಸಸ್‌ ಭಾರತ ಸರ್ಕಾರ ಪ್ರಕರಣದಲ್ಲಿ 1992ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಮರು ಪರಾಮರ್ಶೆ ಕುರಿತಾಗಿಯೂ ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌, ಎಲ್‌ ನಾಗೇಶ್ವರ್‌ ರಾವ್‌, ಎಸ್‌ ಅಬ್ದುಲ್‌ ನಜೀರ್‌, ಹೇಮಂತ್‌ ಗುಪ್ತಾ ಮತ್ತು ರವೀಂದ್ರ ಭಟ್‌ ಅವರಿದ್ದ ಸಾಂವಿಧಾನಿಕ ಪೀಠ ವಿಚಾರಣೆ ನಡೆಸಲಿದೆ.

ಮೀಸಲಾತಿ ಮಿತಿ ಹೆಚ್ಚಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಹಿರಿಯ ವಕೀಲ ಅರವಿಂದ್‌ ದಾತಾರ್‌ ಅವರು ಇಂದಿರಾ ಸಾಹ್ನಿ ಪ್ರಕರಣದ ತೀರ್ಪು ಮರುಪರಿಶೀಲಿಸುವುದರ ಕುರಿತು ಪ್ರಶ್ನೆಗಳನ್ನು ಎತ್ತಲಾಗಿದೆ. ಇಂದಿರಾ ಸಾಹ್ನಿ ತೀರ್ಪಿನ ಸಾಚಾತನವನ್ನು ಪ್ರಶ್ನಿಸಿರುವ ಯಾವೊಂದು ತೀರ್ಪು ಸಂಶೋಧನೆಯ ಸಂದರ್ಭದಲ್ಲಿ ನಮಗೆ ದೊರೆತಿಲ್ಲ ಎಂದಿದ್ದಾರೆ. ಇಂದಿರಾ ಸಾಹ್ನಿ ತೀರ್ಪಿನ ಬಗ್ಗೆ ಅನುಮಾನಿಸಿದ ಪಕ್ಷದಲ್ಲಿ ಅದನ್ನು ಒಂಭತ್ತು ನ್ಯಾಯಮೂರ್ತಿಗಳ ಪೀಠಕ್ಕೆ ಬದಲಾಗಿ 11 ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಬೇಕು ಎಂದು ದಾತಾರ್‌ ಹೇಳಿದ್ದಾರೆ.

ತುಂಬಾ ಚರ್ಚಿಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶೇ.50 ಮಿತಿ ನಿಯಮವನ್ನು ಮರುಪರಿಶೀಲಿಸುವ ಅಗತ್ಯವಿಲ್ಲ. ಶೇ. 50ರ ಮಿತಿಯ ಬಗ್ಗೆ ಬಹುತೇಕ ಒಮ್ಮತವಿದೆ. ಅದು ಶೇ. 50 ಆಗದಿದ್ದರೆ ಶೇ. 70-80 ಆಗುತ್ತದೆಯೇ? ಜನಸಂಖ್ಯೆಯ ಅನುಪಾತದ ಪ್ರಾತಿನಿಧ್ಯ ಕಲ್ಪಿಸಲು ಹೋಗುತ್ತಿದ್ದೇವೆಯೇ? ಎನ್ನುವಂತಹ ಪ್ರಶ್ನೆಗಳು ಉದ್ಭವಿಸುತ್ತವೆ ಎಂದು ದಾತಾರ್‌ ಹೇಳಿದ್ದಾರೆ.

ಸರ್ಕಾರಿ ನೇಮಕಾತಿಯಲ್ಲಿ ಶೇ.70ರಷ್ಟನ್ನು ಮೀಸಲು ಎಂದು ನಿಗದಿಗೊಳಿಸಿ, ಶೇ. 30ರಷ್ಟನ್ನು ಸಾಮಾನ್ಯ ಜನರಿಗೆ ಮೀಸಲುಗೊಳಿಸಿದರೆ ಅದು ಅವಕಾಶಗಳ ಸಮಾನ ಹಂಚಿಕೆ ತತ್ವವನ್ನು ಉಲ್ಲಂಘಿಸಿದಂತೆ ಎಂಬ ಅಂಬೇಡ್ಕರ್‌ ಅವರ ಅಭಿಪ್ರಾಯವನ್ನೂ ದಾತಾರ್‌ ಉಲ್ಲೇಖಿಸಿದ್ದಾರೆ.

ನ್ಯಾಯಾಲಯದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ದಾತಾರ್‌ ಅವರು ಇಂದಿರಾ ಸಾಹ್ನಿ ತೀರ್ಪು ಸಂವಿಧಾನದ 16 (4)ನೇ ವಿಧಿಗೆ ಮಾತ್ರವಲ್ಲ ಒಟ್ಟಾರೆಯಾಗಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದ್ದು ಎಂದು ಹೇಳಿದ್ದಾರೆ. ಯಾವುದೇ ತೀರ್ಪನಲ್ಲೂ ಇಂದಿರಾ ಸಾಹ್ನಿ ತೀರ್ಪನ್ನು ಅನುಮಾನಿಸಲಾಗಿಲ್ಲ ಎಂಬುದು ಮಹತ್ವದ ವಿಚಾರ ಎಂದು ದಾತಾರ್‌ ಹೇಳಿದ್ದಾರೆ.

ಶೇ. 50 ಮೀಸಲಾತಿ ಮೀರಿದ್ದನ್ನು ಪತ್ತೆ ಹಚ್ಚಿ ಅವುಗಳನ್ನು ವಜಾಗೊಳಿಸಿರುವ ಹೈಕೋರ್ಟ್‌ನ 10 ಆದೇಶಗಳನ್ನು ನಾವು ಗುರುತಿಸಿದ್ದೇವೆ. ಕನಿಷ್ಠ ನಾಲ್ಕು ಸಾಂವಿಧಾನಿಕ ಪೀಠಗಳು ಇಂದಿರಾ ಸಾಹ್ನಿ ತೀರ್ಪನ್ನು ಎತ್ತಿ ಹಿಡಿದಿವೆ ಎಂದು ದಾತಾರ್‌ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು. ಸಮಾನತೆಯ ಹಕ್ಕು ಎಲ್ಲದಕ್ಕೂ ಮಿಗಿಲಾಗಿದೆ ಎಂದು ಅಂಬೇಡ್ಕರ್‌ ಹೇಳಿದ್ದಾರೆ ಎಂದ ದಾತಾರ್‌ ಅವರು ಸಂವಿಧಾನದ 15, 16ನೇ ವಿಧಿಗಳ ಉದ್ದೇಶವು ಸಮಾನತೆಯನ್ನು ಸಾಧಿಸುವುದಾಗಿದೆ ಎಂದಿದ್ದಾರೆ.

ರಾಷ್ಟ್ರೀಯ ಹಿಂದುಳಿದ ಆಯೋಗವು ಮರಾಠಾ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಪ್ರಸ್ತಾವವನ್ನು 2000ದಲ್ಲಿ ತಿರಸ್ಕರಿಸಿತ್ತು. ಶೇ.50 ಮಿತಿಯು ಲಕ್ಷ್ಮಣ ರೇಖೆಯಾಗಿದ್ದು, ಸಾರ್ವಜನಿಕ ಹುದ್ದೆಗಳು ಮತ್ತು ಶಿಕ್ಷಣಕ್ಕೆ ಮೀಸಲಾತಿ ನೀಡುವಲ್ಲಿ ಪ್ರತಿ ರಾಜ್ಯ ವಿಧಾನಸಭೆಯು ಇದನ್ನು ಅನುಸರಿಸಬೇಕಾಗಿದೆ ಎಂದು ದಾತಾರ್‌ ಹೇಳಿದ್ದಾರೆ.

ಮಹಾರಾಷ್ಟ್ರದಂತಹ ಸಮೃದ್ಧ ಮತ್ತು ಪ್ರಮುಖ ರಾಜ್ಯವನ್ನು "ಅಸಾಧಾರಣ" ಪರಿಸ್ಥಿತಿಯ ವ್ಯಾಪ್ತಿಗೆ ಒಳಪಡಿಸುವುದನ್ನು ನ್ಯಾಯಾಲಯ ಪರಿಗಣಿಸಲು ಸಾಧ್ಯವಿಲ್ಲ. ಒಂದು ವೇಳೆ ಹಾಗೆ ಮಾಡಬೇಕಿದ್ದರೆ ಅವರು ಸಾಂವಿಧಾನಿಕ ತಿದ್ದುಪಡಿಯ ಮಾರ್ಗದ ಮೊರೆ ಹೋಗಬೇಕಿತ್ತು. ಹೀಗಾಗಿ ಎಸ್‌ಇಬಿಸಿ ಅಸಾಂವಿಧಾನಿಕ ಎಂದು ಅದನ್ನು ವಜಾಗೊಳಿಸಬೇಕು ಎಂದು ದಾತಾರ್ ವಾದಿಸಿದ್ದಾರೆ. 1902ರಿಂದಲೂ ಮರಾಠಾ ಸಮುದಾಯ ಹಿಂದುಳಿದಿದೆ ಎಂಬ ವಾದವೂ ಆಧಾರರಹಿತವಾಗಿದ್ದು, ಇಂದಿರಾ ಸಾಹ್ನಿ ತೀರ್ಪಿಗೆ ವಿರುದ್ಧವಾದ ಬಾಂಬೆ ಹೈಕೋರ್ಟ್‌ ಆದೇಶವನ್ನು ವಜಾಗೊಳಿಸಬೇಕು ಎಂದು ದಾತಾರ್‌ ನ್ಯಾಯಾಲಯಕ್ಕೆ ಮೊರೆ ಇಟ್ಟಿದ್ದಾರೆ.

ಶಿಕ್ಷಣ, ಸರ್ಕಾರಿ ಮತ್ತು ಬ್ಯಾಂಕಿಂಗ್‌ ಸೇರಿದಂತೆ ಎಲ್ಲಾ ವಲಯದಲ್ಲೂ ಮರಾಠಾ ಸಮುದಾಯ ಮುಂಚೂಣಿಯಲ್ಲಿದೆ. ಹೀಗಾಗಿ ಅವರು ಹಿಂದುಳಿದಿದ್ದಾರೆ ಎಂಬುದು ಸರಿಯಲ್ಲ ಎಂದು ಹಿರಿಯ ವಕೀಲ ಶ್ಯಾಮ್‌ ದಿವಾನ್‌ ವಾದಿಸಿದ್ದಾರೆ. ಮಂಗಳವಾರವು ಸಹ ದಿವಾನ್‌ ವಾದ ಮುಂದುವರೆಸಲಿದ್ದಾರೆ.