ಮರಾಠಾ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ‘ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಮಹಾರಾಷ್ಟ್ರ ರಾಜ್ಯ ಮೀಸಲಾತಿ ಕಾಯಿದೆ’ (ಎಸ್‌ಇಬಿಸಿ ಕಾಯಿದೆ) ಅನ್ನು ಪ್ರಶ್ನಿಸಲಾಗಿರುವ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳ ವಾದವನ್ನು ಆಲಿಸುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಮೀಸಲಾತಿಯನ್ನು ಶೇ. 50ಕ್ಕೆ ಮಿತಿಗೊಳಿಸಿರುವ ಇಂದಿರಾ ಸಾಹ್ನಿ ವರ್ಸಸ್ ಭಾರತ ಸರ್ಕಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ 1992ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಮರು ಪರಾಮರ್ಶೆ ಕುರಿತಾಗಿಯೂ ಪರಿಶೀಲಿಸುವುದಾಗಿ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಲ್ ನಾಗೇಶ್ವರ್ ರಾವ್, ಎಸ್ ಅಬ್ದುಲ್ ನಜೀರ್, ಹೇಮಂತ್ ಗುಪ್ತಾ ಮತ್ತು ರವೀಂದ್ರ ಭಟ್ ಅವರಿದ್ದ ಸಾಂವಿಧಾನಿಕ ಪೀಠ ಹೇಳಿದೆ.
ಅಲ್ಲದೆ, ಎಲ್ಲ ರಾಜ್ಯಗಳು ಈ ಕುರಿತು ಪ್ರತಿಕ್ರಿಯಿಸುವಂತೆ ನ್ಯಾಯಾಲಯವು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಮಾರ್ಚ್ 15ಕ್ಕೆ ಮುಂದೂಡಿದೆ. ಹಿರಿಯ ವಕೀಲ ಮುಕುಲ್ ರೋಹಟ್ಗಿ, ಕಪಿಲ್ ಸಿಬಲ್ ಮತ್ತು ಡಾ. ಎ ಎಂ ಸಿಂಘ್ವಿ ಅವರು ಈ ಪ್ರಕರಣದ ತೀರ್ಪು ಎಲ್ಲಾ ರಾಜ್ಯಗಳ ಮೇಲೆ ಪರಿಣಾಮ ಬೀರುವ ವಿಷಯವನ್ನು ಒಳಗೊಂಡಿರುತ್ತದೆ ಎಂದು ವಾದಿಸಿದ ನಂತರ ನ್ಯಾಯಪೀಠವು ಎಲ್ಲಾ ರಾಜ್ಯಗಳ ಪ್ರತಿಕ್ರಿಯೆ ಆಲಿಸುವ ನಿರ್ಧಾರವನ್ನು ತೆಗೆದುಕೊಂಡಿತು.
"ಸಂವಿಧಾನದ 102ನೇ ತಿದ್ದುಪಡಿಯ ಸಿಂಧುತ್ವದ ಪ್ರಮುಖ ವಿಚಾರ ಉದ್ಭವಿಸಿರುವ ಹಿನ್ನೆಲೆಯಲ್ಲಿ ರಾಜ್ಯಗಳಿಗೆ ನಾವು ನೋಟಿಸ್ ಜಾರಿಗೊಳಿಸುತ್ತೇವೆ," ಎಂದು ನ್ಯಾಯಾಲಯ ಆದೇಶಿಸಿದೆ.
‘ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಮಹಾರಾಷ್ಟ್ರ ರಾಜ್ಯ ಮೀಸಲಾತಿ ಕಾಯಿದೆʼಯ ಸಿಂಧುತ್ವವನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಯ ವಿಚಾರಣೆಯನ್ನು ಪೀಠ ನಡೆಸಿದೆ. ಸಂವಿಧಾನದ 342ಎ ವಿಧಿಗೆ ಮಾಡಲಾದ 102ನೇ ತಿದ್ದುಪಡಿಯು ಯಾವುದೇ ವರ್ಗ ಅಥವಾ ಸಮುದಾಯವನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ವರ್ಗ ಎಂದು ಆ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದಂತೆ ಘೋಷಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಿದೆ.
ಎಸ್‌ಇಬಿಸಿ ಕಾಯಿದೆಯಡಿ ಮರಾಠಾ ಸಮುದಾಯಕ್ಕೆ ಶೈಕ್ಷಣಿಕ ಸಂಸ್ಥೆಗಳು ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ. 16ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಈ ಕಾನೂನನ್ನು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. 2019ರ ಜೂನ್‌ನಲ್ಲಿ ಬಾಂಬೆ ಹೈಕೋರ್ಟ್ ಕಾಯಿದೆಯ ಸಿಂಧುತ್ವ ಎತ್ತಿ ಹಿಡಿದಿದ್ದು, ಶೈಕ್ಷಣಿಕ ಸಂಸ್ಥೆಗಳಲ್ಲಿ ಕೋಟಾವನ್ನು ಶೇ. 12ಕ್ಕೆ ಇಳಿಸಿದ್ದು, ಉದ್ಯೋಗದಲ್ಲಿ ಶೇ. 13ಕ್ಕೆ ಮಿತಿಗೊಳಿಸಿದೆ.
1992ರ ಇಂದಿರಾ ಸಾಹ್ನಿ ಪ್ರಕರಣದ ತೀರ್ಪಿನಲ್ಲಿ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಶೇ. 50ಕ್ಕೆ ಮಿತಿಗೊಳಿಸಿರುವುದನ್ನು ಉಲ್ಲಂಘಿಸಲಾಗುತ್ತಿದೆ ಎಂದು ಎಸ್‌ಇಬಿಸಿ ಕಾನೂನನ್ನು ಮನವಿಯಲ್ಲಿ ಪ್ರಶ್ನಿಸಲಾಗಿದೆ. ಇಂದು ವಿಚಾರಣೆಯ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು ಎಲ್ಲಾ ರಾಜ್ಯಗಳಿಗೂ ಔಪಚಾರಿಕ ನೋಟಿಸ್ ಜಾರಿಗೊಳಿಸುವಂತೆ ಸಲಹೆ ನೀಡಿದರು.
“ಸಂವಿಧಾನದ 342ಎ ನೇ ವಿಧಿಯ ವ್ಯಾಖ್ಯಾನವನ್ನು ಪ್ರಕರಣ ಒಳಗೊಂಡಿದ್ದು, ಎಲ್ಲಾ ರಾಜ್ಯಗಳ ಮೇಲೂ ಅದು ಪರಿಣಾಮ ಬೀರುತ್ತದೆ. ಎಲ್ಲಾ ರಾಜ್ಯಗಳನ್ನು ಆಲಿಸುವಂತೆ ನಾನು ಮನವಿ ಸಲ್ಲಿಸಿರುವೆ. ರಾಜ್ಯಗಳನ್ನು ಆಲಿಸದೇ ಈ ವಿಚಾರವನ್ನು ಸಮರ್ಥವಾಗಿ ನಿರ್ಧರಿಸಲಾಗದು” ಎಂದು ರೋಹಟ್ಗಿ ಹೇಳಿದರು.
ಕಾನೂನನ್ನು ಸಮರ್ಥಿಸಿರುವ ಅರ್ಜಿದಾರ ರಾಜೇಂದ್ರ ದಾತೆ ಪಾಟೀಲ್ ಪರ ವಾದಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ರೋಹಟ್ಗಿ ಅವರಿಗೆ ಬೆಂಬಲ ಸೂಚಿಸಿದರು. “ಈ ವಿಚಾರದಲ್ಲಿ ಸಾಂವಿಧಾನಿಕ ಪ್ರಶ್ನೆಯಿದ್ದು, ಎಲ್ಲಾ ರಾಜ್ಯಗಳ ಮೇಲೂ ಅದರ ಪರಿಣಾಮ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರವನ್ನಷ್ಟೇ ಆಲಿಸಿ ಪ್ರಕರಣವನ್ನು ಇತ್ಯರ್ಥ ಮಾಡಬಾರದು” ಎಂದು ಸಿಬಲ್ ಹೇಳಿದರು.
ರೊಹಟ್ಗಿ, ಸಿಬಲ್ ಮತ್ತು ಡಾ. ಸಿಂಘ್ವಿ ಅವರ ವಾದಕ್ಕೆ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಸಮ್ಮತಿಸಿದ ಹಿನ್ನೆಲೆಯಲ್ಲಿ ಪೀಠವು ಎಲ್ಲಾ ರಾಜ್ಯಗಳಿಗೂ ಒಂದು ಅವಕಾಶ ನೀಡಲು ನಿರ್ಧರಿಸಿತು. ಆದರೆ, ಹಿರಿಯ ವಕೀಲರಾದ ಶ್ಯಾಮ್ ದಿವಾನ್ ಮತ್ತು ಅರವಿಂದ್ ದಾತಾರ್ ಅವರು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದರು.