“ಒಂಬತ್ತು ನ್ಯಾಯಮೂರ್ತಿಗಳ ಪೀಠದ ಅಧಿಕಾರಯುತ ತೀರ್ಪಿನ ನಂತರ, ರಾಜ್ಯಗಳಿಂದ ಎಸ್ಇಬಿಸಿಯನ್ನು ಗುರುತಿಸುವ ಅಧಿಕಾರವನ್ನು ಹಿಂಪಡೆಯುವ ಯಾವುದೇ ತಿದ್ದುಪಡಿ ಜಾರಿಗೊಳಿಸುವುದನ್ನು ಯೋಚಿಸಲಾಗದು” ಎಂದು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಸುಪ್ರೀಂಕೋರ್ಟ್‌ಗೆ ಗುರುವಾರ ತಿಳಿಸಿದರು.
ಮರಾಠಾ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿ ಹೆಚ್ಚಿಸಿದ್ದ ಮಹಾರಾಷ್ಟ್ರ ರಾಜ್ಯ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ವರ್ಗಗಳ ಮೀಸಲಾತಿ (ಎಸ್‌ಇಬಿಸಿ) ಕಾಯಿದೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿದ ವಿವಿಧ ಅರ್ಜಿಗಳ ಅಂತಿಮ ವಿಚಾರಣೆಯ ನಾಲ್ಕನೇ ದಿನ ಎಜಿ ಅವರು ತಮ್ಮ ವಾದ ಮಂಡಿಸಿದರು.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಲ್ ನಾಗೇಶ್ವರ ರಾವ್, ಎಸ್ ಅಬ್ದುಲ್ ನಜೀರ್, ಹೇಮಂತ್ ಗುಪ್ತಾ ಹಾಗೂ ರವೀಂದ್ರ ಭಟ್ ಅವರಿದ್ದ ಪೀಠದ ಮುಂದೆ ವಾದವನ್ನು ಮಂಡಿಸಿದ ಎಜಿ ವೇಣುಗೋಪಾಲ್ ಅವರು, “9 ನ್ಯಾಯಮೂರ್ತಿಗಳ ಪೀಠದಿಂದ ವಿಶೇಷ ನಿರ್ದೇಶನವೊಂದು ಬಂದಾಗ (ಹಾಗೂ ಸರ್ಕಾರವು ಅದನ್ನು ಅನುಷ್ಠಾನಗೊಳಿಸುವ ಎಲ್ಲ ಸೂಚನೆಯನ್ನು ನೀಡಿದಾಗ) ಸಾಂವಿಧಾನಿಕ ತಿದ್ದುಪಡಿಯೊಂದನ್ನು ಮಾಡಲಾಗುತ್ತದೆ, ಆ ಮೂಲಕ ಹಿಂದುಳಿದ ವರ್ಗಗಳನ್ನು ಗುರುತಿಸುವ ರಾಜ್ಯಗಳ ಹಕ್ಕನ್ನು ಹಿಂದೆಗೆದುಕೊಳ್ಳಲಾಗುತ್ತದೆ ಎಂದು ಭಾವಿಸಬಹುದೇ?” ಎನ್ನುವ ಪ್ರಶ್ನೆ ಏಳುತ್ತದೆ.
ಆದರೆ ಹಾಗೆ ಮಾಡಲಾಗದು, “(ಇಂದ್ರಾ ಸಾಹ್ನಿ ಪ್ರಕರಣದಲ್ಲಿ) ಒಂಬತ್ತು ನ್ಯಾಯಮೂರ್ತಿಗಳ ಪೀಠದ ಅಧಿಕಾರಯುತ ತೀರ್ಪಿನ ನಂತರ, ರಾಜ್ಯಗಳಿಂದ ಎಸ್ಇಬಿಸಿಯನ್ನು ಗುರುತಿಸುವ ಅಧಿಕಾರವನ್ನು ಹಿಂಪಡೆಯುವ ಯಾವುದೇ ತಿದ್ದುಪಡಿ ಜಾರಿಗೊಳಿಸುವುದನ್ನು ಯೋಚಿಸಲಾಗದು” ಎಂದು ಎಜಿ ತಿಳಿಸಿದರು
ವಾದ ಮಂಡನೆಯ ವೇಳೆ ಎಜಿ ಅವರು 102ನೇ ತಿದ್ದುಪಡಿಯ ಮೂಲಕ ಸೇರಿಸಲ್ಪಟ್ಟ 342ಎ ವಿಧಿಯು ಕೇವಲ ‘ಕೆಂದ್ರ ಪಟ್ಟಿ’ಗೆ ಮಾತ್ರವೇ ಅನ್ವಯಿಸುತ್ತದೆ ಅದು ‘ರಾಜ್ಯ ಪಟ್ಟಿ’ಗೆ ಅನ್ವಯಿಸುವುದಿಲ್ಲ ಎನ್ನುವುದನ್ನು ಎಳೆಎಳೆಯಾಗಿ ವಿವರಿಸಿದರು. ರಾಜ್ಯದಲ್ಲಿರುವ ಕೇಂದ್ರದ ಸಂಸ್ಥೆಗಳು, ಇಲಾಖೆಗಳು, ಶೈಕ್ಷಣಿಕ ಸಂಸ್ಥೆಗಳ ವಿಚಾರದಲ್ಲಿ ಕೇಂದ್ರ ಪಟ್ಟಿಯನ್ನು ಅನುಸರಿಸಲಾಗುತ್ತದೆ. ಅದೇ ರೀತಿ, ರಾಜ್ಯವು ತನ್ನ ಇಲಾಖೆಗಳು, ಸರ್ಕಾರಿ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳ ವಿಚಾರದಲ್ಲಿ ರಾಜ್ಯ ಪಟ್ಟಿಯನ್ನು ಅನುಸರಿಸುತ್ತದೆ ಎಂದು ವಿವರಿಸಿದರು.
ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ವರ್ಗಗಳನ್ನು ಗುರುತಿಸುವ ಅಧಿಕಾರವನ್ನು 15(4), 16(4) ಮತ್ತು 12ನೇ ವಿಧಿಗಳ ಮೂಲಕ ರಾಜ್ಯ ಹಾಗೂ ಕೇಂದ್ರಕ್ಕೆ ಸಮನಾಗಿ ನೀಡಲಾಗಿದ್ದು, ಅವುಗಳು ತಮ್ಮ ಬಲವವನ್ನು ಈ ವಿಧಿಗಳಿಂದ ಪಡೆಯುತ್ತವೆ. ಇವುಗಳಿಗೆ ತಿದ್ದುಪಡಿಯನ್ನು ತರದೆ ರಾಜ್ಯಕ್ಕೆ ನೀಡಲಾಗಿರುವ ಅಧಿಕಾರವನ್ನು ಮೊಟಕುಗೊಳಿಸಲಾಗದು. ಎನ್ನುವುದನ್ನು ವಿವರಿಸಿದರು. ಅಲ್ಲದೆ, 15(4) ಮತ್ತು 16(4) ವಿಧಿಗಳು 342 ಎ ವಿಧಿಯಿಂದ ಯಾವುದೇ ರೀತಿಯ ತೊಂದರೆ, ಪರಿಣಾಮವನ್ನು ಎದುರಿಸುವುದಿಲ್ಲ. ಇವರೆಡೂ ಪ್ರತ್ಯೇಕವಾದವು ಎಂದು ಹೇಳಿದರು. ಹಾಗಾಗಿ ರಾಜ್ಯಗಳಿಗೆ ಈ ವಿಚಾರದಲ್ಲಿ ಸ್ವತಂತ್ರ ಅಧಿಕಾರವಿದ್ದು ಅದನ್ನು 342ಎ ಅಡ್ಡಿಪಡಿಸುವುದಿಲ್ಲ. ಈ ಅಧಿಕಾರವು ಅಬಾಧಿತವಾಗಿ ಹೀಗೆಯೇ ಮುಂದುವರೆಯಲಿದೆ ಎಂದರು. 342ಎ ವಿಧಿಯು ನಿರ್ದಿಷ್ಟವಾಗಿ ಕೇಂದ್ರ ಸರ್ಕಾರವು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ವರ್ಗಗಳ ಉನ್ನತಿಗೆ ಕೈಗೊಳ್ಳುವ ತನ್ನ ಸಕಾರಾತ್ಮಕ ಕ್ರಿಯೆಗಳಿಗಾಗಿ (ಮೀಸಲಾತಿ) ಅನ್ವಯಿಸುವುದಾಗಿದೆ. ಇದು ರಾಜ್ಯಗಳಿಗಿರುವ ಅಧಿಕಾರವನ್ನು ಮೊಟಕುಗೊಳಿಸುವುದಿಲ್ಲ ಎನ್ನುವುದನ್ನು ವಿಷದಪಡಿಸಿದರು.
ಸಂವಿಧಾನದ 15(4)ಮತ್ತು 16(4) ವಿಧಿಗಳಿಗೆ ತಿದ್ದುಪಡಿ ತಂದು ಹಿಂದುಳಿದ ವರ್ಗಗಳನ್ನು ಗುರುತಿಸುವ ರಾಜ್ಯದ ಹಕ್ಕುಗಳನ್ನು ಮೊಟಕುಗೊಳಿಸದೆ ಇರುವಾಗ 342 ಎ ವಿಧಿಯು ರಾಜ್ಯದ ಹಕ್ಕುಗಳನ್ನು ಮೊಟಕುಗೊಳಿಸುತ್ತದೆ ಎಂದು ವ್ಯಾಖ್ಯಾನಿಸುವುದು ತಪ್ಪಾಗುತ್ತದೆ ಎಂದು ವಿವರಿಸಿದರು.
“ವಿಶೇಷವಾಗಿ ಸಂವಿಧಾನದ ಮುನ್ನುಡಿಯ ಉದ್ದೇಶ ಮತ್ತು ಸಂವಿಧಾನದ ನಿರ್ದೇಶನ ತತ್ವಗಳನ್ನು ಮುನ್ನಡೆಸುವುದು ಎಂಬ ಅರ್ಥ ಬಂದಾಗ ಸಂವಿಧಾನದ ಪ್ರಸ್ತಾವನೆಯಲ್ಲಿರುವ ಆಶಯಗಳ ಪ್ರಭಾವವನ್ನು ಪರೋಕ್ಷವಾಗಿ ಮಾರ್ಪಡಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.
ವಾದ ಮಂಡನೆಯ ವೇಳೆ, "ಸಂವಿಧಾನದ 15 (4) ಮತ್ತು 16 (4) ನೇ ವಿಧಿ ಅನ್ವಯ ರಾಜ್ಯಕ್ಕೆ ದುರದೃಷ್ಟಕರ ರೀತಿಯಲ್ಲಿ ಒಂದು ಕೆಟ್ಟ ಗುಣವನ್ನು ನೀಡಲಾಗಿದ್ದು ಅದರಂತೆ ಈಗ ಅವರು (ಶಾಸನ ರೂಪಿಸುವವರು) ಕಾಲಕಾಲಕ್ಕೆ ಅದನ್ನು (ಮೀಸಲಾತಿಗೆ ಸಂಬಂಧಿಸಿದ ಕಾಯಿದೆಯನ್ನು) ತಿದ್ದುಪಡಿ ಮಾಡುತ್ತಿದ್ದಾರೆ. ನಾನು ಖುದ್ದು ಗಮನಿಸಿರುವಂತೆ ತಮಿಳುನಾಡಿನಲ್ಲಿ ಒಂದು ಗುಂಪಿಗೆ ಚುನಾವಣೆಗೂ ಮುನ್ನ ಹೀಗೆ ಮಾಡಿ (ಮೀಸಲಾತಿ ನೀಡಿ) ಮತಗಳನ್ನು ಪಡೆಯಲಾಗಿದೆ” ಎನ್ನುವ ಅಂಶವನ್ನೂ ಹೇಳಿದರು. ಆದರೆ ಇದನ್ನು ಆಮಿಷ ಎಂದು ಪರಿಗಣಿಸದಿರುವುದು ದುರದೃಷ್ಟಕರ ಎಂದರು.
ಪಂಜಾಬ್ ಮೀಸಲಾತಿ ಪಟ್ಟಿಯಲ್ಲಿ 71 ಜಾತಿಗಳಿದ್ದು ಕೇಂದ್ರ ಪಟ್ಟಿಯಲ್ಲಿ 68 ಜಾತಿಗಳಿವೆ. ಎರಡಕ್ಕೂ ಭಿನ್ನತೆ ಇರುತ್ತದೆ ಎಂಬ ಕಾರಣಕ್ಕೆ ಇದನ್ನು ಉದಾಹರಿಸಿದ್ದಾಗಿ ತಿಳಿಸಿದರು.
ಇದೇ ವೇಳೆ ಪಂಜಾಬ್ ಸರ್ಕಾರ ಮತ್ತು ದೇವಿಂದರ್ ಸಿಂಗ್ ಪ್ರಕರಣವನ್ನು ಪ್ರಸ್ತಾಪಿಸಿದ ಅವರು ಅದರಲ್ಲಿ ಸಂವಿಧಾನದ 14, 15, 16, 338, 341, 342 342 ಎ ವ್ಯಾಖ್ಯಾನವನ್ನು ಪ್ರಶ್ನಿಸಿ 7 ಸದಸ್ಯರ ಪೀಠಕ್ಕೆ ಉಲ್ಲೇಖಿಸಲಾಗಿದೆ. ಹಾಗಾಗಿ ಪ್ರಸ್ತುತ ಪ್ರಕರಣವನ್ನು ಮರಾಠರನ್ನು ಎಸ್‌ಇಬಿಸಿ ಎಂದು ಗುರುತಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತ್ರವೇ ಸೀಮಿತವಾಗಿ ಪರಿಗಣಿಸುವಂತೆ ವಿನಂತಿಸಿದರು. ಇದಕ್ಕೆ ನ್ಯಾಯಾಲಯ ಪ್ರತಿ ದಾವೆಯಲ್ಲಿಯೂ 342 ಎ ವಿಧಿಯ ವಿಚಾರ ಅಡ್ಡ ಬರುತ್ತಿರುವುದರಿಂದ ಈ ವಿಧಿಯ ʼಸರಿಯಾದ ವ್ಯಾಖ್ಯಾನ ಯಾವುದು ಎಂಬುದನ್ನು ಕಂಡುಕೊಳ್ಳಬೇಕಿದೆʼ ಎಂದಿತು.
ವಿಚಾರಣೆ ವೇಳೆ ಹಿರಿಯ ನ್ಯಾಯವಾದಿ ಬಿ ಎಚ್ ಮರ್ಲಪಲ್ಲೆ, ವಕೀಲರಾದ ಗುಣರತನ್ ಸದವರ್ತೆ, ಎಸ್ ಬಿ ತಾಳೇಕರ್, ಆರ್ ಕೆ ದೇಶಪಾಂಡೆ, ಅಮಿತ್ ಆನಂದ್ ತಿವಾರಿ, ಪ್ರೀತೇಶ್ ಕಪೂರ್ ಅವರು ಕೂಡ ಗುರುವಾರ ವಾದ ಮಂಡಿಸಿದರು. ಹಿರಿಯ ನ್ಯಾಯವಾದಿ ಮುಕುಲ್ ರೋಹಟ್ಗಿ ಅವರ ವಾದದ ನಂತರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಿಚಾರಣೆ ನಡೆಸಲು ನ್ಯಾಯಾಲಯ ಅನುವು ಮಾಡಿಕೊಟ್ಟಿತು. ನಾಳೆ (ಶುಕ್ರವಾರ) ಮಹಾರಾಷ್ಟ್ರ ಸರ್ಕಾರದ ಪರವಾಗಿ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ವಾದ ಮಂಡಿಸಲಿದ್ದಾರೆ.