ವೈವಾಹಿಕ ಅತ್ಯಾಚಾರ ಕುರಿತು ದೆಹಲಿ ಹೈಕೋರ್ಟ್ ವಿಭಾಗೀಯ ಪೀಠದಿಂದ ನಿನ್ನೆ ಭಿನ್ನ ತೀರ್ಪು ಹೊರಬಂದಿದ್ದು ನ್ಯಾಯಮೂರ್ತಿಗಳಲ್ಲಿ ಒಬ್ಬರಾದ ಸಿ ಹರಿಶಂಕರ್ ಅವರು ವೈವಾಹಿಕ ಅತ್ಯಾಚಾರ ಅಪರಾಧೀಕರಿಸುವುದನ್ನು ವಿರೋಧಿಸಿ ತೀರ್ಪು ನೀಡಿದ್ದಾರೆ. ಆ ಮೂಲಕ ಹೆಂಡತಿಯ ಸಮ್ಮತಿ ಇಲ್ಲದಿದ್ದರೂ ಪತಿ ಹೆಂಡತಿಯೊಂದಿಗೆ ನಡೆಸುವ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರ ವ್ಯಾಪ್ತಿಯಿಂದ ಹೊರಗಿಡುವ ಐಪಿಸಿ ಸೆಕ್ಷನ್ 375 ರ 2ನೇ ವಿನಾಯಿತಿಯನ್ನು ರದ್ದುಗೊಳಿಸಲು ನಿರಾಕರಿಸಿದ್ದಾರೆ.
ಅಪರಿಚಿತರಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯಂತೆಯೇ ಹೆಂಡತಿ ತನ್ನ ಪತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಲು ನಿರಾಕರಿಸುತ್ತಾಳೆ ಎಂಬ ಊಹೆ ನ್ಯಾಯಸಮ್ಮತವಲ್ಲ ಜೊತೆಗೆ ಅವಾಸ್ತವಿಕ ಕೂಡ ಎಂದು ಸುಮಾರು 200 ಪುಟಗಳಿರುವ ತಮ್ಮ ತೀರ್ಪಿನಲ್ಲಿ, ನ್ಯಾ. ಹರಿಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಪತ್ನಿಗೆ ಇಷ್ಟವಿಲ್ಲದಿದ್ದರೂ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಪತಿ ಒತ್ತಾಯಿಸುವುದು ತಪ್ಪು ಎಂದು ನ್ಯಾಯಾಧೀಶರು ಹೇಳಿದ್ದಾರೆ. ಆದರೆ, ಮಹಿಳೆಯು ಪುರುಷನನ್ನು ಮದುವೆಯಾಗಲು ನಿರ್ಧರಿಸಿದಾಗ, ಅವಳು ಪ್ರಜ್ಞಾಪೂರ್ವಕವಾಗಿ ಮತ್ತು ಸ್ವಇಚ್ಛೆಯಿಂದ ಲೈಂಗಿಕತೆಯು ಅವಿಭಾಜ್ಯ ಅಂಗವಾಗಿರುವ ಸಂಬಂಧ ಪ್ರವೇಶಿಸಿರುತ್ತಾಳೆ ಮತ್ತು ಅರ್ಥಪೂರ್ಣ ದಾಂಪತ್ಯ ಸಂಬಂಧಗಳನ್ನು ನಿರೀಕ್ಷಿಸುವ ಹಕ್ಕನ್ನು ಮಹಿಳೆ ತನ್ನ ಪತಿಗೆ ನೀಡಿರುತ್ತಾಳೆ ಎಂದಿದ್ದಾರೆ.
"ಆದ್ದರಿಂದ, ಇಂತಹ ಪರಿಸ್ಥಿತಿಯಲ್ಲಿ, ಪುರುಷ ಒಂದು ನಿರ್ದಿಷ್ಟ ಸಂದರ್ಭದಲ್ಲಿ ಆಕೆಯಿಂದ ಲೈಂಗಿಕತೆ ಅವಳನ್ನು ಬಯಸಿದರೆ ಆಗ ಅವನು ಮದುವೆಯ ಮೂಲಕ ತನಗೆ ಇರುವ ಹಕ್ಕನ್ನು ಚಲಾಯಿಸಿರುತ್ತಾನೆ ಮತ್ತು ತನ್ನ ಹೆಂಡತಿಗೆ ಮದುವೆಯ ಮೂಲಕ ಆಕೆ ಹೊತ್ತ ಹೊಣೆ ನಿಭಾಯಿಸಲು ವಿನಂತಿಸುತ್ತಾನೆ, ಹೀಗಾಗಿ, ಅಪರಿಚಿತರಿಂದ ನಡೆದ ಅತ್ಯಾಚಾರಕ್ಕೆ ಇದನ್ನು ಸಮೀಕರಿಸಲಾಗದು" ಎಂದು ತೀರ್ಪು ಹೇಳಿದೆ.
ಗಂಡ ಹೆಂಡತಿಯೊಂದಿಗೆ ಸಂಭೋಗದಲ್ಲಿ ತೊಡಗಲು ನಿರಾಕರಿಸಿದರೂ ಇದನ್ನು ಅಪರಿಚಿತರು ಮೋಹಿಸುವ ಕ್ರಿಯೆಗೆ ಹೋಲಿಸಲಾಗದು. ಅಂತಹ ಸಂದರ್ಭದಲ್ಲಿ ಹೆಂಡತಿಯ ಮೇಲೆ ಗಂಡನ ಲೈಂಗಿಕತೆಯ ಪರಿಣಾಮವನ್ನು ಅಪರಿಚಿತರಿಂದ ಅತ್ಯಾಚಾರಕ್ಕೊಳಗಾದ ಮಹಿಳೆ ಎದುರಿಸುವ ಪರಿಣಾಮಕ್ಕೆ ಸಮೀಕರಿಸಲಾಗದು” ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಹೀಗೆ ಹೇಳುವ ಮೂಲಕ “ವೈವಾಹಿಕ ನಿರೀಕ್ಷೆಗಳು ನ್ಯಾಯಸಮ್ಮತವಾದರೂ ಕಡಿವಾಣವಿಲ್ಲದ (ಲೈಂಗಿಕ) ಪ್ರವೇಶವನ್ನು ಮತ್ತು ಅಥವಾ ವೈವಾಹಿಕ ಸವಲತ್ತುಗಳನ್ನು ಪತಿ ಹೆಂಡತಿಯಿಂದ ಕೋರಬಾರದು ಎಂಬ ಹಿರಿಯ ನ್ಯಾಯಮೂರ್ತಿ ರಾಜೀವ್ ಶಕ್ದರ್ ಅವರ ತೀರ್ಪನ್ನು ನ್ಯಾ. ಹರಿ ಶಂಕರ್ ಅವರು ಒಪ್ಪಲಿಲ್ಲ.