Sr. Advocate Rajshekhar Rao with Delhi High Court

 
ಸುದ್ದಿಗಳು

[ವೈವಾಹಿಕ ಅತ್ಯಾಚಾರ] ಮಹಿಳೆ ವಿವಾಹವಾದ ಮಾತ್ರಕ್ಕೆ ಕಾನೂನು ಕ್ರಮ ಜರುಗಿಸುವ ಹಕ್ಕು ರದ್ದಾಗಲಿದೆಯೇ? ಅಮಿಕಸ್‌ ಪ್ರಶ್ನೆ

ಒಂದು ಲೋಟ ಟೀ ತಯಾರಿಸುವುದನ್ನು ಒಪ್ಪಿಗೆ ವಿಚಾರಕ್ಕೆ ಹೋಲಿಕೆ ಮಾಡಲಾಗುವ ಥೇಮ್ಸ್‌ ವ್ಯಾಲಿ ಪೊಲೀಸ್‌ ವಿಡಿಯೊವನ್ನು ರಾವ್‌ ಅವರು ವಿಚಾರಣೆಯ ಸಂದರ್ಭದಲ್ಲಿ ತೋರಿಸಿದರು.

Bar & Bench

ಸಮಕಾಲೀನ ಪ್ರಪಂಚದಲ್ಲಿ ಅತ್ಯಾಚಾರವನ್ನು ಅತ್ಯಾಚಾರ ಎಂದು ಕರೆಯಲು ಅವಕಾಶ ನಿರಾಕರಿಸುವುದು ಸಮರ್ಥನೀಯ ಮತ್ತು ನ್ಯಾಯಸಮ್ಮತವೇ ಎಂದು ಅಮಿಕಸ್‌ ಕ್ಯೂರಿ ರಾಜಶೇಖರ್‌ ರಾವ್‌ ಅವರು ದೆಹಲಿ ಹೈಕೋರ್ಟ್‌ಗೆ ಶುಕ್ರವಾರ ಪ್ರಶ್ನಿಸಿದ್ದಾರೆ.

“ಇಂದಿನ ಕಾಲದಲ್ಲಿ ಅತ್ಯಾಚಾರವನ್ನು ಅತ್ಯಾಚಾರ ಎಂದು ಹೇಳಲು ಅವಕಾಶ ನಿರಾಕರಿಸುವುದು ಸಮರ್ಥನೀಯವೇ. ಇದಕ್ಕೆ ಬದಲಾಗಿ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 498ಎ ಅಡಿ ಕ್ರಮಕೈಗೊಳ್ಳುವಂತೆ ಮಾಡುವುದು ಏಕೆ?” ಎಂದು ಅವರು ಪ್ರಶ್ನಿಸಿದ್ದಾರೆ.

ಪತ್ನಿಯೊಂದಿಗೆ ಅಸಮ್ಮತಿಯ ಸಂಭೋಗವನ್ನು ಅತ್ಯಾಚಾರ ವ್ಯಾಪ್ತಿಯಿಂದ ಹೊರಗಿಟ್ಟಿರುವ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 375ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ರಾಜೀವ್‌ ಶಖ್ದೇರ್‌ ಮತ್ತು ಸಿ ಹರಿ ಶಂಕರ್‌ ಅವರಿದ್ದ ವಿಭಾಗೀಯ ಪೀಠವು ನಡೆಸಿತು.

ಒಂದು ಲೋಟ ಟೀ ಕುಡಿಯುವುದನ್ನು ಲೈಂಗಿಕ ಕ್ರಿಯೆಯ ಒಪ್ಪಿಗೆ ವಿಚಾರಕ್ಕೆ ಹೋಲಿಕೆ ಮಾಡಲಾಗುವ ಥೇಮ್ಸ್‌ ವ್ಯಾಲಿ ಪೊಲೀಸ್‌ ವಿಡಿಯೊವನ್ನು ರಾವ್‌ ಅವರು ವಿಚಾರಣೆಯ ಸಂದರ್ಭದಲ್ಲಿ ತೋರಿಸಿದರು.

“ಮದುವೆಗೂ ಮುನ್ನ ಸಂಗಾತಿಯ ಮೇಲೆ ಅತ್ಯಾಚಾರ ಎಸಗಿದರೆ ಆಕೆಗೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲು ಅವಕಾಶವಿರುತ್ತದೆ. ಹೀಗಿರುವಾಗ, ಆಕೆ ವಿವಾಹವಾದ ಮಾತ್ರಕ್ಕೆ ಈ ಹಕ್ಕನ್ನು ಕಸಿದುಕೊಳ್ಳಲಾಗುತ್ತದೆಯೇ? ಒಪ್ಪಿಗೆ ಪಡೆಯದೇ ಅತ್ಯಾಚಾರ ಮಾಡಿದ ಆರೋಪಕ್ಕಾಗಿ ಮಹಿಳೆಗೆ ಆರೋಪಿತ ವ್ಯಕ್ತಿಯ ಮೇಲಾಗಲಿ, ಪತಿಯ ಮೇಲಾಗಲಿ ಕಾನೂನು ಕ್ರಮ ಜರುಗಿಸುವ ಅವಕಾಶ ನಿರಾಕರಿಸುವುದು ಆಕೆಯ ಸಮ್ಮತಿಯನ್ನು ಅಳಿಸಿಹಾಕುವ ಪರಿಣಾಮವನ್ನು ಹೊಂದಿರುತ್ತದೆ” ಎಂದು ರಾವ್‌ ವಾದಿಸಿದರು.

“ಕಾನೂನಿನಲ್ಲಿ ಪರಿಗಣಿಸಿರುವಂತೆ ಯಾವುದೇ ಮಹಿಳೆಯು ವೈಯಕ್ತಿಕ ಆಯ್ಕೆಯನ್ನು ಹೊಂದಿದ್ದಾಳೆ… ಪ್ರತಿಬಾರಿಯು ಪತ್ನಿಯು ಪತಿಯ ಇಚ್ಛೆಗೆ ತಲೆಬಾಗಬೇಕೆ ಎಂಬ ಪ್ರಶ್ನೆಯನ್ನು ನಾವು ಕೇಳಬೇಕಿದೆ. ಮಹಿಳೆಯನ್ನು ಪ್ರೀತಿಸುವಂತೆ ಯಾರೂ ಒತ್ತಾಯಿಸುವಂತಿಲ್ಲ ಎಂದು ಕಾನೂನು ಹೇಳುತ್ತದೆ. ವಿನಾಯಿತಿಯೊಂದನ್ನು ಹೊರತುಪಡಿಸಿ ಉಳಿದಂತೆ ಸೆಕ್ಷನ್‌ 375ರ ಹಿಂದಿರುವ ತತ್ವ ಇದಾಗಿದೆ… ವಿಪರ್ಯಾಸವೆಂದರೆ, 'ಮಹಿಳೆಯರೇ, ಯುವತಿಯರೇ ಕ್ಷಮಿಸಿ, ಇದು ಅತ್ಯಾಚಾರವಲ್ಲ ಎಂದು ಕಾನೂನಿನಡಿಯು ವಿನಾಯಿತಿಯು ಹೇಳುತ್ತಿದೆ. ನಾನು ನಿಮಗೆ ನೆರವು ನೀಡುತ್ತೇನೆ ಎನ್ನುವ ಕಾನೂನು, ಆದರೆ ನಿಮ್ಮ ಮೇಲೆ ಎಸಗಿದ್ದನ್ನು (ಅತ್ಯಾಚಾರವನ್ನು) ಮಾತ್ರ ಹಾಗೆಂದು ಕರೆಯಲು ಅನುಮತಿಸುವುದಿಲ್ಲ' ಎಂದು ಹೇಳೂತ್ತದೆ," ಎಂದು ಅವರು ಕಾನೂನಿನೊಳಗಿರುವ ವಿರೋಧಾಭಾಸಗಳನ್ನು ಮಂಡಿಸಿದರು.

ಪತಿಗೆ ಹಕ್ಕಿಲ್ಲ ಎಂದು ಹೇಳುತ್ತಿಲ್ಲ. ಆದರೆ, ಕಠಿಣವಾದ ಕಾನೂನಿನಿಂದ ನುಣಿಚಿಕೊಳ್ಳುವ ಹಕ್ಕು ಪತಿಗೆ ಇದೆಯೇ ಎಂಬುದಾಗಿದೆ. ಇದು ಜನ್ಮತಹ ಹಕ್ಕೇ ಅಥವಾ ಅದಕ್ಕೆ ಅವರು ಅರ್ಹವಾಗಿದ್ದಾರೆಯೇ? ಎಂದು ರಾವ್‌ ಅವರು ಪ್ರಶ್ನಿಸಿದ್ದಾರೆ. ಸೋಮವಾರ ವಿಚಾರಣೆ ಮುಂದುವರಿಯಲಿದೆ.