ವೈವಾಹಿಕ ಅತ್ಯಾಚಾರ: ಸರಿ ಇರಲಿ, ತಪ್ಪಿರಲಿ ವಿಚಾರಣೆಯಿಂದ ದೂರ ಸರಿಯುವುದಿಲ್ಲ ಎಂದ ದೆಹಲಿ ಹೈಕೋರ್ಟ್

ಕ್ರಿಮಿನಲ್ ಕಾನೂನಿಗೆ ಸಂಬಂಧಿಸಿದ ಅಂಶಗಳಲ್ಲಿ ಸಹಾಯ ಮಾಡಲು ನ್ಯಾಯಾಲಯವು ಹಿರಿಯ ವಕೀಲೆ ರೆಬೆಕಾ ಜಾನ್ ಅವರನ್ನು ನೇಮಿಸಿದ್ದು ಇಂದು ವಿಚಾರಣೆ ಮುಂದುವರೆಯಲಿದೆ.
Delhi High Court

Delhi High Court


Published on

ವೈವಾಹಿಕ ಅತ್ಯಾಚಾರದಂತಹ ಸಮಸ್ಯೆಯನ್ನು ನ್ಯಾಯಾಲಯದ ಮುಂದೆ ಪ್ರಶ್ನಿಸಿದಾಗಲೆಲ್ಲಾ ನ್ಯಾಯಾಲಯಗಳು ಹಿಂದೆ ಸರಿದು ಪರಿಸ್ಥಿತಿ ಸರಿಪಡಿಸಲು ನಿರಾಕರಿಸಬೇಕೇ ಎಂದು ದೆಹಲಿ ಹೈಕೋರ್ಟ್ ಬುಧವಾರ ಪ್ರಶ್ನಿಸಿದೆ [ಆರ್‌ಐಟಿ ಪ್ರತಿಷ್ಠಾನ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಐಪಿಸಿ 375ನೇ ಸೆಕ್ಷನ್‌ಗೆ ಹೊರತಾಗಿ ಪ್ರಸ್ತುತ ಅಪರಾಧವಾಗಿರದ ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಣಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ರಾಜೀವ್ ಶಕ್ದೆರ್ ಅವರು ಈ ಪ್ರಶ್ನೆ ಕೇಳಿದರು.

ನ್ಯಾಯಮೂರ್ತಿ ಸಿ ಹರಿಶಂಕರ್ ಅವರನ್ನೂ ಒಳಗೊಂಡಿರುವ ಪೀಠವು, ಶಾಸಕಾಂಗವು ಶಾಸನ ಪುಸ್ತಕದಲ್ಲಿ ಈ ನಿಬಂಧನೆಯನ್ನು ಏಕೆ ಇರಿಸಿದೆ ಎಂಬ ವಾದಗಳ ಹಂತವನ್ನು ತಾವು ದಾಟಿ ಬಂದಿರುವುದಾಗಿ ಹೇಳಿತು.

"ಇದು (ಇಂತಹ ಪ್ರಕರಣ) ಬಂದಾಗಲೆಲ್ಲಾ ನಾವು ಹಿಂದೆ ಸರಿಯೇಬೇಕ? ನಾವು ಇಲ್ಲ ಎನ್ನುತ್ತೇವೆ. ಸೆಕ್ಷನ್ 377 ಅನ್ನು (ಸಲಿಂಗ ವಿವಾಹವನ್ನು ಅಪರಾಧೀಕರಣಗೊಳಿಸುವುದು) ಉದಾಹರಣೆಯಾಗಿ ತೆಗೆದುಕೊಳ್ಳಿ. ಈ ನ್ಯಾಯಾಲಯ ಅದನ್ನು ಅಪರಾಧವಲ್ಲ ಎಂದಿತು. ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿತು. ಆದರೆ ಇಂತಹ ಪ್ರಕರಣಗಳು ನಿಮ್ಮೊಂದಿಗೆ ಉಳಿಯುವಂತಹವಾಗಿದ್ದು ಮತ್ತೆ ಮರುಕಳಿಸುತ್ತವೆ. ಸುಪ್ರೀಂ ಕೋರ್ಟ್ ಅದನ್ನು ಮರುಪರಿಶೀಲಿಸಿತು. ದೆಹಲಿ ಹೈಕೋರ್ಟ್ ತೀರ್ಪು ಮತ್ತು ಸುಪ್ರೀಂ ಕೋರ್ಟ್‌ ಮೊದಲ ಸುತ್ತಿನ ವಿಚಾರಣೆ ನಡುವೆ ಅದನ್ನು ಸರಿಪಡಿಸುವ ಎಲ್ಲಾ ಅವಕಾಶ ಸಂಸತ್ತಿಗಿತ್ತು. ಅದು (ಸಂಸತ್ತು) ಸರಿಪಡಿಸುವುದೇ ಇರುವುದನ್ನು ಆಯ್ಕೆ ಮಾಡಿಕೊಂಡಿತು, ”ಎಂದು ಪೀಠ ಟೀಕಿಸಿತು.

Also Read
ಶಕ್ತಿ ಮಿಲ್ ಅತ್ಯಾಚಾರ ಪ್ರಕರಣ: 3 ಅಪರಾಧಿಗಳ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಿದ ಬಾಂಬೆ ಹೈಕೋರ್ಟ್

ನ್ಯಾಯಾಧೀಶರು ತಮ್ಮ ನೇಮಕಾತಿಗಾಗಿ ಮತದಾರರ ಬಳಿಗೆ ಹೋಗಬೇಕಿಲ್ಲ ಎಂಬ ಅಂಶದಲ್ಲಿ ಭಾರತೀಯ ನ್ಯಾಯಾಲಯಗಳ ಶಕ್ತಿ ಅಡಗಿದೆ ಎಂದು ನ್ಯಾ.ಶಕ್ದೆರ್ ಹೇಳಿದರು. "ನಾವು ಇದಕ್ಕೆ ಬೆನ್ನು ಹಾಕಲಾಗದು. ನಮಗೆ ಮಾರ್ಗದರ್ಶನ ಪಡೆಯಲು ಸಂವಿಧಾನವಿದೆ. ನಾವು ಸರಿ ಇರಬಹುದು; ತಪ್ಪಿರಬಹುದು. ಒಂದು ವೇಳೆ ನಾವು ತಪ್ಪು ಹೆಜ್ಜೆ ಇರಿಸಿದರೆ ನಮ್ಮನ್ನು ಸರಿಪಡಿಸಲಾಗುವುದು" ಎಂದರು.

ಇದೇ ವೇಳೆ ಕ್ರಿಮಿನಲ್ ಕಾನೂನಿನ ಅಂಶಗಳ ವಿಚಾರದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡಲು ಪೀಠ ಹಿರಿಯ ವಕೀಲೆ ರೆಬೆಕಾ ಜಾನ್ ಅವರನ್ನು ನ್ಯಾಯಾಲಯ ನೇಮಿಸಿತು.

ಬುಧವಾರ ಅಮಿಕಸ್ ಕ್ಯೂರಿ ಮತ್ತು ಹಿರಿಯ ವಕೀಲ ರಾಜಶೇಖರ್ ರಾವ್ ಅವರು ತಮ್ಮ ವಾದ ಮಂಡಿಸಿ ಅರ್ಜಿಗಳು ತಕರಾರು ತೆಗೆದಿರುವ ವಿನಾಯಿತಿಯನ್ನು ರದ್ದುಗೊಳಿಸುವಂತೆ ಕೋರಿದರು. ಕೆಲವೊಮ್ಮೆ ಶಾಸಕಾಂಗ ಆಲಸ್ಯದಿಂದ ಕೂಡಿದ್ದು ಸೆಕ್ಷನ್‌ 226ನೇ ವಿಧಿಯ ಅಡಿಯಲ್ಲಿ ಕ್ರಮ ಕೈಗೊಂಡು ಹೈಕೋರ್ಟ್ ಈ ನಿಬಂಧನೆಯನ್ನು ರದ್ದುಗೊಳಿಸುವುದು ಬುದ್ಧಿವಂತಿಕೆಯಾಗಿದೆ ಎಂದು ರಾವ್ ಹೇಳಿದರು.

ಪ್ರಕರಣದಲ್ಲಿ ಮಧ್ಯಪ್ರವೇಶಕರಾಗಿರುವವರ ಪರ ವಾದ ಮಂಡಿಸಿದ ವಕೀಲ ರಾಜ್ ಕಪೂರ್ ಅವರು ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಿಸುವುದು ವಿವಾಹ ಎಂಬ ಸಂಸ್ಥೆಯನ್ನು ನಾಶಪಡಿಸಬಲ್ಲದು ಎಂದು ನ್ಯಾ. ವರ್ಮಾ ಸಮಿತಿಯ ಹಲವು ಸದಸ್ಯರು ಭಾವಿಸಿದ್ದಾರೆ. ಶಾಸಕಾಂಗ ಕಾಯಿದೆಯ ಔಚಿತ್ಯ, ಅನುಕೂಲತೆ ಮತ್ತು ಅಗತ್ಯವು ಶಾಸಕಾಂಗದ ನಿರ್ಣಯಕ್ಕಾಗಿಯೇ ಹೊರತು ನ್ಯಾಯಾಲಯಗಳಲ್ಲ. ಸಂಸತ್ತು ಪರಿಚಯಿಸಿದ ಶಾಸನಬದ್ಧ ಕಾನೂನನ್ನು ರದ್ದುಪಡಿಸಲು ಬೇರೆ ದೇಶಗಳ ಕಾನೂನುಗಳನ್ನು ಬಳಸಲಾಗದು. ಭಾರತವು ಪಾಶ್ಚಾತ್ಯ ಪರಿಕಲ್ಪನೆಗಳನ್ನು ನಕಲು ಮಾಡಲು ಸಾಧ್ಯವಿಲ್ಲ ಎಂದು ಅವರು ವಾದಿಸಿದರು.

ಪುರುಷರ ಕಲ್ಯಾಣ ಟ್ರಸ್ಟ್‌ ಪರವಾಗಿ ವಾದ ಮಂಡಿಸಿದ ಸಮಿತ್ ಬಿಸಾರಿಯಾ ಅರ್ಜಿದಾರರು ವಿವಿಧ ದೇಶಗಳ ಕಾನೂನುಗಳನ್ನು ನ್ಯಾಯಾಲಯಕ್ಕೆ ತೋರಿಸುವಲ್ಲಿ ಆಯ್ದುಕೊಂಡಿದ್ದಾರೆ ಮತ್ತು ಅಮೆರಿಕದ ಹಲವು ರಾಜ್ಯಗಳಲ್ಲಿ ದೂರು ಸಲ್ಲಿಸಲು ಗಡುವು ಇದ್ದು ಕಾನೂನು ಸಂಪೂರ್ಣವಾಗಿ ಲಿಂಗ-ತಟಸ್ಥವಾಗಿದೆ ಎಂದು ಅವರು ವಾದಿಸಿದರು.

ಇಂದು ನ್ಯಾಯಾಲಯ ವಿಚಾರಣೆ ಮುಂದುವರೆಸಲಿದ್ದು ರಾವ್‌ ಅವರ ತಮ್ಮ ವಾದ ಮಂಡಿಸಲಿದ್ದಾರೆ. ಕೇಂದ್ರ ಸರ್ಕಾರದ ಪರವಾಗಿ ವಕೀಲೆ ಮೋನಿಕಾ ಅರೋರಾ ಅವರು ಕೂಡ ಇಂದೇ ವಾದ ಮಂಡಿಸುವ ಸಾಧ್ಯತೆ ಇದೆ.

Kannada Bar & Bench
kannada.barandbench.com