Allahabad HC and Sexual Harassment
Allahabad HC and Sexual Harassment  
ಸುದ್ದಿಗಳು

ಲೈಂಗಿಕ ಅಪರಾಧಗಳಲ್ಲಿ ಜಾಮೀನು ನೀಡುವಾಗ ಸಂತ್ರಸ್ತೆಯೊಂದಿಗೆ ಮದುವೆ, ರಾಜಿಗೆ ಸೂಚಿಸಬಾರದು: ಅಲಾಹಾಬಾದ್ ಹೈಕೋರ್ಟ್

Bar & Bench

ಲೈಂಗಿಕ ಅಪರಾಧಗಳಲ್ಲಿ ಜಾಮೀನು ನೀಡುವ ವೇಳೆ ಸಂತ್ರಸ್ತೆಯೊಂದಿಗೆ ರಾಜಿ ಅಥವಾ ಮದುವೆಯಾಗುವಂತೆ ಆರೋಪಿಗೆ ಷರತ್ತು ವಿಧಿಸಬಾರದು ಎಂದು ಅಲಾಹಾಬಾದ್‌ ಹೈಕೋರ್ಟ್‌ ತಿಳಿಸಿದೆ. (ಇಮ್ರಾನ್‌ ಮತ್ತು ಉತ್ತರಪ್ರದೇಶ ಸರ್ಕಾರ ನಡುವಣ ಪ್ರಕರಣ).

ಮಹಿಳೆಯ ವಿರುದ್ಧ ಲೈಂಗಿಕ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಜಾಮೀನು ನೀಡುವಾಗ ಯುಕ್ತ ನ್ಯಾಯಕ್ಕೆ ವಿರುದ್ಧವಾಗಿ ಜಾಮೀನು ಷರತ್ತು ಕಡ್ಡಾಯಗೊಳಿಸಬಾರದು ಎಂದು ನ್ಯಾ. ಸೌರಭ್‌ ಶ್ಯಾಂ ಶಂಶೇರಿ ಅವರಿದ್ದ ಏಕ ಸದಸ್ಯ ಪೀಠ ತಿಳಿಸಿತು.

"ಮಹಿಳೆಯ ವಿರುದ್ಧದ ಲೈಂಗಿಕ ಅಪರಾಧವನ್ನು ಒಳಗೊಂಡ ಪ್ರಕರಣಗಳಲ್ಲಿ ನ್ಯಾಯಾಲಯ ಜಾಮೀನು ನೀಡುವಾಗ ಯಾವುದೇ ರಾಜಿಗೆ ಒಪ್ಪುವಂತೆ ಅಥವಾ ಮದುವೆಯಾಗುವಂತೆ ಜಾಮೀನು ಷರತ್ತುಗಳನ್ನು ಕಡ್ಡಾಯಗೊಳಿಸಬಾರದು, ಇದು ಸಂತ್ರಸ್ತರಿಗೆ ʼಯುಕ್ತ ನ್ಯಾಯʼ ಒದಗಿಸುವ ನಿರ್ಣಯಕ್ಕೆ ವಿರುದ್ಧವಾಗಿದೆ. ಅಪರ್ಣಾ ಭಟ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.

(ಲೈಂಗಿಕ ಕಿರುಕುಳ ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ನೀಡಬೇಕಾದರೆ ಆತ ಸಂತ್ರಸ್ತೆಗೆ ರಾಖಿ ಕಟ್ಟಬೇಕು ಎಂದು ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್‌ ಪೀಠ 2020ರಲ್ಲಿ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ ವಕೀಲೆ ಅಪರ್ಣಾ ಭಟ್ ಸೇರಿದಂತೆ 9 ಮಹಿಳಾ ನ್ಯಾಯವಾದಿಗಳು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಇಂದೋರ್‌ ಪೀಠದ ಆದೇಶವನ್ನು ಸುಪ್ರೀಂಕೋರ್ಟ್‌ 2021ರ ಮಾರ್ಚ್‌ನಲ್ಲಿ ರದ್ದುಗೊಳಿಸಿತ್ತು)

ಜಾಮೀನು ನೀಡುವ ಅಥವಾ ತಿರಸ್ಕರಿಸುವ ಆದೇಶ ನೀಡುವ ವೇಳೆ ನ್ಯಾಯಾಲಯ ತನ್ನ ವಿವೇಚನಾಧೀಕಾರ ಚಲಾಯಿಸಲು ತಾನು ತೂಗಿ ನೋಡಿದ ಕಾರಣಗಳನ್ನು ದಾಖಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಜಾಮೀನು ನೀಡುವ ಷರತ್ತುಗಳು ಪಾಲಿಸಲು ಅಸಮರ್ಥವಾಗಿರುವಷ್ಟು ಕಟ್ಟುನಿಟ್ಟಾಗಿರಬಾರದು, ಆ ಮೂಲಕ ಜಾಮೀನು ನೀಡುವಿಕೆಯನ್ನು ಮರೀಚಿಕೆಯನ್ನಾಗಿ ಮಾಡಬಾರದು ಎಂದು ಕೂಡ ಪೀಠ ತಿಳಿಸಿದೆ.

ಈ ನಿಟ್ಟಿನಲ್ಲಿ, ಜಾಮೀನು ನೀಡುವುದು ಅಥವಾ ನಿರಾಕರಿಸುವುದು ಸಂಪೂರ್ಣವಾಗಿ ನ್ಯಾಯಾಧೀಶರ ವಿವೇಚನೆಗೆ ಒಳಪಟ್ಟಿದ್ದು ಆ ವಿವೇಚನೆಯು ಅಸ್ಥಿರವಾಗಿದ್ದರೂ, ಅದನ್ನುನ್ಯಾಯಯುತವಾಗಿ ಮತ್ತು ಮಾನವೀಯವಾಗಿ ಸಹಾನುಭೂತಿಯಿಂದ ನಡೆಸಬೇಕು ಬದಲಿಗೆ ವಿಚಿತ್ರ ವಿಧಾನದಿಂದ ಅಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಟ್ಯಾಕ್ಸಿ ಡ್ರೈವರ್ ಆಗಿದ್ದ ಇಮ್ರಾನ್ ಎಂಬುವವರು ಸಲ್ಲಿಸಿದ್ದ ಜಾಮೀನು ಅರ್ಜಿಯ ನ್ಯಾಯಾಲಯದಲ್ಲಿ ನಡೆಯಿತು. ಇಮ್ರಾನ್‌ ವಿವಾಹಿತರಾಗಿದ್ದು ಅವರಿಗೆ ಒಂದು ಮಗು ಇದೆ. ಟ್ರಾನ್ಸ್‌ಜೆಂಡರ್ ಆಗಿದ್ದ ಸಂತ್ರಸ್ತೆ ಬೇರೆ ಬೇರೆ ಸ್ಥಳಗಳಿಗೆ ತೆರಳಲು ತನ್ನ ಟ್ಯಾಕ್ಸಿಯನ್ನು ಬಾಡಿಗೆ ಪಡೆಯುತ್ತಿದ್ದರು. ಹಣಕ್ಕಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಅವರು ವಾದಿಸಿದ್ದರು. ಸಂತ್ರಸ್ತೆಯ ಪರವಾಗಿ ಹಾಗೂ ಅರ್ಜಿದಾರರ ಪತ್ನಿ ಕಡೆಯಿಂದ ಎಫ್‌ಐಆರ್‌ ದಾಖಲಾಗಿದ್ದು ಸಂಬಂಧಪಟ್ಟ ನ್ಯಾಯಾಲಯದ ಎದುರು ಅರ್ಜಿಗಳು ಬಾಕಿ ಇವೆ.

ಮೇಲ್ನೋಟಕ್ಕೆ ಅರ್ಜಿದಾರ ಮತ್ತು ಸಂತ್ರಸ್ತೆ ಎರಡು ವರ್ಷಗಳ ಕಾಲ ಒಮ್ಮತದ ಸಂಬಂಧದಲ್ಲಿದ್ದರು ಮತ್ತು ಪರಸ್ಪರರ ವಿರುದ್ಧ ಎಫ್‌ಐಆರ್‌ ಹೂಡಲಾಗಿದೆ. ಮೇಲ್ನೋಟಕ್ಕೆ ಇದೊಂದು ಹಣದ ವಿವಾದವಾಗಿದೆ. ಅರ್ಜಿದಾರ 13.1.2021ರಿಂದ ಜೈಲಿನಲ್ಲಿದ್ದಾನೆ ಮತ್ತು ಕೋವಿಡ್‌ ಕಾರಣಕ್ಕಾಗಿ ಜಾಮೀನು ಕೋರಲಾಗಿದೆ ಎಂಬುದನ್ನು ಪರಿಗಣಿಸಿ ನ್ಯಾಯಾಲಯ ಇಮ್ರಾನ್‌ಗೆ ಜಾಮೀನು ನೀಡಿತು.