ಸುದ್ದಿಗಳು

ಯಾವ ಧರ್ಮ ಅನುಸರಿಸಬೇಕು ಎಂಬುದು ವಿವಾಹಿತ ದಂಪತಿಗೆ ಬಿಟ್ಟ ವಿಚಾರ: ಗುಜರಾತ್ ಹೈಕೋರ್ಟ್

ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ) ಕಾಯಿದೆ- 2021 ಅನ್ನು ಪ್ರಶ್ನಿಸಿ ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ನೀಡಿದೆ.

Bar & Bench

ಯಾವ ಧರ್ಮ ಅನುಸರಿಸಬೇಕು ಎಂಬುದನ್ನು ವಿವಾಹಿತ ದಂಪತಿ ನಿರ್ಧರಿಸಬೇಕು ಎಂದು ಶುಕ್ರವಾರ ಮೌಖಿಕವಾಗಿ ತಿಳಿಸಿರುವ ಗುಜರಾತ್‌ ಹೈಕೋರ್ಟ್‌ ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ) ಕಾಯಿದೆ- 2021 ಅನ್ನು ಪ್ರಶ್ನಿಸಿ ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ರಾಜ್ಯದ ಅಡ್ವೋಕೇಟ್ ಜನರಲ್‌ಗೆ ನೋಟಿಸ್ ನೀಡಿದೆ.

ಮದುವೆಯ ಕಾರಣದಿಂದ ಮತಾಂತರ ಮಾಡುವುದು ಅಪರಾಧವಾಗಬಹುದೇ ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರಿದ್ದ ಪೀಠ ಸರ್ಕಾರಿ ವಕೀಲರನ್ನು ಕೇಳಿತು.

"ಯಾವ ಧರ್ಮವನ್ನು ಅನುಸರಿಸಬೇಕು ಎಂಬುದನ್ನು ನಿರ್ಧರಿಸುವುದು ವಿವಾಹಿತ ದಂಪತಿಗೆ ಬಿಟ್ಟ ವಿಚಾರ" ಎಂದು ಪೀಠ ಹೇಳಿತು.

ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ-2003ಕ್ಕೆ 2021ರ ಕಾಯಿದೆ ಮೂಲಕ ತಿದ್ದುಪಡಿ ತರಲಾಗಿದ್ದು ವಿವಾಹದ ಮೂಲಕ ಬಲವಂತವಾಗಿ ಧಾರ್ಮಿಕ ಮತಾಂತರ ಮಾಡುವುದನ್ನು ನೂತನ ಕಾಯಿದೆ ನಿಷೇಧಿಸಿದೆ. ಗುಜರಾತ್‌ನ ಈ ನೂತನ ಕಾಯಿದೆಯ ಬಗ್ಗೆ ಜಮೀಯತ್ ಉಲಮಾ-ಇ-ಹಿಂದ್ ಮೂರು ವಿಶಾಲ ನೆಲೆಯಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಿದೆ.

ಕಾಯಿದೆಯ ನಿಯಮಗಳು ತಮ್ಮ ಧರ್ಮವನ್ನು ಪ್ರತಿಪಾದಿಸಲು ಮತ್ತು ಪ್ರಚಾರ ಮಾಡಲು ಕಲಂ 25 ರ ಅಡಿಯಲ್ಲಿ ನಾಗರಿಕರ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತವೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಮಿಹಿರ್ ಜೋಶಿ ವಾದಿಸಿದ್ದರು.

ಕಾಯಿದೆಯಲ್ಲಿ ಬಳಸಿದ ಭಾಷೆ ಅಸ್ಪಷ್ಟವಾಗಿದೆ ಮತ್ತು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಖಾಸಗಿತನದ ಅಮೂಲ್ಯ ಹಕ್ಕನ್ನು ಅದು ಅತಿಕ್ರಮಿಸುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ವಿವಾಹದ ಸಂದರ್ಭದಲ್ಲಿ ಒಬ್ಬ ವ್ಯಕ್ತಿಗೆ ಅತ್ಯಗತ್ಯವಾದ ವ್ಯಕ್ತಿಗಳಿಗೆ ಒದಗಿಸಲಾದ ಖಾಸಗಿತನದ ಅಮೂಲ್ಯ ಹಕ್ಕನ್ನು ನೂತನ ಕಾಯಿದೆಯು ಅತಿಕ್ರಮಿಸುತ್ತದೆ. 2003ರ ಕಾಯಿದೆಯು ಮೋಸದಿಂದ ನಂಬಿಸುವುದು ಅಥವಾ ಬೆದರಿಕೆಯ ಬಲವಂತದ ಮತಾಂತರವನ್ನು ಮಾತ್ರ ನಿಷೇಧಿಸಿತ್ತು ಎಂದು ನ್ಯಾಯಾಲಯದ ಗಮನಕ್ಕೆ ತರಲಾಯಿತು.

ವಾದ ಆಲಿಸಿದ ಪೀಠ, "ಯಾವುದೇ ಧಾರ್ಮಿಕ ವಂಚನೆ ಅಥವಾ ಪ್ರಲೋಭನೆ ಇಲ್ಲದೆ ಅಂತರ್ ಧರ್ಮೀಯ ವಿವಾಹವಾಗಿದ್ದರೆ ಅದನ್ನು ಅಪರಾಧ ಎಂದು ಪರಿಗಣಿಸಲಾಗದು ಎಂದು ಸ್ಪಷ್ಟಪಡಿಸೋಣ" ಎಂಬುದಾಗಿ ತಿಳಿಸಿತು.

ಇದೇ ವೇಳೆ ಸರ್ಕಾರಕ್ಕೆ ನೋಟಿಸ್‌ ನೀಡಿದ ಪೀಠ ಮುಂದಿನ ವಿಚಾರಣೆ ವೇಳೆಗೆ ಉತ್ತರಿಸುವಂತೆ ಸೂಚಿಸಿ ಆಗಸ್ಟ್ 17ಕ್ಕೆ ವಿಚಾರಣೆ ಪಟ್ಟಿ ಮಾಡಿತು.