Madhya Pradesh High Court, Jabalpur Bench 
ಸುದ್ದಿಗಳು

ಸುಳ್ಳು ಭರವಸೆ ನೀಡಿ ಪರಪುರುಷ ದೈಹಿಕ ಸಂಬಂಧ ಬೆಳೆಸಿದ್ದಾನೆ ಎಂದು ವಿವಾಹಿತೆ ಆರೋಪಿಸುವಂತಿಲ್ಲ: ಮಧ್ಯಪ್ರದೇಶ ಹೈಕೋರ್ಟ್

ಕಳೆದ ವರ್ಷ ವಿವಾಹಿತ ಮಹಿಳೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಪರಪುರುಷನ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿತು.

Bar & Bench

ಮದುವೆಯಾಗುವ ಸುಳ್ಳು ಭರವಸೆ ನೀಡಿ ಪರಪುರುಷ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದ ಎಂದು ವಿವಾಹಿತ ಮಹಿಳೆ ಹೇಳಿಕೊಳ್ಳುವಂತಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್‌ ಈಚೆಗೆ ತೀರ್ಪು ನೀಡಿದೆ [ವೀರೇಂದ್ರ ಯಾದವ್‌ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ].

ಅಂತೆಯೇ ಕಳೆದ ವರ್ಷ ವಿವಾಹಿತ ಮಹಿಳೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಪರಪುರುಷನ  ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣವನ್ನು ನ್ಯಾಯಮೂರ್ತಿ ಮಣೀಂದರ್ ಎಸ್ ಭಟ್ಟಿ ರದ್ದುಗೊಳಿಸಿದರು.

ಸುಪ್ರೀಂ ಕೋರ್ಟ್‌ ಮತ್ತು ಮಧ್ಯಪ್ರದೇಶ ಹೈಕೋರ್ಟ್‌ ಈ ಹಿಂದೆ ನೀಡಿರುವ ಇದೇ ಬಗೆಯ ತೀರ್ಪುಗಳನ್ನು ಪ್ರಸ್ತಾಪಿಸಿದ ನ್ಯಾಯಾಲಯ ಸಂತ್ರಸ್ತೆ ವಿವಾಹಿತ ಮಹಿಳೆಯಾಗಿದ್ದಾಗ ಮದುವೆಯಾಗುವ ಸುಳ್ಳು ಭರವಸೆ ನಂಬಿ ದೈಹಿಕ ಸಂಬಂಧಕ್ಕೆ ಆಕೆ ನೀಡಿದ ಒಪ್ಪಿಗೆಯನ್ನು ವಾಸ್ತವಿಕ ತಪ್ಪು ಗ್ರಹಿಕೆ ಎಂಬ ನೆಲೆಯಲ್ಲಿ ಸಮ್ಮತಿಯ ಚೌಕಟ್ಟಿನೊಳಗೆ ತರಲಾಗದು ಎಂದಿತು.

ಈಗಾಗಲೇ ವಿವಾಹವಾಗಿದ್ದ ಪರಪುರುಷ ದೂರುದಾರೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ದೂರುದಾರೆ ಚಾಲಕನೊಬ್ಬನನ್ನು ವಿವಾಹವಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದರು. ಮಹಿಳೆಯ ನೆರೆಮನೆಯಲ್ಲಿ ವಾಸಿಸುತ್ತಿದ್ದ ಪರಪುರುಷ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡಿದ ಬಳಿಕ ವಿವಾಹವಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ. ಆದರೆ ನಂತರ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡುವ ಸ್ಥಿತಿಯಲ್ಲಿಲ್ಲ ಎಂದು ತಿಳಿಸಿ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಮಹಿಳೆ  ದೂರು ನೀಡಿದ್ದಳು. ಇದನ್ನು ಪ್ರಶ್ನಿಸಿ ಆತ ಹೈಕೋರ್ಟ್‌ ಮೆಟ್ಟಿಲೇರಿದ್ದ.

ಆರೋಪಿಯೊಂದಿಗೆ ದೂರುದಾರೆ ಮೂರು ತಿಂಗಳ ಕಾಲ ದೈಹಿಕ ಸಂಬಂಧ ಹೊಂದಿದ್ದಳು ಮತ್ತು ಪತಿ ಇಲ್ಲದಾಗ ಆರೋಪಿ ಆಕೆಯನ್ನು ಭೇಟಿಯಾಗಿ ಲೈಂಗಿಕ ಸಂಬಂಧ ಹೊಂದುತ್ತಿದ್ದನು ಎಂಬುದನ್ನು ನ್ಯಾಯಾಲಯ ವಿಚಾರಣೆ ವೇಳೆ ಗಮನಿಸಿತು.

ಹೀಗಾಗಿ ಸಂತ್ರಸ್ತೆ ತಪ್ಪು ಕಲ್ಪನೆಯಡಿ ಸಮ್ಮತಿ ಸೂಚಿಸಿದ್ದಾರೆ ಎಂದು ಹೇಳಲಾಗದು. ಅಲ್ಲದೆ ಎಫ್‌ಐಆರ್‌ ಅನ್ನು ಎಚ್ಚರಿಕೆಯಿಂದ ಪರಿಶೀಲಿಸಿದಾಗ ಆರೋಪಿ ಸುಳ್ಳು ವಿವಾಹದ ಭರವಸೆ ನೆಪದಲ್ಲಿ  ಸಂತ್ರಸ್ತೆ ಮೇಲೆ ಒತ್ತಡ ಹೇರಿದ ಬಗ್ಗೆ ಯಾವುದೇ ಆರೋಪಗಳಿಲ್ಲ ಎಂದಿತು.

ಎಫ್‌ಐಆರ್‌ ಅಪರಾಧವನ್ನು ಸೂಚಿಸದೆ ಇರುವುದರಿಂದ ದೀರ್ಘಾವಧಿ ವಿಚಾರಣಾ ಪ್ರಕ್ರಿಯೆಗೆ ಕಾರಣವಾಗುವುದರಿಂದ ಅದನ್ನು ಆರಂಭಿಕ ಹಂತದಲ್ಲಿಯೇ ರದ್ದುಗೊಳಿಸಬೇಕಾಗುತ್ತದೆ ಎಂದು ತಿಳಿಸಿದ ಪೀಠ ಪ್ರಕರಣ ರದ್ದುಗೊಳಿಸಿತು.