India and Pakistan, Supreme Court 
ಸುದ್ದಿಗಳು

ಭಾರತ-ಪಾಕಿಸ್ತಾನ ಏಷ್ಯಾ ಕಪ್ ಟಿ20 ಪಂದ್ಯ ನಡೆಯಲಿ: ಸುಪ್ರೀಂ ಕೋರ್ಟ್

ಪಹಲ್ಗಾಮ್ ದಾಳಿ ಮತ್ತು ‘ಆಪರೇಶನ್ ಸಿಂಧೂರ್ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ಆಯೋಜಿಸುವುದು ರಾಷ್ಟ್ರದ ಗೌರವ ಮತ್ತು ಸಾರ್ವಜನಿಕ ಭಾವನೆಗೆ ಸಂಬಂಧಿಸಿದಂತೆ ತಪ್ಪು ಸಂದೇಶ ರವಾನಿಸುತ್ತದೆ ಎಂದು ಅರ್ಜಿ ದೂರಿದೆ.

Bar & Bench

ಏಷ್ಯಾಕಪ್ ಅಂಗವಾಗಿ ಸೆಪ್ಟೆಂಬರ್ 14ರಂದು ದುಬೈನಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ಟಿ20 ಕ್ರಿಕೆಟ್ ಪಂದ್ಯ ರದ್ದುಗೊಳಿಸಲು ನಿರ್ದೇಶನ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ (ಪಿಐಎಲ್) ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಊರ್ವಶಿ ಜೈನ್ ನೇತೃತ್ವದ ನಾಲ್ವರು ಕಾನೂನು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ವಿಜಯ್ ಬಿಷ್ಣೋಯ್ ಅವರಿದ್ದ ಪೀಠದೆದುರು ಶುಕ್ರವಾರ ತುರ್ತು ವಿಚಾರಣೆಗೆ ಅರ್ಜಿದಾರರ ಪರ ವಕೀಲರು ಉಲ್ಲೇಖಿಸಿದಾಗ ನ್ಯಾಯಾಲಯ ಪಂದ್ಯ ನಡೆಯಲಿ ಎಂದು ಹೇಳಿತು.

ಪಹಲ್ಗಾಮ್ ದಾಳಿ ಮತ್ತು ‘ಆಪರೇಷನ್ ಸಿಂಧೂರ್ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ಆಯೋಜಿಸುವುದು ರಾಷ್ಟ್ರದ ಗೌರವ ಮತ್ತು ಸಾರ್ವಜನಿಕ ಭಾವನೆಗೆ ಸಂಬಂಧಿಸಿದಂತೆ ತಪ್ಪು ಸಂದೇಶ ರವಾನಿಸುತ್ತದೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು.

ರಾಷ್ಟ್ರೀಯ ಹಿತಾಸಕ್ತಿ, ನಾಗರಿಕರ ಜೀವನ ಅಥವಾ ಯೋಧರ ತ್ಯಾಗಕ್ಕಿಂತ ಕ್ರಿಕೆಟ್‌ ಮಿಗಿಲಲ್ಲ ಎಂದು ಅರ್ಜಿದಾರರು ವಾದಿಸಿದ್ದರು.  

ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯಿದೆ 2025ರ ಅನುಷ್ಠಾನಕ್ಕೆ ನಿರ್ದೇಶನ ನೀಡುವಂತೆಯೂ ಮನವಿ ಮಾಡಲಾಗಿತ್ತು.

ವಕೀಲರಾದ ಸ್ನೇಹಾ ರಾಣಿ, ಅಭಿಷೇಕ್ ವರ್ಮಾ ಮತ್ತು ಎಂಡಿ ಅನಸ್ ಚೌಧರಿ ಅವರ ಮೂಲಕ ಅರ್ಜಿ ಸಲ್ಲಿಸಲಾಗಿತ್ತು.