Justice Sanjiv Khanna and Justice MM Sundresh 
ಸುದ್ದಿಗಳು

ಕಕ್ಷಿದಾರರು ವೈವಾಹಿಕ ವ್ಯಾಜ್ಯ ಇತ್ಯರ್ಥಪಡಿಸಿಕೊಂಡರೆ ನ್ಯಾಯಾಲಯಗಳು ಕ್ರಿಮಿನಲ್ ಪ್ರಕರಣ ರದ್ದುಗೊಳಿಸಬಹುದು: ಸುಪ್ರೀಂ

ವೈವಾಹಿಕ ವಿವಾದಗಳಿಗೆ ಸಂಬಂಧಿಸಿದ ಅಪರಾಧಗಳಲ್ಲಿ, ಕಕ್ಷಿದಾರರು ಪ್ರಾಮಾಣಿಕವಾಗಿ ವಿವಾದಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಂಡರೆ, ನ್ಯಾಯದ ಗುರಿಯನ್ನು ಸಾಧಿಸುವುದಕ್ಕಾಗಿ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸಬಹುದು ಎಂದ ಪೀಠ.

Bar & Bench

ಕಕ್ಷಿದಾರರು ತಮ್ಮ ನಡುವಿನ ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ಮನವರಿಕೆಯಾದಲ್ಲಿ, ವೈವಾಹಿಕ ವ್ಯಾಜ್ಯದಲ್ಲಿ ಹೂಡಲಾದ ಕ್ರಿಮಿನಲ್ ಮೊಕದ್ದಮೆಗಳನ್ನು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳು ರದ್ದುಗೊಳಿಸಬಹುದು ಎಂದು ಸರ್ವೋಚ್ಚ ನ್ಯಾಯಾಲಯ ಇತ್ತೀಚೆಗೆ ಹೇಳಿದೆ [ರಂಗಪ್ಪ ಜಾವೂರ್ ಮತ್ತು ಕರ್ನಾಟಕ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಂ ಎಂ ಸುಂದರೇಶ್ ಅವರಿದ್ದ ವಿಭಾಗೀಯ ಪೀಠ "ವೈವಾಹಿಕ ವಿವಾದಗಳಿಗೆ ಸಂಬಂಧಿಸಿದ ಅಪರಾಧ ಪ್ರಕರಣಗಳಲ್ಲಿ, ಕಕ್ಷಿದಾರರು ಪ್ರಾಮಾಣಿಕವಾಗಿ ವಿವಾದಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ತೃಪ್ತಿಯಾದರೆ, ಭಾರತದ ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ಅಥವಾ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ- 1973 ರ ಸೆಕ್ಷನ್ 482ರ ಅಡಿಯಲ್ಲಿ ನ್ಯಾಯದ ಗುರಿಯನ್ನು ಸಾಧಿಸುವುದಕ್ಕಾಗಿ, ಕಕ್ಷಿದಾರರ ನಡುವಿನ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಬಹುದು" ಎಂದು ಹೇಳಿದೆ.

ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದ ಪ್ರಕರಣವೊಂದರಲ್ಲಿ ಪತಿ ವಿರುದ್ಧ ಪತ್ನಿಯು ಹೂಡಿದ್ದ ಕ್ರಿಮಿನಲ್ ಮೊಕದ್ದಮೆ ರದ್ದುಪಡಿಸಲು ನಿರಾಕರಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಬದಿಗೆ ಸರಿಸುವ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಮಹಿಳೆ 2011ರಲ್ಲಿ ದಾಖಲಿಸಿದ್ದ ಕ್ರಿಮಿನಲ್ ಮೊಕದ್ದಮೆಯು ಕ್ರೌರ್ಯ, ಕಿಡಿಗೇಡಿತನ, ಅಪಮಾನ, ಕ್ರಿಮಿನಲ್ ಬೆದರಿಕೆ ಮತ್ತು ವರದಕ್ಷಿಣೆ ಕಿರುಕುಳದ ಆರೋಪಗಳನ್ನು ಒಳಗೊಂಡಿತ್ತಾದರೂ ವರದಕ್ಷಿಣೆ ಕಾಯಿದೆಯಡಿಯ ಆರೋಪಗಳನ್ನು ಚಾರ್ಜ್ ಶೀಟ್‌ನಲ್ಲಿ ಕೈಬಿಡಲಾಗಿತ್ತು. ನಂತರದ ಹಂತದಲ್ಲಿ ಪತಿ-ಪತ್ನಿಯ ನಡುವೆ ಒಪ್ಪಂದ ಏರ್ಪಟ್ಟು ಪರಸ್ಪರ ಸಮ್ಮತಿ ಮೂಲಕ ವಿಚ್ಛೇದನ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ತನ್ನ ಮಾಜಿ ಪತಿ ವಿರುದ್ಧ ದಾಖಲಿಸಿದ್ದ ಪ್ರಕರಣ ಕೈಬಿಡಲು ಆಕೆ ಒಪ್ಪಿಕೊಂಡಿದ್ದರು.

ಆದರೆ ತನ್ನ ಮತ್ತು ಪತ್ನಿ ನಡುವಿನ ವಿವಾದ ಇತ್ಯರ್ಥವಾಗಿದ್ದು ತನ್ನ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿತ್ತು. ಈ ಆದೇಶದ ವಿರುದ್ಧ ವ್ಯಕ್ತಿ ಸುಪ್ರೀಂ ಮೆಟ್ಟಿಲೇರಿದ್ದರು.  

ಮೇಲ್ಮನವಿದಾರರು ಮತ್ತು ಅವರ ವಿಚ್ಛೇದಿತ ಪತ್ನಿ ಈಗಾಗಲೇ ಪ್ರಕರಣವನ್ನು ರದ್ದುಗೊಳಿಸಲು ಒಪ್ಪಂದಕ್ಕೆ ಬಂದಿದ್ದಾರೆ  ಅಷ್ಟೇ ಅಲ್ಲದೆ ವಿಚ್ಛೇದಿತ ಪತ್ನಿಯು ಮರುಮದುವೆಯನ್ನೂ ಮಾಡಿಕೊಂಡಿದ್ದಾರೆ ಎಂಬುದನ್ನು ಸುಪ್ರೀಂ ಕೋರ್ಟ್ ಗಮನಿಸಿತು. ಆದ್ದರಿಂದ, ಮೇಲ್ಮನವಿದಾರರ ವಿರುದ್ಧ ವಿಚಾರಣೆ ಮುಂದುವರೆಸುವಲ್ಲಿ ಯಾವುದೇ ಉಪಯೋಗ  ಇಲ್ಲ ಎಂದು ಪೀಠ ಹೇಳಿತು.

ಇದಲ್ಲದೆ, ಮೇಲ್ಮನವಿದಾರರ ವಿರುದ್ಧ ಇಂತಹ ಕ್ರಿಮಿನಲ್‌ ಮೊಕದ್ದಮೆ ಮುಂದುವರೆಸಿದರೆ ಗಡಿ ಭದ್ರತಾ ಪಡೆ ಅಧಿಕಾರಿಯಾಗಿದ್ದು, ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಬೇಕಾದ ಅಗತ್ಯವಿರುವ ಅವರಿಗೆ ಕಿರುಕುಳ ನೀಡಿದಂತಾಗುತ್ತದೆ ಎಂದ ಪೀಠ ಅಂತಿಮವಾಗಿ ಮೇಲ್ಮನವಿಯನ್ನು ಪುರಸ್ಕರಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Rangappa_Javoor_v__State_of_Karnataka_and_Another.pdf
Preview