ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಹೂಡಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಅದೇಶ ಉಲ್ಲಂಘಿಸಿದ್ದ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರನ್ನು ಶುಕ್ರವಾರ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆದೇಶದ ಉಲ್ಲಂಘನೆಯ ಹಿನ್ನೆಲೆಯಲ್ಲಿ ದೆಹಲಿ ನ್ಯಾಯಾಲಯ ಮೇಧಾ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.
ಸುಮಾರು ಎರಡೂವರೆ ದಶಕಗಳ ಹಿಂದೆ ಅಂದರೆ 2001ರಲ್ಲಿ ದೆಹಲಿಯ ಈಗಿನ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ದೆಹಲಿಯ ವಿಚಾರಣಾ ನ್ಯಾಯಾಲಯವು ಪಾಟ್ಕರ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿ ಐದು ತಿಂಗಳ ಜೈಲು ಶಿಕ್ಷೆ ಮತ್ತು ₹10 ಲಕ್ಷ ದಂಡ ವಿಧಿಸಿತ್ತು.
ಇದನ್ನು ಪ್ರಶ್ನಿಸಿ ಮೇಧಾ ಮೇಲ್ಮನವಿ ಸಲ್ಲಿಸಿದ್ದರು. ದೆಹಲಿಯ ಸೆಷನ್ಸ್ ನ್ಯಾಯಾಲಯ ಪಾಟ್ಕರ್ ಅವರಿಗೆ ವಿಧಿಸಿದ್ದ ಶಿಕ್ಷೆ ಎತ್ತಿಹಿಡಿದಿತ್ತಾದರೂ ಅವರು ಜೈಲು ಶಿಕ್ಷೆ ಅನುಭವಿಸಬೇಕಿಲ್ಲ ಎಂದು ತಿಳಿಸಿತ್ತು. ಅಲ್ಲದೆ ₹1 ಲಕ್ಷದಷ್ಟು ದಂಡ ಪಾವತಿಸಲು ಏಪ್ರಿಲ್ 8ರ ಆದೇಶದಲ್ಲಿ ಹೇಳಿತ್ತು.
ಆದರೆ, ಶಿಕ್ಷೆಯ ಆದೇಶ ಪಾಲಿಸದ ಕಾರಣ ದೆಹಲಿ ನ್ಯಾಯಾಲಯ ಮೇಧಾ ಪಾಟ್ಕರ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ದೆಹಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ತನ್ನ ಆದೇಶವನ್ನು ಪಾಟ್ಕರ್ ಉದ್ದೇಶಪೂರ್ವಕವಾಗಿ ಉಲ್ಲಂಘಿಸುತ್ತಿದ್ದಾರೆ ಮತ್ತು ಅಪರಾಧಿ ಎಂದು ಸಾಬೀತಾದ ನಂತರವೂ ನ್ಯಾಯಾಲಯದ ವಿಚಾರಣೆಗಳನ್ನು ತಪ್ಪಿಸುತ್ತಿದ್ದಾರೆ ಎಂದು ಎರಡು ದಿನಗಳ ಹಿಂದೆ ಅಂದರೆ ಏಪ್ರಿಲ್ 23ರಂದು ಸೆಷನ್ಸ್ ನ್ಯಾಯಾಲಯ ಹೇಳಿತ್ತು.
ಅಂತೆಯೇ ಮೇಧಾ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತಲ್ಲದೆ, ಏಪ್ರಿಲ್ 8ರ ಶಿಕ್ಷೆಯ ಆದೇಶ ಪಾಲಿಸಲು ವಿಫಲವಾದರೆ ಆಕೆಯ ಶಿಕ್ಷೆ ಕಡಿಮೆಗೊಳಿಸಿದ ನಿರ್ಧಾರವನ್ನು ಮರುಪರಿಶೀಲಿಸಬೇಕಾದೀತು ಎಂದು ಎಚ್ಚರಿಸಿತ್ತು.
ತನ್ನ ಶಿಕ್ಷೆ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು ಇಂದು ಪಾಟ್ಕರ್ ಹಿಂಪಡೆದಿದ್ದು ಶಿಕ್ಷೆಯ ಕುರಿತಾದ ವಿಚಾರಣೆ ಮುಂದೂಡಲು ಅವರು ಸಲ್ಲಿಸಿದ್ದ ಅರ್ಜಿಯನ್ನು ಸಹ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿತು.
"ಪ್ರಸ್ತುತ ಅರ್ಜಿ ಕ್ಷುಲ್ಲಕವಾಗಿದ್ದು, ಚೇಷ್ಟೆಯಿಂದ ಕೂಡಿದ್ದು, ನ್ಯಾಯಾಲಯವನ್ನು ಮೋಸಗೊಳಿಸುವ ಉದ್ದೇಶ ಹೊಂದಿದೆ. ಆದ್ದರಿಂದ, ಪ್ರಸ್ತುತ ಅರ್ಜಿಯನ್ನು ವಜಾಗೊಳಿಸಲಾಗಿದೆ" ಎಂದು ತಿಳಿಸಿದ ಅದು ಅರ್ಜಿ ವಜಾಗೊಳಿಸಿತು.
ಬಿಲ್‌ಗೇಟ್ಸ್ ತರಹದ ಬಂಡವಾಳಿಗರಿಗೆ ಗುಜರಾತ್‌ನ ಜನತೆ ಮತ್ತವರ ಸಂಪನ್ಮೂಲಗಳನ್ನು ಸಕ್ಸೇನಾ ಅಡವಿಟ್ಟಿದ್ದಾರೆ ಎಂದು ದಶಕಗಳ ಹಿಂದೆ ಮೇಧಾ ಆರೋಪಿಸಿದ್ದರು.