ಲೆ. ಗವರ್ನರ್ ಹೂಡಿದ್ದ ಮಾನನಷ್ಟ ಮೊಕದ್ದಮೆ: ಮೇಧಾ ಪಾಟ್ಕರ್‌ಗೆ ಜಾಮೀನು ರಹಿತ ವಾರೆಂಟ್ ನೀಡಿದ ದೆಹಲಿ ನ್ಯಾಯಾಲಯ

ಬಿಲ್‌ಗೇಟ್ಸ್‌ ತರಹದ ಬಂಡವಾಳಿಗರಿಗೆ ಗುಜರಾತ್ ಜನತೆ ಮತ್ತು ಅವರ ಸಂಪನ್ಮೂಲಗಳನ್ನು ಸಕ್ಸೇನಾ ಅಡವಿಟ್ಟಿದ್ದಾರೆ ಎಂದು ಮೇಧಾ ಆರೋಪಿಸಿದ್ದರು. ಈ ಸಂಬಂಧ ಹೂಡಿದ್ದ ಪ್ರಕರಣದಲ್ಲಿ ಮೇಧಾ ದೋಷಿ ಎಂದು ತೀರ್ಪು ನೀಡಲಾಗಿತ್ತು.
Medha Patkar and Delhi LG VK Saxena
Medha Patkar and Delhi LG VK Saxena
Published on

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು 2001ರಲ್ಲಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ವಿರುದ್ಧ ದೆಹಲಿ ನ್ಯಾಯಾಲಯ ಬುಧವಾರ ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ಮೇಧಾ ಅವರಿಗೆ ವಿಧಿಸಿದ್ದ ಶಿಕ್ಷೆ ಮಾರ್ಪಾಡುಗೊಳಿಸಿ ಅವರಿಗೆ ವಿಧಿಸಿದ್ದ ಜೈಲು ಶಿಕ್ಷೆ ತೆರವುಗೊಳಿಸಿ ದಂಡದ ಮೊತ್ತವನ್ನು ಕಡಿಮೆ ಮಾಡಿ ಏಪ್ರಿಲ್‌ 8ರಂದು ನ್ಯಾಯಾಲಯ ಆದೇಶ ಹೊರಡಿಸಿತ್ತು. ಆದರೆ ದಂಡದ ಮೊತ್ತ ಪಾವತಿಸದೆ ಮೇಧಾ ತನ್ನ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುತ್ತಿದ್ದಾರೆ. ಅಪರಾಧಿ ಎಂದು ಸಾಬೀತಾದ ನಂತರವೂ ನ್ಯಾಯಾಲಯದ ವಿಚಾರಣೆಗಳನ್ನು ತಪ್ಪಿಸುತ್ತಿದ್ದಾರೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿಶಾಲ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದರು.  

Also Read
ಲೆ. ಗವರ್ನರ್ ಹೂಡಿದ್ದ ಮಾನನಷ್ಟ ಮೊಕದ್ದಮೆ: ಮೇಧಾ ಪಾಟ್ಕರ್‌ಗೆ ಜೈಲು ಶಿಕ್ಷೆ ಸಲ್ಲದು ಎಂದ ದೆಹಲಿ ನ್ಯಾಯಾಲಯ

ಬಲವಂತದ ಆದೇಶದ ಮೂಲಕ ಪಾಟ್ಕರ್ ಅವರರಿಗೆ ಜಾಮೀನು ರಹಿತ ವಾರೆಂಟ್‌ ಜಾರಿಗೊಳಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಮುಂದಿನ ವಿಚಾರಣೆ ನಡೆಯಲಿರುವ ಮೇ 3ರಂದು ಪಾಟ್ಕರ್ ತಾನು ನೀಡಿರುವ ಆದೇಶ  ಪಾಲಿಸದಿದ್ದರೆ, ಈಗ ನೀಡಿರುವ ಆದೇಶ ಮರುಪರಿಶೀಲಿಸಿ ಶಿಕ್ಷೆಯ ಆದೇಶವನ್ನು ಬದಲಾಯಿಸಬೇಕಾಗುತ್ತದೆ ಎಂದು ಸಹ ನ್ಯಾಯಾಲಯ ಎಚ್ಚರಿಕೆ ನೀಡಿತು.

Also Read
ಮಾನಹಾನಿ ಪ್ರಕರಣ: ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್‌ಗೆ 5 ತಿಂಗಳ ಸಜೆ ವಿಧಿಸಿದ ದೆಹಲಿ ನ್ಯಾಯಾಲಯ

ಬಿಲ್‌ಗೇಟ್ಸ್‌ ತರಹದ ಬಂಡವಾಳಿಗರಿಗೆ ಗುಜರಾತ್ ಜನತೆ ಮತ್ತು ಅವರ ಸಂಪನ್ಮೂಲಗಳನ್ನು ಸಕ್ಸೇನಾ ಅಡವಿಟ್ಟಿದ್ದಾರೆ ಎಂದು ಕೆಲ ದಶಕಗಳ ಹಿಂದೆ ಮೇಧಾ ಆರೋಪಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ಮೇಧಾ ಅವರನ್ನು ದೋಷಿ ಎಂದು ತೀರ್ಪು ನೀಡಿ ಐದು ತಿಂಗಳ ಜೈಲು ಶಿಕ್ಷೆ ಮತ್ತು ಸಕ್ಸೇನಾ ಅವರಿಗೆ ₹10 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿತ್ತು.  

ಆದೇಶದ ವಿರುದ್ಧ ಮರುಪರಿಶೀಲನಾ ಅರ್ಜಿಯನ್ನು ಮೇಧಾ ಸಲ್ಲಿಸಿದ್ದರು. ನಂತರ ಸೆಷನ್ಸ್‌ ನ್ಯಾಯಾಲಯ ಏಪ್ರಿಲ್‌ 8ರಂದು ಮೇಧಾ ಅವರಿಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಗೊಳಿಸಿತ್ತು. ಒಂದು ವರ್ಷದ ಪ್ರೊಬೇಷನ್‌ ಅವಧಿಯನ್ನು ಅನ್ವಯಿಸಿ ಅವರನ್ನು ಬಿಡುಗಡೆ ಮಾಡಲಾಗಿತ್ತು. ಸಕ್ಸೇನಾ ಅವರಿಗೆ ₹1 ಲಕ್ಷ ಪರಿಹಾರ ನೀಡಬೇಕು ಎಂದು ಹೇಳಿತ್ತು.

ಪ್ರೊಬೇಷನ್‌ ಅವಧಿ ಎನ್ನುವುದು ಅಪರಾಧಿಯನ್ನು ಸಮಾಜದಲ್ಲಿ, ಸಮುದಾಯದಲ್ಲಿ ಮುಕ್ತವಾಗಿ ಇರಲು ಅನುಮತಿಸುವುದಾಗಿದ್ದು, ಈ ಅವಧಿಯಲ್ಲಿ ಅವರ ಮೇಲೆ ನಿಗಾ ಇರಿಸಲಾಗಿರುತ್ತದೆ.

Kannada Bar & Bench
kannada.barandbench.com