ಸುದ್ದಿಗಳು

ಕಾರ್ಯನಿರ್ವಹಿಸದ ಮಹಾರಾಷ್ಟ್ರ ಪೊಲೀಸ್ ದೂರು ಪ್ರಾಧಿಕಾರ: ಬಾಂಬೆ ಹೈಕೋರ್ಟ್ ಮೊರೆ ಹೋದ ಮೇಧಾ ಪಾಟ್ಕರ್

ಗಡುವಿನೊಳಗೆ ಎಸ್‌ಪಿಸಿಎಯ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಅದರಲ್ಲಿಯೂ ವಿಶೇಷವಾಗಿ ಸದಸ್ಯರ ಹುದ್ದೆಗಳನ್ನು ಆದ್ಯತೆಯ ಮೇರೆಗೆ ತುಂಬಿಕೊಳ್ಳಲು ನಿರ್ದೇಶಿಸಬೇಕು ಎಂದು ಅರ್ಜಿ ಕೋರಿದೆ.

Bar & Bench

ರಾಜ್ಯ ಪೊಲೀಸ್ ದೂರು ಪ್ರಾಧಿಕಾರದಲ್ಲಿ (ಎಸ್‌ಪಿಸಿಎ) ಖಾಲಿ ಇರುವ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡುವಂತೆ ಹಾಗೂ ಅದಕ್ಕೆ ಸಕಾಲಿಕವಾಗಿ ಸಾಕಷ್ಟು ಪ್ರಮಾಣದ ಹಣ ಬಿಡುಗಡೆ ಮಾಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಹಿರಿಯ ಪರಿಸರವಾದಿ, ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್‌ ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌)_ಸಲ್ಲಿಸಿದ್ದಾರೆ.

ಎಸ್‌ಪಿಸಿಎ ಅಧ್ಯಕ್ಷರು ಹಾಗೂ ಅದರ ಸದಸ್ಯರಿಗೆ ನೀಡುವ ವೇತನ ಶ್ರೇಣಿ ಮತ್ತು ಭತ್ಯೆಯಲ್ಲಿನ ತಾರತಮ್ಯ ತೆಗೆದುಹಾಕಲು ಜೊತೆಗೆ ಅದರ ಸುಗಮ ಕಾರ್ಯನಿರ್ವಹಣೆಗಾಗಿ ಜಾಲತಾಣ ಸೇರಿದಂತೆ ಅತ್ಯಾಧುನಿಕ ಮೂಲಸೌಕರ್ಯ ಒದಗಿಸಲು ಸರ್ಕಾರಕ್ಕೆ ಸೂಚಿಸಬೇಕೆಂದು ಅರ್ಜಿ ಕೋರಿದೆ.

ಎಲ್ಲಾ ರಾಜ್ಯಗಳಲ್ಲಿ ಎಸ್‌ಸಿಪಿಎ ಮತ್ತು ವಿಭಾಗೀಯ ಪೊಲೀಸ್ ದೂರು ಪ್ರಾಧಿಕಾರ (ಡಿಪಿಸಿಎ) ರಚಿಸುವಂತೆ ಪ್ರಕಾಶ್‌ ಸಿಂಗ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪನ್ನು ಆಧರಿಸಿ ಪಿಐಎಲ್‌ ಸಲ್ಲಿಸಲಾಗಿದೆ.

ಗಡುವಿನೊಳಗೆ ಎಸ್‌ಪಿಸಿಎಯ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಅದರಲ್ಲಿಯೂ ವಿಶೇಷವಾಗಿ ಸದಸ್ಯರ ಹುದ್ದೆಗಳನ್ನು ಆದ್ಯತೆಯ ಮೇರೆಗೆ ತುಂಬಿಕೊಳ್ಳಲು ನಿರ್ದೇಶಿಸಬೇಕು. ಇಂತಹ ಪ್ರಾಧಿಕಾರಗಳು ಇಲ್ಲದಿರುವುದರಿಂದ ಪೊಲೀಸರೇ ದೌರ್ಜನ್ಯ ನಡೆಸಿದಾಗ ಮತ್ತು ಪೊಲೀಸ್‌ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದ ಸಂದರ್ಭದಲ್ಲಿ ನಾಗರಿಕರು ಅಥವಾ ಸಂತ್ರಸ್ತರಿಗೆ ತಮ್ಮ ಕಾನೂನುಬದ್ಧ ಹಕ್ಕನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ಕೇವಲ ನಾಲ್ಕು ಡಿಪಿಸಿಎಗಳಿದ್ದು ಅವುಗಳಿಗೆ ಯಾವುದೇ ಹೊಸ ನೇಮಕಾತಿಯಾಗಿಲ್ಲ. ಇರುವ 25 ಹುದ್ದೆಗಳಲ್ಲಿ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿ ಹೊರತುಪಡಿಸಿ ಯಾರನ್ನೂ ಖಾಯಂ ಆಗಿ ಹುದ್ದೆಗೆ ಪರಿಗಣಿಸಿಲ್ಲ ಅಧ್ಯಕ್ಷರು ಮತ್ತು ಸದಸ್ಯರಿಗೆ ವಸತಿ ಸೌಕರ್ಯ ನೀಡಿಲ್ಲ ಎಸ್‌ಪಿಸಿಎ ಬಗ್ಗೆ ವ್ಯಾಪಕ ಪ್ರಚಾರ ನಡೆಸುವುದು ಗೃಹ ಇಲಾಖೆಯ ಕರ್ತವ್ಯ ಇತ್ಯಾದಿ ಅಂಶಗಳನ್ನು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.