Bombay High Court on Media Trial 
ಸುದ್ದಿಗಳು

ಯಾರನ್ನು ಬೆನ್ನಟ್ಟಬೇಕು ಅಥವಾ ತನಿಖೆಗೆ ಒಳಪಡಿಸಬೇಕು ಎಂದು ನಿರ್ಧರಿಸಲು ಮಾಧ್ಯಮಗಳು ನ್ಯಾಯಾಧೀಶರಲ್ಲ: ಆಸ್ಪಿ ಚಿನೋಯ್

"ಮಾಧ್ಯಮಗಳ ಮೇಲೆ ಯಾವ ರೀತಿಯ ಕ್ರಮಕೈಗೊಂಡಿದ್ದಾರೆ ಎಂಬುದಕ್ಕೆ ಸರ್ಕಾರ ವಿವರಣೆ ನೀಡಿಲ್ಲ. ಅವರು ಕಾರ್ಯಪ್ರವೃತ್ತರಾಗಿದ್ದರೆ ನಾವು ಇಲ್ಲಿಯ ತನಕ ಬರುವ ಅಗತ್ಯವಿರಲಿಲ್ಲ. ಏನಾಗುತ್ತಿದೆ ಎಂದೂ ಅವರು ನೋಡಲಿಲ್ಲ” ಎಂದು ಚಿನೋಯ್ ವಾದಿಸಿದರು.

Bar & Bench

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾವೋದ್ರೇಕಕಾರಿ ವರದಿಗಾರಿಕೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯಲ್ಲಿ ಭಾಗಿಯಾಗಿದ್ದ ಹಿರಿಯ ವಕೀಲ ಆಸ್ಪಿ ಚಿನೋಯ್‌ ಅವರು ಸದರಿ ಪ್ರಕರಣದಲ್ಲಿ ನ್ಯಾಯಾಲಯವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಬೇಕು ಎಂದು ವಾದಿಸಿದರು. ಅರ್ಜಿದಾರರ ಪರ ವಾದಿಸಿದ ಚಿನೋಯ್‌ ಅವರು ಹೆಚ್ಚುವರಿಯಾಗಿ ವಾದ (ರಿಜಾಯಿಂಡರ್) ಮಂಡಿಸಿದರು.

“ಕಾನೂನಿನ ಸಮಸ್ಯೆ ಏನೆಂದರೆ ಅತ್ಯುತ್ತಮವಾದ ವ್ಯವಸ್ಥೆ ಜಾರಿಯಲ್ಲಿದ್ದಿದ್ದರೆ, ಚಾನೆಲ್‌ಗಳು ತಿಂಗಳಾನುಗಟ್ಟಲೇ ಜನರ ಬಂಧನಕ್ಕೆ ಆಗ್ರಹಿಸುವುದನ್ನು ನೋಡಿ ಆಶ್ಚರ್ಯಪಡಬೇಕಿರಲಿಲ್ಲ” ಎಂದು ಚಿನೋಯ್‌ ಹೇಳಿದರು.

“ಹಾಲಿ ಇರುವ ವ್ಯವಸ್ಥೆಯನ್ನು ಪರಿಗಣಿಸಬೇಕಿದೆ. ಅದು ಕೆಲಸ ಮಾಡುತ್ತಿದೆಯೇ? ಇದರ ಪ್ರಭಾವ ಹೆಚ್ಚಿಸಲು ನ್ಯಾಯಾಲಯದಿಂದ ಯಾವ ರೀತಿಯ ನಿರ್ದೇಶನ ಕೊಡಿಸಬೇಕಿದೆ?” ಎಂದು ನಾವು ಯೋಚಿಸಬೇಕಿದೆ ಎಂದ ಚಿನೋಯ್, ಕಾರ್ಯಕ್ರಮ ಸಂಹಿತೆ ಉಲ್ಲಂಘಿಸಿದರೆ ಚಾನೆಲ್‌ ಪ್ರಸಾರ ನಿಲ್ಲಿಸಬಹುದು ಎಂದು ಕೇಬಲ್‌ ಟೆಲಿವಿಷನ್‌ ನೆಟ್‌ವರ್ಕ್‌ ಕಾಯಿದೆಯಲ್ಲಿ ಉಲ್ಲೇಖಿಸಲಾಗಿರುವುದನ್ನು ನೆನಪಿಸಿದರು.

ಸುದ್ದಿ ಪ್ರಸಾರ ಸಂಸ್ಥೆಯ ಸುಧಾರಣಾ ಕ್ರಮಗಳಲ್ಲಿ ನೈತಿಕ ಮಾನದಂಡಗಳ ನೀತಿ ಸಂಹಿತೆ ಸೇರಿದೆ. ಆದರೆ, ಇದರಡಿ ನಾವು ಮಾತನಾಡುತ್ತಿರುವ ವಿಷಯಗಳ ಕುರಿತು ಅವುಗಳು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದರು.

“ಸಾರ್ಜಜನಿಕ ಅವಹಾಲುಗಳತ್ತ ಗಮನಹರಿಸಿ, ಸ್ವಯಂಪ್ರೇರಿತ ಕ್ರಮಕೈಗೊಳ್ಳಲಾಗುತ್ತಿದ್ದರೂ ಸರ್ಕಾರ ತಾನು ಯಾವ ರೀತಿಯ ಕ್ರಮಕೈಗೊಂಡಿದ್ದೇವೆ ಎಂಬುದರ ಕುರಿತು ವಿವರಣೆ ನೀಡುತ್ತಿಲ್ಲ. ಸರ್ಕಾರ ಕ್ರಮಕೈಗೊಂಡಿದ್ದರೆ ನಾವು ಇಲ್ಲಿಯ ತನಕ ಬರುವ ಅಗತ್ಯವಿರಲಿಲ್ಲ. ಆದರೆ, ಏನಾಗುತ್ತಿದೆ ಎಂದು ಅವರು ನೋಡಲಿಲ್ಲ” ಎಂದು ವಿವರಿಸಿದರು.

“ಇದು ನ್ಯಾಯಾಂಗ ನಿಂದನೆಯಾಗುವುದಿಲ್ಲ ಎಂಬ ಅಭಿಪ್ರಾಯವನ್ನು ಅವರು (ಮಾಧ್ಯಮಗಳು) ಹೊಂದಿದ್ದಾರೆ. ಸ್ಪಷ್ಟತೆಯ ದೃಷ್ಟಿಯಿಂದ ನಾನು ನಿಮ್ಮ ಮುಂದೆ ಕ್ರಮಬದ್ಧವಾಗಿ ವಿಚಾರಗಳನ್ನು ಮಂಡಿಸುತ್ತಿದ್ದೇನೆ. ನಿಯಂತ್ರಣ ವ್ಯವಸ್ಥೆ ಇದೆ ಎಂದು ನ್ಯಾಯಮೂರ್ತಿಗಳು ಹೇಳುತ್ತಿದ್ದೀರಿ. ಆದರೆ ಆ ನಿಯಂತ್ರಣಗಳತ್ತ ಒಮ್ಮೆ ಚಿತ್ತಹರಿಸಿ, ಅವುಗಳಿಂದ ನಾವೇನು ಸಾಧಿಸಿದ್ದೇವೆ?” ಎಂದರು.

“ಯಾರನ್ನು ತನಿಖೆಗೆ ಒಳಪಡಿಸಬೇಕು ಅಥವಾ ಬೆನ್ನಟ್ಟಬೇಕು ಎಂಬುದನ್ನು ನಿರ್ಧರಿಸಲು ನೀವು (ಮಾಧ್ಯಮಗಳು) ನ್ಯಾಯಮೂರ್ತಿಗಳಾಗಲಿ ಅಥವಾ ತೀರ್ಪುಗಾರರಾಗಲಿ ಅಲ್ಲ” ಎಂದು ಅವರು ಮಾಧ್ಯಮಗಳ ವರ್ತನೆಯ ಬಗ್ಗೆ ಕಟುವಾಗಿ ನುಡಿದರು.

ಮಾಧ್ಯಮಗಳು ತಿಂಗಳುಗಟ್ಟೆಲೆ ಈ ವಿಚಾರವಾಗಿ ಕೈಗೊಂಡ ಪ್ರಚಾರವನ್ನು ನೋಡಿಯೂ ಏನೂ ಮಾಡದ ಸರ್ಕಾರದ ಧೋರಣೆಯ ಬಗ್ಗೆಯೂ ಚಿನೋಯ್‌ ಪೀಠಕ್ಕೆ ಮನವರಿಕೆ ಮಾಡಿಡಲು ಪ್ರಯತ್ನಿಸಿದರು. “…ಎರಡು ತಿಂಗಳು ನಡೆದ ಪ್ರಚಾರದ ಬಗ್ಗೆ ಯಾವುದೇ ಗಮನ ನೀಡಿಲ್ಲ ಎಂದಾದರೆ ಭಾರತ ಸರ್ಕಾರ ನೀಡುವ ಕಾರಣಗಳೇನು? ಒಂದೋ ತನ್ನ ಕರ್ತವ್ಯ ನಿಭಾಯಿಸದಿರುವುದಿರಬೇಕು ಇಲ್ಲವೇ ಅಂತಹ ಅಧಿಕಾರ ಹೊಂದಿಲ್ಲದಾಗಿರಬೇಕು, ಈ ಎರಡೂ ಸಂದರ್ಭದಲ್ಲಿ ನ್ಯಾಯಾಂಗದ ಮಧ್ಯಪ್ರವೇಶ ಅಗತ್ಯ” ಎಂದು ಪ್ರತಿಪಾದಿಸಿದರು.

“ಅಲ್ಲೊಂದು ಇಲ್ಲೊಂದು ಘಟನೆಗಳಾದರೆ ಸರಿ. ಆದರೆ, ಎರಡು ತಿಂಗಳ ಕಾಲ ನಿರಂತರವಾಗಿ ನಡೆದ ಈ ವರದಿಗಾರಿಕೆಗೆ (ಸರ್ಕಾರದಿಂದ) ಯಾವುದೇ ಪ್ರತಿಕ್ರಿಯೆಯಿಲ್ಲ…! ಮಾರ್ಗಸೂಚಿಗಳನ್ನು ಮುಂದು ಮಾಡುವ ಮೂಲಕ ಗೌರವಾನ್ವಿತ ನ್ಯಾಯಮೂರ್ತಿಗಳಾದ ತಾವು ಕಾನೂನಿನ ಕುರಿತಾಗಿ ವಿವರಣೆ ನೀಡುತ್ತಿದ್ದೀರಿ… ಆದರೆ, ಹಲವು ತಿಂಗಳು ಕಾಲ ಅವರು (ಸರ್ಕಾರ) ಏನನ್ನೂ ಮಾಡಿಲ್ಲ” ಎಂದು ಸರ್ಕಾರದ ನಿಲುವನ್ನು ತರಾಟೆಗೆ ತೆಗೆದುಕೊಂಡರು.

ಇಂಥ ಸಂದರ್ಭದಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶಿಸಬಹುದು ಎಂದ ಚಿನೋಯ್‌ ಅವರು “ಶಿಕ್ಷಿಸುವ ಅಧಿಕಾರ ನ್ಯಾಯಾಲಯಗಳಿಗೆ ಇದೆ ಎಂದು ಹಿಂದೆ ಹೇಳಲಾಗಿದ್ದು, ವಿಷಯಕ್ಕೆ ಧಕ್ಕೆ ಬಾರದಂತೆ ಮುಂಜಾಗ್ರತೆ ದೃಷ್ಟಿಯಿಂದ ನಿರ್ದಿಷ್ಟ ಪ್ರಕರಣಗಳಲ್ಲಿ ಪ್ರಚಾರವನ್ನು ಮುಂದೂಡಬಹುದಾಗಿದೆ…" ಎಂದರು. ಮುಂದುವರೆದು, "ಯಾರದೇ ಪ್ರತಿಷ್ಠೆಯನ್ನು ಚಾನೆಲ್‌ಗಳು ಹೇಗೆ ನಾಶಪಡಿಸಲು ಸಾಧ್ಯ? ಮತ್ತು ಅಪರಾಧಿಗಳು ಎಂದು ಹೇಗೆ ತೋರಿಸಲು ಸಾಧ್ಯ? ಮಾಹಿತಿ ನೀಡಿ, ಟೀಕೆ ಮಾಡಿ, ಆದರೆ ತೀರ್ಪು ನೀಡಬೇಡಿ, ಇದುವೇ ಸಾರಾಂಶ” ಎಂದು ವಾದಿಸಿದರು.