ಸುದ್ದಿಗಳು

ನ್ಯಾಯಾಲಯಗಳಂತಲ್ಲದೆ ಮಧ್ಯಸ್ಥಿಕೆ ಎಂಬುದು ವ್ಯಾಜ್ಯದ ಮೂಲವನ್ನೇ ಗುಣಪಡಿಸುತ್ತದೆ: ಸಿಜೆಐ ಸಂಜೀವ್ ಖನ್ನಾ

ನವದೆಹಲಿಯಲ್ಲಿ ಶನಿವಾರ ನಡೆದ ಭಾರತೀಯ ಮಧ್ಯಸ್ಥಿಕೆ ಸಂಘದ ಉದ್ಘಾಟನೆ ವೇಳೆ ಅವರು ಮಾತನಾಡಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Bar & Bench

ಮಧ್ಯಸ್ಥಿಕೆ ಎಂಬುದು ನ್ಯಾಯದ ಗೌಣ ಸ್ವರೂಪವಾಗಿರದೆ ಅದರ ಪ್ರಾಜ್ಞ ರೂಪವಾಗಿದೆ ಎಂಬುದನ್ನು ಜನರಿಗೆ ಅರ್ಥಮಾಡಿಸಲು ಶ್ರಮಿಸಬೇಕು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ತಿಳಿಸಿದರು.

ನವದೆಹಲಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಪ್ರಥಮ ರಾಷ್ಟ್ರೀಯ ಮಧ್ಯಸ್ಥಿಕೆ ಸಮ್ಮೇಳನ ಮತ್ತು ಭಾರತೀಯ ಮಧ್ಯಸ್ಥಿಕೆ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

"ಕಳೆದ ಎರಡು ದಶಕಗಳಲ್ಲಿ, ವಿವಾದಗಳನ್ನು ಪರಿಹರಿಸುವಲ್ಲಿ ಮಧ್ಯಸ್ಥಿಕೆ ನಿರ್ಣಾಯಕ ಪಾತ್ರ ವಹಿಸಿದೆ. 2016 ರಿಂದ 2025 ರ ಆರಂಭದವರೆಗೆ, 7.57 ಲಕ್ಷ ಪ್ರಕರಣಗಳನ್ನು ಮಧ್ಯಸ್ಥಿಕೆಯ ಮೂಲಕ ಇತ್ಯರ್ಥಪಡಿಸಲಾಗಿದೆ. ಆದರೂ, ಮಧ್ಯಸ್ಥಿಕೆ ಇನ್ನೂ ಹಳ್ಳಿಗಳನ್ನು ತಲುಪಿಲ್ಲ ಎಂಬುದನ್ನು ಒಪ್ಪಲೇಬೇಕು. ಆದ್ದರಿಂದ, ಭಾರತ ಮಧ್ಯಸ್ಥಿಕೆ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವಲ್ಲಿ ಮತ್ತು ಅದರ ಪ್ರಾಮುಖ್ಯತೆ ಅರ್ಥಮಾಡಿಕೊಳ್ಳುವಲ್ಲಿ ನಿಧಾನಗತಿಯಲ್ಲಿ ಸಾಗಿದೆ. ಮಧ್ಯಸ್ಥಿಕೆ ಎಂಬುದು ನ್ಯಾಯದ ಗೌಣ ಸ್ವರೂಪವಾಗಿರದೆ ಅದರ ಪ್ರಾಜ್ಞ ರೂಪವಾಗಿದೆ ಎಂಬುದನ್ನು ಪ್ರತಿಯೊಬ್ಬ ದಾವೆದಾರ, ನಾಗರಿಕ, ಉದ್ಯಮಿ ಹಾಗೂ ಪ್ರತಿ ವ್ಯಕ್ತಿಗೆ ಅರ್ಥಮಾಡಿಸುವುದು ನಮ್ಮ ಗುರಿಯಾಗಬೇಕು” ಎಂದರು.

ನ್ಯಾಯಾಲಯದ ತೀರ್ಪಿಗೆ ಹೋಲಿಸಿದರೆ, ವಿವಾದಗಳಿಗೆ ಮಧ್ಯಸ್ಥಿಕೆ ಹೆಚ್ಚು ಸಮಗ್ರ ಪರಿಹಾರ ನೀಡುತ್ತದೆ ಎಂದು ಅವರು ವಿವರಿಸಿದರು. ನ್ಯಾಯಾಲಯದ ತೀರ್ಪು ನೀಡಿದಾಗ, ಒಬ್ಬ ಪಕ್ಷಕಾರರಿಗೆ ಗೆಲುವು ದೊರೆತರೆ ಮತ್ತೊಬ್ಬ ಕಕ್ಷಿದಾರರಿಗೆ ಸೋಲಾಗುತ್ತದೆ. ಇದರಿಂದ ಸಂಬಂಧಗಳು ಹದಗೆಡುತ್ತವೆ. ಆದರೆ ಮಧ್ಯಸ್ಥಿಕೆ ಸಂಬಂಧಗಳನ್ನು ಹದಗೊಳಿಸುತ್ತದೆ. ಮಧ್ಯಸ್ಥಿಕೆ  ನೀಡುವ ಪರಿಹಾರಗಳು ಕಡಿಮೆ ಆಘಾತಕಾರಿ ಮತ್ತು ಹೆಚ್ಚು ಮಾನವೀಯವಾಗಿವೆ ಎಂದು ಅವರು ಹೇಳಿದರು. ಜೊತೆಗೆ ನ್ಯಾಯಾಲಯಗಳಂತಲ್ಲದೆ ಮಧ್ಯಸ್ಥಿಕೆ ಎಂಬುದು ವ್ಯಾಜ್ಯದ ಮೂಲವನ್ನೇ ಗುಣಪಡಿಸುತ್ತದೆ ಎಂದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಮಾತನಾಡಿ, ನ್ಯಾಯಾಂಗ ಕಾರ್ಯವಿಧಾನಗಳ ದೀರ್ಘ ಮತ್ತು ಶ್ರೀಮಂತ ಸಂಪ್ರದಾಯವನ್ನು ಭಾರತ ಹೊಂದಿದೆ. ಇದರಲ್ಲಿ ನ್ಯಾಯಾಲಯದ ಹೊರಗೆ ವ್ಯಾಜ್ಯ ಇತ್ಯರ್ಥ ಹೆಚ್ಚು ರೂಢಿಯಲ್ಲಿತ್ತು. ಪಂಚಾಯತ್ ಸಂಸ್ಥೆಯು ಅಂತಹ ಸೌಹಾರ್ದಯುತ ಇತ್ಯರ್ಥಗಳನ್ನು ಬೆಳೆಸುವಲ್ಲಿ ಹೆಸರುವಾಸಿಯಾದುದು. ವ್ಯಾಜ್ಯ ಇತ್ಯರ್ಥವಷ್ಟೇ ಗುರಿಯಾಗಿರದೆ ದೀರ್ಘಕಾಲದ ಕಹಿಯನ್ನು ಇಲ್ಲವಾಗಿಸುವುದು ಇಂತಹ ಕಾರ್ಯವಿಧಾನಗಳ ಗುರಿಯಾಗಿತ್ತು ಎಂದರು. 

"ಇದು ನಮಗೆ ಸಾಮಾಜಿಕ ಸಾಮರಸ್ಯದ ಆಧಾರಸ್ತಂಭವಾಗಿತ್ತು. ದುರದೃಷ್ಟವಶಾತ್, ವಸಾಹತುಶಾಹಿ ಆಡಳಿತಗಾರರು ನಮ್ಮ ಮೇಲೆ ಅನ್ಯ ಕಾನೂನು ವ್ಯವಸ್ಥೆಯನ್ನು ಹೇರಿದಾಗ ಈ ಅನುಕರಣೀಯ ಪರಂಪರೆ ನಿರ್ಲಕ್ಷ್ಯಕ್ಕೊಳಗಾಯಿತು" ಎಂದು ಅವರು ಹೇಳಿದರು. ಹಳ್ಳಿಗಳಲ್ಲಿ ಕೊನೆಗೊಳ್ಳಬೇಕಾದ ಅನೇಕ ವಿವಾದಗಳು ನ್ಯಾಯಾಲಯಕ್ಕೆ ಬರುತ್ತವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ವಸಾಹತುಶಾಹಿ ಕಾನೂನುಗಳು ನ್ಯಾಯಾಲಯದ ಹೊರಗಿನ ಇತ್ಯರ್ಥ ಅಥವಾ ಮಧ್ಯಸ್ಥಿಕೆಗೆ ಅವಕಾಶ ನೀಡಿದ್ದರೂ, ಅದಕ್ಕೆ ಯಾವುದೇ ಬೆಂಬಲ ನೀಡುವ ಸಾಂಸ್ಥಿಕ ಚೌಕಟ್ಟು ಇರಲಿಲ್ಲ ಎಂದು ಅವರು ಹೇಳಿದರು. ಹೊಸ ಮಧ್ಯಸ್ಥಿಕೆ ಕಾಯಿದೆ ಈ ಕಾನೂನು ಅಂತರವನ್ನು ಕಡಿಮೆ ಮಾಡುತ್ತದೆ ಮತ್ತು ಭಾರತದಲ್ಲಿ  ಪರಿಣಾಮಕಾರಿ ಮಧ್ಯಸ್ಥಿಕೆ ವ್ಯವಸ್ಥೆಗೆ ಅಡಿಪಾಯ ಹಾಕುತ್ತದೆ ಎಂದು ಅವರು ಹೇಳಿದರು.

ಸುಪ್ರೀಂ ಕೋರ್ಟ್‌ ಭಾವಿ ಮುಖ್ಯ ನ್ಯಾಯಮೂರ್ತಿ ಬಿ ಆರ್‌ ಗವಾಯಿ ಅವರು ಮಾತನಾಡಿ ಮಧ್ಯಸ್ಥಿಕೆ ಕಾಯಿದೆಯ ಸಿದ್ಧಾಂತವನ್ನು ಬೋಧಿಸುವುದನ್ನು ಮೀರಿ ಕಾನೂನು ಶಾಲೆಯ ಪಠ್ಯಕ್ರಮ ಸಾಗಬೇಕು ಎಂದರು. ಮಧ್ಯಸ್ಥಿಕೆಗೆ ಅಗತ್ಯವಾದ ಮೃದು ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ಮುಖ್ಯ ಎಂದು ಅವರು ಹೇಳಿದರು.

ಮಧ್ಯಸ್ಥಿಕೆ ಎಂಬುದು ವಿವಾದ ಪರಿಹಾರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಬೇಕು. ಆಗ ಮಾತ್ರ ಭಾರತ 2023 ರ ಮಧ್ಯಸ್ಥಿಕೆ ಕಾಯಿದೆಯನ್ನು ಅದರ ನಿಜವಾದ ಸಾಮರ್ಥ್ಯದಲ್ಲಿ ಬಳಸಿಕೊಳ್ಳಬಹುದು ಎಂದು ಅವರು ಹೇಳಿದರು.

ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ (ಪ್ರಭಾರ) ಅರ್ಜುನ್ ರಾಮ್ ಮೇಘವಾಲ್ , ಅಟಾರ್ನಿ ಜನರಲ್ ಆರ್. ವೆಂಕಟರಮಣಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.