ಸುದ್ದಿಗಳು

ಕೊಲಿಜಿಯಂ ನಿರ್ಣಯಗಳನ್ನು ಕೇಂದ್ರ ಆಯ್ದು ಪ್ರಕ್ರಿಯೆಗೆ ಒಳಪಡಿಸುವುದರಿಂದ ಹಿರಿತನಕ್ಕೆ ಧಕ್ಕೆ: ಸುಪ್ರೀಂ ಅಸಮಾಧಾನ

Bar & Bench

ಕೊಲಿಜಿಯಂ ಶಿಫಾರಸು ಮಾಡಿದ ನ್ಯಾಯಮೂರ್ತಿಗಳ ಹೆಸರುಗಳನ್ನು ಕೇಂದ್ರ ಸರ್ಕಾರವು ತನ್ನಿಷ್ಟದಂತೆ ಆಯ್ದು ಪ್ರಕ್ರಿಯೆಗೆ ಒಳಪಡಿಸುವುದರಿಂದ ಅಭ್ಯರ್ಥಿಗಳ ಹಿರಿತನದ ಮೇಲೆ ಪರಿಣಾಮ ಬೀರಲಿದ್ದು ಹೈಕೋರ್ಟ್ ನ್ಯಾಯಮೂರ್ತಿಗಳ ಹುದ್ದೆಗೆ ಕೊಲಿಜಿಯಂ ಶಿಫಾರಸು ಮಾಡಿದ ಪ್ರತಿಭಾನ್ವಿತ ವಕೀಲರು ಹಿಂದೆ ಸರಿಯುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ವಿಷಾದ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿಗಳ ಹುದ್ದೆಗೆ ನಿರ್ದಿಷ್ಟ ಸಂಖ್ಯೆಯ ವ್ಯಕ್ತಿಗಳನ್ನು ಶಿಫಾರಸು ಮಾಡಿದ ಸಂದರ್ಭದಲ್ಲಿ ಕೆಲವರನ್ನು ಮಾತ್ರ ಕೇಂದ್ರ ಸರ್ಕಾರ ನೇಮಕ ಮಾಡಿದಾಗ ಶಿಫಾರಸು ಮಾಡಿದ ಪಟ್ಟಿಯಲ್ಲಿದ್ದ ಇತರ ವ್ಯಕ್ತಿಗಳ ಹಿರಿತನಕ್ಕೆ ಅಡ್ಡಿಯಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸುಧಾಂಶು ಧುಲಿಯಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.

ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ವಿಳಂಬವಾಗುತ್ತಿರುವುದನ್ನು ಪ್ರಶ್ನಿಸಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠ ಕೆಲ ಪ್ರಮುಖ ಅವಲೋಕನಗಳನ್ನು ಮಾಡಿತು.

“ನೇಮಕಾತಿ ಪ್ರಕ್ರಿಯೆಯಲ್ಲಿ ಒಬ್ಬರನ್ನು ನೇಮಿಸಿ ಮತ್ತೊಬ್ಬರನ್ನು ನೇಮಿಸದೇ ಹೋದಾಗ ಸೇವಾ ಹಿರಿತನ ತತ್ವಕ್ಕೆ ತೊಂದರೆ ಉಂಟಾಗುತ್ತದೆ. ಪೀಠದ ಭಾಗವಾಗುವ ಉತ್ಸಾಹ ಕಳೆದು ಹೋಗುತ್ತದೆ.  ನಾಲ್ಕು ಹೆಸರುಗಳನ್ನು ಶಿಫಾರಸು ಮಾಡಲಾಗಿದೆ ಎಂದು ಭಾವಿಸೋಣ, ಎರಡು ಹೆಸರುಗಳನ್ನು ಆಯ್ಕೆ ಪ್ರಕ್ರಿಯೆಗೆ ಒಳಪಡಿಸಿ ಉಳಿದೆರಡನ್ನು ಬಾಕಿ ಇರಿಸಿದರೆ ಅಗ ತಾವೆಲ್ಲಿ ನಿಂತಿದ್ದೇವೆ ಎಂಬುದರ ಆಧಾರದ ಮೇಲೆ ಅವರು ಶಿಫಾರಸುಗಳನ್ನು ಒಪ್ಪಿಕೊಳ್ಳತ್ತಾರೆ. ಇದರಿಂದಾಗಿಯೇ ಪ್ರತಿಭಾವಂತ ವಕೀಲರು ಆಗಾಗ್ಗೆ ಹಿಂದೆ ಸರಿದುಬಿಡುತ್ತಾರೆ” ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು.

ನ್ಯಾಯಮೂರ್ತಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಕೊಲಿಜಿಯಂ ಶಿಫಾರಸುಗಳಿಗೆ ಕೇಂದ್ರ ಸರ್ಕಾರ ಅಂಕಿತ ಹಾಕುವುದಕ್ಕೆ ವಿಳಂಬ ಮಾಡುವುದನ್ನು ನ್ಯಾಯಾಲಯ ಪ್ರಶ್ನಿಸಿದೆ.

ಸುಪ್ರೀಂ ಕೋರ್ಟ್ ಕೊಲಿಜಿಯಂನ ಐವರು ಹಿರಿಯ ನ್ಯಾಯಮೂರ್ತಿಗಳು ತಮ್ಮ ವಿವೇಚನೆ ಬಳಸಿ ನ್ಯಾಯಮೂರ್ತಿಗಳ ವರ್ಗಾವಣೆಗೆ ಶಿಫಾರಸು ಮಾಡಿದ್ದಾಗ, ಕೇಂದ್ರ ಸರ್ಕಾರ ಅದನ್ನು ವಿಳಂಬಗೊಳಿಸುವ ಬದಲು ತ್ವರಿತವಾಗಿ ಪ್ರಕ್ರಿಯೆಗೆ ಒಳಪಡಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಇದೇ ವೇಳೆ ವರ್ಗಾವಣೆ ವಿಚಾರದಲ್ಲಿಯೂ ಕೇಂದ್ರದ ಧೋರಣೆಯನ್ನು ನ್ಯಾಯಾಲಯ ಪ್ರಶ್ನಿಸಿದೆ. "ನೇಮಕಾತಿಗಳೇನೋ ಸಮಾಲೋಚನಾ ಪ್ರಕ್ರಿಯೆಗೆ ಒಳಪಟ್ಟಿರುತ್ತವೆ. (ಆದರೆ) ವರ್ಗಾವಣೆಗಳು ಈಗಾಗಲೇ ನ್ಯಾಯಮೂರ್ತಿಗಳಾಗಿರುವವರಿಗೆ ಸಂಬಂಧಿಸಿದ್ದಾಗಿರುತ್ತವೆ. ಈ ವರ್ಗಾವಣೆಗಳಲ್ಲಿ ಐವರು ಹಿರಿಯ ನ್ಯಾಯಮೂರ್ತಿಗಳ ವಿವೇಚನೆ ಇರುತ್ತದೆ. ಹಾಗಾಗಿ ಅವರು ಎಲ್ಲಿರುವುದು ಉತ್ತಮ ಎಂದು ಯೋಚಿಸಿ ನಿರ್ಧರಿಸಲಾಗಿರುತ್ತದೆ. ಈ ಶಿಫಾರಸು ಪ್ರಭಾವಕ್ಕೊಳಗಾಗಬಾರದು ಎಂದು ನಾವು ಭಾವಿಸುತ್ತೇವೆ," ಎಂದು ನ್ಯಾಯಾಲಯ ಹೇಳಿತು. "ಕೆಲವೊಂದು ಕ್ಷೇತ್ರಗಳಲ್ಲಿ ಸುಧಾರಣೆಗಳಾಗಿವೆ, ಹಿಂದೆ ಆರು ತಿಂಗಳಲ್ಲಿ ಆಗಿರದೆ ಇದ್ದುದು ಒಂದು ತಿಂಗಳಲ್ಲಿ ಆಗಿರುತ್ತದೆ" ಎಂದು ಉತ್ತಮ ಅಂಶವನ್ನೂ ಸಹ ನ್ಯಾಯಾಲಯ ಹೇಳಿತು.

ನೇಮಕಾತಿಗಾಗಿ ಕೊಲಿಜಿಯಂ ಶಿಫಾರಸು ಮಾಡಿದ ಹೆಸರುಗಳನ್ನು ಪ್ರಕ್ರಿಯೆಗೊಳಿಸಲು ಕೇಂದ್ರ ಸರ್ಕಾರ ವಿಫಲವಾಗಿರುವುದು ಎರಡನೇ ನ್ಯಾಯಮೂರ್ತಿಗಳ ಪ್ರಕರಣದಲ್ಲಿ ನೀಡಿದ ತೀರ್ಪಿಗೆ ನೇರ ವ್ಯತಿರಿಕ್ತವಾಗಿದೆ ಎಂದು ಸಂಘ ಪ್ರತಿಪಾದಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಕಾನೂನು ಕಾರ್ಯದರ್ಶಿಯವರ ಪ್ರತಿಕ್ರಿಯೆ ಕೇಳಿತ್ತು.

ಕೇಂದ್ರ ಸರ್ಕಾರದ ಬಳಿ ಐವರು ನ್ಯಾಯಮೂರ್ತಿಗಳ ಪುನರುಚ್ಚರಿಸಿದ ಹೆಸರುಗಳು, ಮೊದಲ ಬಾರಿಗೆ ಶಿಫಾರಸು ಮಾಡಲಾದ ಐವರು ನ್ಯಾಯಮೂರ್ತಿಗಳ ಹೆಸರುಗಳು ಹಾಗೂ ಹನ್ನೊಂದು ವರ್ಗಾವಣೆಗಳಿಗೆ ಸಂಬಂಧಿಸಿದ ಕಡತಗಳು ಬಾಕಿ ಉಳಿದಿವೆ ಎಂಬ ವಿಚಾರವನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಗಮನಿಸಿತು.  

ಎರಡು ವಾರಗಳಲ್ಲಿ ಬಾಕಿ ಇರುವ ಶಿಫಾರಸುಗಳ ಸಂಖ್ಯೆ ಇಳಿಮುಖವಾಗಲಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಬಲ್ಬೀರ್ ಸಿಂಗ್, ಪೀಠಕ್ಕೆ ಭರವಸೆ ನೀಡಿದರು. ನವೆಂಬರ್‌ ಎರಡನೇ ವಾರದಲ್ಲಿ ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.

ಇನ್ನೂ 26 ಮಂದಿಯ ವರ್ಗಾವಣೆಯ ಶಿಫಾರಸು ಬಾಕಿ ಉಳಿದಿದ್ದು ಇದುವರೆಗೂ ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ ಎಂದು ಕಳೆದ ವಿಚಾರಣೆ ವೇಳೆ ಪೀಠ ಆಕ್ಷೇಪಿಸಿತ್ತು. ಅದಾದ ಕೆಲ ದಿನಗಳಲ್ಲಿ ಕೇಂದ್ರ ಸರ್ಕಾರ 16 ನ್ಯಾಯಮೂರ್ತಿಗಳ ವರ್ಗಾವಣೆಗೆ ಹಾಗೂ ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಸಿದ್ಧಾರ್ಥ್‌ ಮೃದುಲ್‌ ಅವರನ್ನು ಮಣಿಪುರ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡಿ ಅಧಿಸೂಚನೆ ಹೊರಡಿಸಿತ್ತು.