ತಮ್ಮ ಅಧಿಕಾರಾವಧಿ ಕುರಿತಾದ ಟೀಕೆಗಳನ್ನು ಅದರಲ್ಲಿಯೂ ತಮ್ಮ ಅವಧಿಯಲ್ಲಿ ನ್ಯಾಯಮೂರ್ತಿಗಳ ನೇಮಕಾತಿ ನಡೆಯಲಿಲ್ಲ ಎಂಬ ವಿಚಾರವನ್ನು ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ತಳ್ಳಿಹಾಕಿದರು.
ಇಂಡಿಯಾ ಟುಡೆ ಆಂಗ್ಲ ನಿಯತಕಾಲಿಕದ ಎರಡು ದಿನಗಳ ಕಾರ್ಯಕ್ರಮ ಇಂಡಿಯಾ ಟುಡೇ ಕಾನ್ಕ್ಲೇವ್ - 2023ರ ಅಂತಿಮ ದಿನವಾದ ಶನಿವಾರ ಭಾಗವಹಿಸಿ ಅವರು ಮಾತನಾಡಿದರು.
ಕೊಲಿಜಿಯಂ ಸದಸ್ಯರಲ್ಲಿ ಒಮ್ಮತವಿಲ್ಲದ ಕಾರಣ ತಾವು ಸಿಜೆಐ ಆಗಿದ್ದ ಅವಧಿಯಲ್ಲಿ ಯಾವುದೇ ನೇಮಕಾತಿಗಳನ್ನು ಮಾಡಲಾಗಲಿಲ್ಲ ಈ ಹಿಂದೆಯೂ ಸುದೀರ್ಘ ಕಾಲದಿಂದ ನ್ಯಾಯಾಂಗ ನೇಮಕಾತಿ ನಡೆಯದ ನಿದರ್ಶನಗಳಿವೆ ಎಂದು ಅವರು ಸ್ಪಷ್ಟಪಡಿಸಿದರು.
ನ್ಯಾ. ಬೊಬ್ಡೆ ಅವರ ಮಾತಿನ ಪ್ರಮುಖ ವಿಚಾರಗಳು
(ನ್ಯಾ. ಅಕಿಲ್ ಖುರೇಶಿ ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡದ ವಿಚಾರವನ್ನು ಪ್ರಸ್ತಾಪಿಸುತ್ತಾ) ಅವರ ಹೆಸರು ಮಾತ್ರವೇ ಅಲ್ಲದೆ, ಇನ್ನೂ ಅನೇಕರು ಇದ್ದಾರೆ. ಎರಡು ವರ್ಷಗಳ ಕಾಲ ನ್ಯಾಯಮೂರ್ತಿಗಳನ್ನು ನೇಮಕ ಮಾಡದ ಉದಾಹರಣೆಗಳಿವೆ. ಆ ಎಲ್ಲಾ ನ್ಯಾಯಮೂರ್ತಿಗಳನ್ನು ನಂತರ ನೇಮಕ ಮಾಡಲಾಯಿತು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆ ಕಷ್ಟಕರ ಪದವಿಯಾಗಿದ್ದು ಬೇಜವಾಬ್ದಾರಿಯ ಹೇಳಿಕೆ ನೀಡಿದರೆ ಸಮಸ್ಯೆ ಎದುರಾಗುತ್ತದೆ. ಅದಕ್ಕೆ ಸಿಜೆಐ ಹೊಣೆಗಾರರಾಗುತ್ತಾರೆ. ಯಾವುದೇ ಪದವಿಯಲ್ಲಿ ಮುಳ್ಳುಗಳಿಲ್ಲ ಬದಲಿಗೆ ಆ ಮುಳ್ಳುಗಳಿರುವುದು ನೋಡುಗರ ಕಣ್ಣಲ್ಲಿ.
ಅಯೋಧ್ಯೆ ಪ್ರಕರಣದ ತೀರ್ಪಿನಲ್ಲಿ ರಾಜಕೀಯವಾದದ್ದೇನೂ ಇರಲಿಲ್ಲ. ಅದು ಕೇವಲ ರಾಮನ ಜನ್ಮಭೂಮಿಗೆ ಸಂಬಂಧಿಸಿದ್ದಾಗಿತ್ತು. (ಹಗರಣ) ರಫೇಲ್‌ನಲ್ಲಿ ರಾಜಕೀಯ ಇರಲಿಲ್ಲ. ಅದು ರಕ್ಷಣಾ ಒಪ್ಪಂದ ಕುರಿತಾದುದಾಗಿತ್ತು. ರಾಜಕಾರಣಿಗಳು ಅಯೋಧ್ಯೆಯ ಬಗ್ಗೆ ಮಾತನಾಡುವುದು ಬಿಟ್ಟರೆ ಅದರಲ್ಲಿ ರಾಜಕೀಯವಾದದ್ದು ಏನಿದೆ? ನ್ಯಾಯಾಧೀಶರಿಗೂ ರಾಜಕೀಯಕ್ಕೂ ಸಂಬಂಧ ಇಲ್ಲ. ನ್ಯಾಯಾಧೀಶರು ಕೇವಲ ಹಕ್ಕು ನಿರ್ಣಯವನ್ನು ಮಾತ್ರವೇ ಮಾಡುತ್ತಾರೆ. ಅಯೋಧ್ಯೆ ತೀರ್ಪು ನೀಡುವಾಗ ಬೇರೇನೂ ಒತ್ತಡ ಇರಲಿಲ್ಲ. ಆದರೆ ರಾಜಕಾರಣದ ಮೇಲೆ ಉಂಟು ಮಾಡುವ ಪರಿಣಾಮದ ಬಗ್ಗೆ ತುಸು ಆತಂಕದ ಭಾವನೆ ಇತ್ತು.
ಈಗ ರದ್ದಾದ ಕೃಷಿ ಕಾನೂನಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದಾಗಲೂ ಅದೇ ರೀತಿ ಆಗಿತ್ತು. ಕೃಷಿ ಕಾನೂನು ನಿಷೇಧ ಒತ್ತಾಯಿಸಿ ಹಿಂಸಾತ್ಮಕ ಘಟನೆಗಳು ನಡೆದಾಗ ನೀವು ಕಾನೂನನ್ನು ಏಕೆ ರದ್ದುಗೊಳಿಸಬಾರದೆಂದು ಸರ್ಕಾರಕ್ಕೆ ಹೇಳಿದೆ. ಕಾಯಿದೆಗಳಿಗೆ ತಡೆ ನೀಡಲು (ಪೀಠದ) ನ್ಯಾಯಮೂರ್ತಿಗಳೆಲ್ಲಾ ನಿರ್ಧರಿಸಿದ್ದೆವು. ಇದರಲ್ಲಿ ರಾಜಕೀಯ ಎಲ್ಲಿದೆ? ಇಲ್ಲಿ ರಾಜಕೀಯವೇನೂ ಇರಲಿಲ್ಲ.
ತಮ್ಮ ಅವಧಿಯಲ್ಲಿ ಕಾರ್ಯಾಂಗದಿಂದ ಯಾವುದೇ ಹಸ್ತಕ್ಷೇಪ ಎದುರಾಗಲಿಲ್ಲ. (ಕೆಲ ವರ್ಷಗಳ ಹಿಂದೆ) ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಪ್ರಕರಣ ಪಟ್ಟಿ ಮಾಡುವಲ್ಲಿ ಪಕ್ಷಪಾತ ನಡೆಯುತ್ತಿದೆ ಎಂದು ಆರೋಪಿಸಿ ನಡೆದ ಪತ್ರಿಕಾಗೋಷ್ಠಿ ದುರದೃಷ್ಟಕರವಾದುದು. ಹಾಗಾಗದಂತೆ ತಡೆಯಲು ಸಾಕಷ್ಟು ಯತ್ನಿಸಿ ಸ್ವಲ್ಪಮಟ್ಟಿಗೆ ಯಶಸ್ವಿಯಾದೆ.
ಚುನಾವಣಾ ಬಾಂಡ್‌ಗಳನ್ನು ಪ್ರಶ್ನಿಸಿದ್ದ ಅರ್ಜಿ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರೋಧಿಸಿದ್ದ ಅರ್ಜಿಗಳನ್ನು ಉದ್ದೇಶಪೂರ್ವಕವಾಗಿ ಬಾಕಿ ಇರಿಸಿರಲಿಲ್ಲ. ಅನುಮಾನ ಇರುವ ವ್ಯಕ್ತಿಗೆ ಅವನು ಹುಡುಕಿದ್ದೇ ಸಿಗುತ್ತದೆ. ಸಿಎಎಯಂತಹ ಪ್ರಕರಣಗಳಿಗೆ 500 ರಿಂದ 600 ವಕೀಲರಿಗೆ ಅನುಮತಿ ನೀಡಬೇಕಿತ್ತು. ಕೋವಿಡ್ ಹರಡಿದ್ದರಿಂದ ನೂರಾರು ಹೊಸ ಪ್ರಕರಣಗಳಲ್ಲಿ ಎಲ್ಲರೂ ಮಗ್ನವಾಗಬೇಕಾಗಿದ್ದರಿಂದ ಅದು ಸಾಧ್ಯವಾಗಲಿಲ್ಲ.
ಕೊಲಿಜಿಯಂಗೆ ನ್ಯಾಯಮೂರ್ತಿಗಳ ಬಗ್ಗೆ ಮಾಹಿತಿ ನೀಡಲು ಕಾರ್ಯಾಂಗ ಉತ್ತಮವಾದುದಾದರೂ ನ್ಯಾಯಮೂರ್ತಿಗಳ ನೇಮಕಾತಿ ಅಧಿಕಾರ ಕೊಲಿಜಿಯಂಗೆ ಇರಬೇಕೆ ವಿನಾ ಕಾರ್ಯಾಂಗಕ್ಕಲ್ಲ.
(ಅತ್ಯಾಚಾರ ಆರೋಪಿ ಸಂತ್ರಸ್ತೆಯನ್ನು ಮದುವೆಯಾಗುವಂತೆ ನ್ಯಾಯಾಲಯದಲ್ಲಿ ಸೂಚಿಸಿದ ವಿವಾದದ ಬಗ್ಗೆ ಚರ್ಚಿಸುತ್ತಾ) ಸಂದರ್ಭ ವಿವರಿಸದೆ ಅದನ್ನು ವರದಿ ಮಾಡಲಾಗಿದೆ.
(ಹಾರ್ಲೆ ಡೇವಿಡ್‌ಸನ್ ಮೋಟರ್‌ಸೈಕಲ್‌ನಲ್ಲಿ ತಾವು ಕುಳಿತಿದ್ದ ಫೋಟೊ ವೈರಲ್ ಆದ ಬಗ್ಗೆ ಪ್ರತಿಕ್ರಿಯಿಸುತ್ತಾ) ನನ್ನದೇ ಆದ ಹಾರ್ಲೆ ಡೆವಿಡ್‌ಸನ್ ಬೈಕ್ ಇದೆ ಎಂದರು (ಚಿತ್ರದಲ್ಲಿರುವ ಹಾರ್ಲೆ ಡೇವಿಡ್‌ಸನ್ ಬೈಕ್ ಬೇರೆಯವರದ್ದು). ನಾನು ಅದರ (ಬೈಕ್) ಮೇಲೆ ಕುಳಿತಿದ್ದೆ. ಯಾರೋ ಚಿತ್ರ ತೆಗೆದು ಅದನ್ನು ತಮ್ಮ ವಕೀಲ ಪತಿಗೆ ಕಳುಹಿಸಿದ್ದರು ಅದು ವೈರಲ್ ಆಯಿತು. ಆದರೆ ನಾನಂತೂ ಯುವಜನರ ನಡುವೆ ಜನಪ್ರಿಯನಾದೆ ಎಂದರು.