Delhi High Court 
ಸುದ್ದಿಗಳು

ಆರು ತಿಂಗಳಿಂದ ಮುಖ್ಯಸ್ಥರಿಲ್ಲದ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ: ಕೇಂದ್ರಕ್ಕೆ ಸುಪ್ರೀಂ ನೋಟಿಸ್

ಕಳೆದ ಆರು ತಿಂಗಳಿನಿಂದ ಆಯೋಗಕ್ಕೆ ಮುಖ್ಯಸ್ಥರಿಲ್ಲದಂತಾಗಿದೆ ಎಂದು ಕಾರ್ಯಕರ್ತರೊಬ್ಬರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Bar & Bench

ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ (ಎನ್‌ಸಿಎಂ) ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಹುದ್ದೆಗಳು ಅನೇಕ ತಿಂಗಳುಗಳಿಂದ ಖಾಲಿ ಉಳಿದಿವೆ [ಮುಜಾಹಿದ್ ನಫೀಸ್ ವಿರುದ್ಧ ಭಾರತ ಒಕ್ಕೂಟ] ಎಂದು ದೂರಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಿದೆ.

ಇದು ಅತ್ಯಂತ ಮಹತ್ವದ ಪ್ರಕರಣವಾಗಿದ್ದು ಆಯೋಗ ಮುಖ್ಯಸ್ಥರಿಲ್ಲದೆ ಇರಬಾರದು ಎಂದು ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.

ಮುಖ್ಯಸ್ಥರಿಲ್ಲದೆ ಆಯೋಗ ಇರುವಂತಿಲ್ಲ. ಮುಂದಿನ ವಿಚಾರಣೆಯವರೆಗೆ ಕಾಯದಿರಿ. ಈ ನಿಟ್ಟಿನಲ್ಲಿ ಬೆಳವಣಿಗೆಗಳು ನಡೆಯುತ್ತಿರಲಿ. ಇದು ಬಹಳ ಮುಖ್ಯವಾದುದು ಎಂದು ಪೀಠ ನುಡಿಯಿತು.

ಅಂತೆಯೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಚನೆಗಳನ್ನು ಪಡೆಯಲು ನ್ಯಾಯಾಲಯ ಕೇಂದ್ರ ಸರ್ಕಾರದ ಪರ ವಕೀಲರಿಗೆ ಅನುಮತಿಸಿತು.

ಮುಖ್ಯಸ್ಥರಿಲ್ಲದೆ ಆಯೋಗ ಇರುವಂತಿಲ್ಲ. ಮುಂದಿನ ವಿಚಾರಣೆಯವರೆಗೆ ಕಾಯದಿರಿ. ಈ ನಿಟ್ಟಿನಲ್ಲಿ ಬೆಳವಣಿಗೆಗಳು ನಡೆಯುತ್ತಿರಲಿ. ಇದು ಬಹಳ ಮುಖ್ಯವಾದುದು.
ದೆಹಲಿ ಹೈಕೋರ್ಟ್

ಮುಜಾಹಿದ್ ನಫೀಸ್ ಎಂಬ ಸಾಮಾಜಿಕ ಕಾರ್ಯಕರ್ತ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಐದು ಸದಸ್ಯರ ಹುದ್ದೆಗಳು ಕಳೆದ ಏಪ್ರಿಲ್ 12ರಿಂದ ಖಾಲಿ ಉಳಿದಿವೆ. ನಿಕಟಪೂರ್ವ ಅಧ್ಯಕ್ಷ ಎಸ್. ಇಕ್ಬಾಲ್ ಸಿಂಗ್ ಲಾಲ್‌ಪುರ ಅವರ ಅವಧಿ ಮುಗಿದ ಬಳಿಕ ಯಾವುದೇ ಹೊಸ ನೇಮಕಾತಿ ನಡೆದಿಲ್ಲ. ಹೀಗಾಗಿ ಆಯೋಗ ಸಂಪೂರ್ಣ ನಿಷ್ಕ್ರಿಯವಾಗಿದ್ದು 1992ರ ಅಲ್ಪಸಂಖ್ಯಾತರ ಆಯೋಗ ಕಾಯಿದೆಯ ಉದ್ದೇಶವೇ ನಿರರ್ಥಕವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು ರಾಜ್ಯಸಭೆಯಲ್ಲಿ ಈ ಗಂಭೀರ ಸ್ಥಿತಿಯನ್ನು ಒಪ್ಪಿಕೊಂಡಿದ್ದಾರೆ. ನ್ಯಾಯಾಲಯದ ಹಿಂದಿನ ಆದೇಶಕ್ಕೆ ವಿರುದ್ಧವಾಗಿ ಸರ್ಕಾರ ನಿಷ್ಕ್ರಿಯವಾಗಿರುವುದು ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲು ಕಾರಣ. ಹಿಂದಿನ ಆದೇಶದಲ್ಲಿ ನ್ಯಾಯಾಲಯ ಇಂತಹ ವಿಳಂಬದ ಕುರಿತು ಅಸಮಾಧಾನ ವ್ಯಕ್ತಪಡಿಸಿತ್ತು. ಖಾಲಿ ಹುದ್ದೆಗಳನ್ನು ನಿಗದಿತ ಗಡುವಿನೊಳಗೆ ಭರ್ತಿ ಮಾಡಲು ಸೂಚಿಸಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ವಕೀಲೆ ದೀಕ್ಷಾ ದ್ವಿವೇದಿ ಅವರ ಮೂಲಕ ಪಿಐಎಲ್ ಸಲ್ಲಿಸಲಾಗಿದೆ.