ಅಲ್ಪಸಂಖ್ಯಾತ ಶಾಲೆಗಳಿಗೆ ಆರ್‌ಟಿಇ ಕಾಯಿದೆ ವಿನಾಯಿತಿ ಸಮಾನತೆಗೆ ವಿರುದ್ಧ ಎಂದ ಸುಪ್ರೀಂ: ವಿಸ್ತೃತ ಪೀಠಕ್ಕೆ ಪ್ರಕರಣ

“ಈ ಬಗೆಯ ಸಂಪೂರ್ಣ ವಿನಾಯಿತಿಯ ಅಪಾಯವೆಂದರೆ, ಅದು ಸಂವಿಧಾನದ 30(1)ನೇ ವಿಧಿಯನ್ನು ಅಗತ್ಯ ಮತ್ತು ಮಕ್ಕಳ ಕೇಂದ್ರಿತ ನಿಯಂತ್ರಣಾತ್ಮಕ ಮಾನದಂಡಗಳಿಂದ ತಪ್ಪಿಸಿಕೊಳ್ಳುವ ಸಾಧನವಾಗಿ ಕುಗ್ಗಿಸುವ ಸಾಧ್ಯತೆ ಇದೆ”ಎಂದು ಪೀಠ ಹೇಳಿದೆ.
Supreme Court
Supreme Court
Published on

ಅಲ್ಪಸಂಖ್ಯಾತ ಶಾಲೆಗಳಿಗೆ ಶಿಕ್ಷಣ ಹಕ್ಕು ಕಾಯಿದೆಯಿಂದ ( ಆರ್‌ಟಿಇ) ವಿನಾಯಿತಿ ನೀಡಿರುವುದರಿಂದ ಕಾನೂನಿನಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಅಲ್ಪಸಂಖ್ಯಾತ ಸ್ಥಾನಮಾನ ಬಯಸುವ ಸಂಸ್ಥೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಆತಂಕ ವ್ಯಕ್ತಪಡಿಸಿದೆ [ಅಂಜುಮನ್ ಇಶಾತ್-ಎ-ತಲೀಮ್ ಟ್ರಸ್ಟ್ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ] .

ಪ್ರಮತಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಅಲ್ಪಸಂಖ್ಯಾತ ಶಾಲೆಗಳಿಗೆ ಆರ್‌ಟಿಇ ಕಾಯಿದೆ ಅನ್ವಯಿಸುವುದಿಲ್ಲ ಎಂದು ಸಾಂವಿಧಾನಿಕ ಪೀಠ ನೀಡಿದ್ದತೀರ್ಪನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಮನಮೋಹನ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

Also Read
ಆರ್‌ಟಿಇ ಕಾಯಿದೆ: ಪ್ರತಿಕ್ರಿಯೆ ಸಲ್ಲಿಸದ ತೆಲಂಗಾಣ, ಪಂಜಾಬ್, ಕಾಶ್ಮೀರ ಸರ್ಕಾರಗಳಿಗೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್

“ಈ ಬಗೆಯ ಸಂಪೂರ್ಣ ವಿನಾಯಿತಿಯ ಅಪಾಯವೆಂದರೆ, ಅದು ಸಂವಿಧಾನದ 30(1)ನೇ ವಿಧಿಯನ್ನು ಅಗತ್ಯವೂ ಮತ್ತು ಮಕ್ಕಳ ಕೇಂದ್ರಿತವೂ ಆದ ನಿಯಂತ್ರಣಾತ್ಮಕ ಮಾನದಂಡಗಳಿಂದ ತಪ್ಪಿಸಿಕೊಳ್ಳುವ ಸಾಧನವಾಗಿ ಕುಗ್ಗಿಸುವ ಸಾಧ್ಯತೆ ಇದೆ”ಎಂದು ಪೀಠ ನುಡಿದಿದೆ.

ಪ್ರಮತಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ತೀರ್ಪು ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣದ ಅಡಿಪಾಯವನ್ನು ಅರಿವಿಲ್ಲದೆಯೇ ಅಪಾಯಕ್ಕೆ ಸಿಲುಕಿಸಿರಬಹುದು ಮತ್ತು ಸಮಾಜದ ಒಡಕುಗಳನ್ನು ಹೆಚ್ಚಿಸಲು ಕಾರಣವಾಗಿರಬಹುದು ಎಂದು ಅದು ವಿವರಿಸಿದೆ.

ಅಲ್ಪಸಂಖ್ಯಾತ ಶಾಲೆಗಳು ಸೇರಿದಂತೆ ಆರ್‌ಟಿಇ ಕಾಯಿದೆಯಡಿ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಕಡ್ಡಾಯವೇ ಎಂಬ ಪ್ರಶ್ನೆಯನ್ನು ನ್ಯಾಯಾಲಯವು ಪರಿಗಣಿಸಿತ್ತು. ಸಾಂವಿಧಾನಿಕ ಪೀಠದ ತೀರ್ಪಿನ ಬಗ್ಗೆ ಇರುವ ಸಂದೇಹಗಳನ್ನು ಪರಿಗಣಿಸಿ, ವಿಸ್ತೃತ ಪೀಠಕ್ಕೆ ಪ್ರಕರಣವನ್ನು ಅದು ವರ್ಗಾಯಿಸಿದೆ. ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಸೇರಿರದ ಶಾಲೆಗಳಲ್ಲಿ ಶಿಕ್ಷಕರು ಸೇವೆಯಲ್ಲಿ ಮುಂದುವರಿಯಲು ಟಿಇಟಿ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದು ಕಡ್ಡಾಯ ಎಂದು ಈ ಹಿಂದೆ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು.

ಅಲ್ಪಸಂಖ್ಯಾತ ಶಾಲೆಗಳಿಗೆ ಸಂಬಂಧಿಸಿದಂತೆ, ಪ್ರಮತಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ ಪ್ರಕರಣದಲ್ಲಿ ನೀಡಲಾದ ತೀರ್ಪಿನಿಂದಾಗಿ ಉತ್ತಮ ಗುಣಮಟ್ಟದ ಸರ್ವರಿಗೂ ಪ್ರಾಥಮಿಕ ಶಿಕ್ಷಣ ನೀಡುವ ಗುರಿಯ ಮೇಲೆ ದೂರಗಾಮಿ ಪರಿಣಾಮ ಉಂಟಾಗಲಿದೆ ಎಂದು ನ್ಯಾಯಾಲಯ ಹೇಳಿದೆ.

ಅಲ್ಪಸಂಖ್ಯಾತರಿಗೆ ತಮ್ಮ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕನ್ನು ಖಾತರಿಪಡಿಸುವ ಸಂವಿಧಾನದ 30(1) ನೇ ವಿಧಿಯ ಉದ್ದೇಶವು ಶಿಕ್ಷಣದ ಮೂಲಕ ಅಲ್ಪಸಂಖ್ಯಾತ ಸಮುದಾಯಗಳ ಭಾಷಾ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಕಾಪಾಡುವುದೇ ವಿನಾ ಸಾರ್ವತ್ರಿಕವಾಗಿ ಅನ್ವಯವಾಗುವ ಮಾನದಂಡಗಳಿಂದ ಪ್ರತ್ಯೇಕಿಸಲ್ಪಟ್ಟ ಸಮಾನಾಂತರ ವ್ಯವಸ್ಥೆಗಳನ್ನು ರಚಿಸುವುದು ಅಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅಲ್ಪಸಂಖ್ಯಾತ ಸಂಸ್ಥೆಗಳ ಸ್ವಾಯತ್ತತೆಯನ್ನು ರಕ್ಷಿಸಬೇಕಾದರೂ, ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಳ್ಳುವ ಮತ್ತು ಸಾಂವಿಧಾನಿಕ ಗುರಿ ಸಾಧಿಸುವ ಹಿತದೃಷ್ಟಿಯಿಂದ ಆ ಸ್ವಾಯತ್ತತೆ ಸಮಂಜಸವಾದ ನಿಯಂತ್ರಣದ ವ್ಯಾಪ್ತಿಯನ್ನು ಮೀರುವಂತಿರಬಾರದು ಎಂದು ನ್ಯಾಯಾಲಯ ಹೇಳಿದೆ.

ದುರ್ಬಲ ವರ್ಗಗಳು ಮತ್ತು ಸವಲತ್ತು ವಂಚಿತ ಗುಂಪುಗಳ ಮಕ್ಕಳಿಗೆ ಪ್ರವೆಶಾತಿಯಲ್ಲಿ ಶೇ. 25 ರಷ್ಟು ಸ್ಥಾನಗಳನ್ನು ಕಾಯ್ದಿರಿಸುವ ಬಗ್ಗೆಯಷ್ಟೇ ಆರ್‌ಟಿಇ ಕಾಯಿದೆಯ ಸೆಕ್ಷನ್‌ಗಳನ್ನು ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠ ಅವಲಂಬಿಸಿತ್ತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Also Read
ಅಲ್ಪಸಂಖ್ಯಾತ ಸಂಸ್ಥೆಗಳು ಆರ್‌ಟಿಇ ಕೋಟಾದಡಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವಂತಿಲ್ಲ: ಬಾಂಬೆ ಹೈಕೋರ್ಟ್

 ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಕನಿಷ್ಠ ದಾಖಲಾತಿ ಕುರಿತು ಸ್ಪಷ್ಟ ಮಾರ್ಗಸೂಚಿ ಇಲ್ಲದೆ ಇರುವದರಿಂದ ಸಂಸ್ಥೆಗಳು ಅಲ್ಪಸಂಖ್ಯಾತ ಸ್ಥಾನಮಾನದ ಆಶಯ ಪೂರೈಸದೆ ಅಲ್ಪಸಂಖ್ಯಾತ ಸ್ಥಾನಮಾನ  ಪಡೆಯುವುದು ಸುಲಭವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಸವಲತ್ತು ವಂಚಿತ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವ ಯಾವುದೇ ಬಾಧ್ಯತೆ ಇಲ್ಲದೆ, ಈ ಸಂಸ್ಥೆಗಳಲ್ಲಿ ಬಹುತೇಕವು ಸಮಾನತೆ ಮತ್ತು ಒಳಗೊಳ್ಳುವಿಕೆಯ ವಿಶಾಲ ಸಾಂವಿಧಾನಿಕ ಗುರಿಗಳಿಂದ ದೂರ ಉಳಿದಿವೆ. ಆರ್‌ಟಿಇ ಕಾಯಿದೆಯು ಮಕ್ಕಳಿಗೆ ಹಲವಾರು ಹಕ್ಕುಗಳನ್ನು ಒದಗಿಸುತ್ತದೆಯಾದರೂ ಅಲ್ಪಸಂಖ್ಯಾತ ಶಾಲೆಗಳು ಈ ಸೌಲಭ್ಯಗಳನ್ನು ಒದಗಿಸಲು ಬದ್ಧವಾಗಿಲ್ಲ ಎಂದು ಪೀಠ ತಿಳಿಸಿತು.

ಅಂತೆಯೇ ವಿಸ್ತೃತ ಪೀಠ ವಿಚಾರಣೆ ನಡೆಸಬೇಕಾದ ವಿವಿಧ ಪ್ರಶ್ನೆಗಳನ್ನು ಅದು ರೂಪಿಸಿದೆ. ಅದರ ಸಂಕ್ಷಿಪ್ತ ವಿವರ ಹೀಗಿದೆ:

  • ಸುಪ್ರೀಂ ಕೋರ್ಟ್‌ 2014ರ ಪ್ರಮತಿ ಪ್ರಕರಣದಲ್ಲಿ ನೀಡಿದ ತೀರ್ಪಿನಲ್ಲಿ ಅಲ್ಪಸಂಖ್ಯಾತ ಶಾಲೆಗಳಿಗೆ ಆರ್‌ಟಿಇ ಕಾಯಿದೆಯಿಂದ ಸಂಪೂರ್ಣ ವಿನಾಯಿತಿ ನೀಡಿರುವ ನಿರ್ಧಾರನ್ನು ಮರುಪರಿಶೀಲನೆ ಮಾಡಬೇಕೇ?

  • ಆರ್‌ಟಿಇ ಕಾಯಿದೆಯ ಸೆಕ್ಷನ್ 12(1)(ಸಿ) (25% ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಪ್ರವೇಶ) ಅಲ್ಪಸಂಖ್ಯಾತರ ವಿಧಿ 30(1) ಹಕ್ಕುಗಳನ್ನು ಉಲ್ಲಂಘಿಸುತ್ತದೆಯೇ? ಹೌದಾದರೆ, ಅದನ್ನು ಕೇವಲ ಅದೇ ಸಮುದಾಯದ ಹಿಂದುಳಿದ ಮಕ್ಕಳಿಗೆ ಸೀಮಿತಗೊಳಿಸಬಹುದೇ?

  • ಸುಪ್ರೀಂ ಕೋರ್ಟ್‌ 2014ರಲ್ಲಿ ನೀಡಿದ ತೀರ್ಪಿನಲ್ಲಿ  ಸಂವಿಧಾನದ 29(2) ವಿಧಿ (ಧರ್ಮ, ಭಾಷೆ ಆಧಾರದ ಮೇಲೆ ಪ್ರವೇಶ ನಿರಾಕರಣೆ ನಿಷೇಧ) ಪರಿಗಣಿತವಾಗಿಲ್ಲ. ಇದರ ಪರಿಣಾಮವೇನು?

  • ಆರ್‌ಟಿಇ ಕಾಯಿದೆಯ ಎಲ್ಲಾ ಅಂಶಗಳನ್ನು ಪ್ರತ್ಯೇಕವಾಗಿ ಪರಿಶೀಲಿಸದೆಯೇ, ಸಂಪೂರ್ಣವಾಗಿ ಅಲ್ಪಸಂಖ್ಯಾತ ಶಾಲೆಗಳಿಗೆ ಕಾಯಿದೆ ಅನ್ವಯಿಸುವುದಿಲ್ಲ ಎಂದು ಘೋಷಿಸುವುದು ಸರಿಯೇ?

Kannada Bar & Bench
kannada.barandbench.com