ವಿಮಲ್ ಪಾನ್ ಮಸಾಲಾ ಉತ್ಪನ್ನಕ್ಕೆ ಸಂಬಂಧಿಸಿದಂತೆ ದಿಕ್ಕುತಪ್ಪಿಸುವ ಜಾಹೀರಾತು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಹಾಗೂ ಉತ್ಪನ್ನ ತಯಾರಕರಿಗೆ ಜೈಪುರದ ಗ್ರಾಹಕ ವೇದಿಕೆಯೊಂದು ಈಚೆಗೆ ನೋಟಿಸ್ ಜಾರಿ ಮಾಡಿದೆ.
ಉತ್ಪನ್ನದ ಕಣ ಕಣದಲ್ಲಿಯೂ ಕೇಸರಿಯ ಶಕ್ತಿ ಇದೆ ಎಂಬ ಜಾಹೀರಾತಿಗೆ ಸಂಬಂಧಿಸಿದ ಆತಂಕಕ್ಕೆ ಪ್ರತಿಕ್ರಿಯಿಸಲು ಮಾರ್ಚ್ 19 ರಂದು ಖುದ್ದುಅಥವಾ ಪ್ರತಿನಿಧಿಯ ಮೂಲಕ ಹಾಜರಾಗಗುವಂತೆ ಉತ್ಪನ್ನ ತಯಾರಿಕಾ ಕಂಪೆನಿಗೆ ಅಧ್ಯಕ್ಷೆ ಗ್ಯಾರ್ಸಿಲಾಲ್ ಮೀನಾ ಮತ್ತು ಸದಸ್ಯೆ ಹೇಮಲತಾ ಅಗರ್‌ವಾಲ್ ಅವರನ್ನು ಒಳಗೊಂಡ ಆಯೋಗ ಸಮನ್ಸ್ ಜಾರಿ ಮಾಡಿದೆ.
ಕೇಸರಿ ಬೆಳೆಯ ಬೆಲೆ ದುಬಾರಿಯಾಗಿದ್ದರೂ ವಿಮಲ್ ಪಾನ್ ಮಸಾಲಾ ಕಣ ಕಣದಲ್ಲೂ ಕೇಸರಿಯ ಶಕ್ತಿ ಇದೆ ಎಂದು ತಪ್ಪು ಅರ್ಥ ಬರುವಂತೆ ಜಾಹೀರಾತು ಪ್ರಕಟಿಸಿದೆ ಎಂದು ದೂರಿ ವಕೀಲ ಯೋಗೇಂದ್ರ ಸಿಂಗ್ ಬಡಿಯಾಲ್ ಪ್ರಕರಣ ದಾಖಲಿಸಿದ್ದರು.
"ದಾನೇ ದಾನೇ ಮೇ ಹೈ ಕೇಸರ್ ಕಾ ದಮ್" (ಕಣ ಕಣದಲ್ಲೂ ಕೇಸರಿಯ ಶಕ್ತಿ ಇದೆ) ಎಂಬ ಅಡಿಬರಹ ಕಂಪೆನಿಗೆ ಕೋಟ್ಯಂತರ ರೂಪಾಯಿ ಆದಾಯ ಗಳಿಸಲು ಅನುವು ಮಾಡಿಕೊಟ್ಟಿದೆ ಎಂದು ಬಡಿಯಾಲ್ ಆರೋಪಿಸಿದ್ದರು.
ಉತ್ಪನ್ನವು ಆರೋಗ್ಯಕ್ಕೆ ಹಾನಿಕಾರಕ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗುವುದರಿಂದ ಈ ಮಾರಾಟ ತಂತ್ರ ಗ್ರಾಹಕರನ್ನು ದಾರಿ ತಪ್ಪಿಸುತ್ತದೆ ಎಂದು ಅವರು ವಾದಿಸಿದ್ದರು.
"ತಪ್ಪು ಮಾಹಿತಿ" ಹರಡಿದ್ದಕ್ಕಾಗಿ ನಟರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ಬಡಿಯಾಲ್ ಜಾಹೀರಾತುಗಳನ್ನು ತಕ್ಷಣವೇ ನಿಲ್ಲಿಸಲು ನ್ಯಾಯಾಲಯ ನಿರ್ದೇಶನ ನೀಡಬೇಕೆಂದು ಕೋರಿದ್ದರು.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]