
ದಾರಿತಪ್ಪಿಸುವ ವೈದ್ಯಕೀಯ ಜಾಹೀರಾತುಗಳ ವಿರುದ್ಧ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರಗಳ ವಿರುದ್ಧ ಸುಪ್ರೀಂ ಕೋರ್ಟ್ ಸೋಮವಾರ ಆಕ್ಷೇಪ ವ್ಯಕ್ತಪಡಿಸಿದೆ [ಭಾರತೀಯ ವೈದ್ಯಕೀಯ ಸಂಘ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಸಾರ್ವಜನಿಕರನ್ನು ದಾರಿತಪ್ಪಿಸುವಂತಹ ಸುಳ್ಳು ಹಾಗೂ ಪರಿಶೀಲಿಸದ ವೈದ್ಯಕೀಯ ಘೋಷಣೆಗಳನ್ನು ತಡೆಗಟ್ಟಲು ಔಷಧ ಮತ್ತು ಮಾಂತ್ರಿಕ ಪರಿಹಾರ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯಿದೆ - 1954 ಅನ್ನು ಅಕ್ಷರಶಃ ಜಾರಿಗೆ ತರಬೇಕು ಎಂದಿರುವ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಈ ಸಂಬಂಧ ಸಮಗ್ರ ಅನುಪಾಲನಾ ವರದಿ ಸಲ್ಲಿಸುವಂತೆ ಸೂಚಿಸಿದೆ.
ರಾಜ್ಯ ಸರ್ಕಾರಗಳು ದೂರುಗಳನ್ನಷ್ಟೇ ಅವಲಂಬಿಸುವ ಬದಲು ಕಾಯಿದೆ ಜಾರಿಗೆ ಪೂರ್ವಭಾವಿ ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಕಾಯಿದೆಯ ಸೆಕ್ಷನ್ 170ರ ಅಡಿಯಲ್ಲಿ ಯಾವುದೇ ಜಾಹೀರಾತುಗಳನ್ನು ರಾಜ್ಯದಲ್ಲಿ ಪ್ರಕಟಿಸಲಾಗಿಲ್ಲ ಎಂದ ಜಾರ್ಖಂಡ್ ಸರ್ಕಾರವನ್ನು ಅದು ಇದೇ ವೇಳೆ ನಿರ್ದಿಷ್ಟವಾಗಿ ಪ್ರಶ್ನಿಸಿತು.
ಸೆಕ್ಷನ್ 170ರ ಅಡಿಯಲ್ಲಿ ಯಾವುದೇ ಔಷಧ ತಯಾರಕರು ಅನುಮತಿಗಾಗಿ ಅರ್ಜಿ ಸಲ್ಲಿಸಿಲ್ಲ ಎಂದು ಜಾರ್ಖಂಡ್ ಸಮರ್ಥಿಸಿಕೊಂಡಿದ್ದರೂ, ಜಾಹೀರಾತುಗಳನ್ನು ಪ್ರಕಟಿಸಲಾಗುತ್ತಿದೆಯೇ ಎಂಬ ಕುರಿತು ಸ್ಪಷ್ಟನೆ ನೀಡಿಲ್ಲ ಎಂದು ಪೀಠ ನುಡಿಯಿತು. ಅಂತೆಯೇ "ನಿಯಮ 170ರ ಉಪ ಸೆಕ್ಷನ್ 2 ಮತ್ತು 3ರ ಅಡಿಯಲ್ಲಿ ಜಾಹೀರಾತುಗಳನ್ನು ಪ್ರಕಟಿಸಲಾಗುತ್ತಿದೆಯೇ ಎಂಬುದನ್ನು ಗಮನಿಸುವುದು ರಾಜ್ಯ ಸರ್ಕಾರದ ಕರ್ತವ್ಯ" ಎಂದು ಅದು ಹೇಳಿತು.
ಕಾಯಿದೆ ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ಪೂರ್ವಭಾವಿ ಕ್ರಮ ಕೈಗೊಳ್ಳದ ಕರ್ನಾಟಕ ಸರ್ಕಾರದ ವಿರುದ್ಧ ಕೂಡ ನ್ಯಾಯಾಲಯ ಅಸಮಾಧಾನ ಹೊರಹಾಕಿತು. ರಾಜ್ಯ ಸರ್ಕಾರದ ಬಳಿ ತನ್ನದೇ ಆದ ಪೊಲೀಸ್ ವ್ಯವಸ್ಥೆ ಮತ್ತು ಸೈಬರ್ ವಿಭಾಗ ಇದ್ದು ಅಂತಹ ಜಾಹಿರಾತುಗಳ ಮೂಲ ಪತ್ತೆ ಹಚ್ಚುವುದು ಅದಕ್ಕೆ ತುಂಬಾ ಸುಲಭ ಎಂದಿತು. ನಿಯಮ ಉಲ್ಲಂಘಿಸುವವರ ಹೆಸರು ಮತ್ತು ವಿಳಾಸಗಳನ್ನು ಪತ್ತೆ ಹಚ್ಚಿ ಅಫಿಡವಿಟ್ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲಾಯಿತು.
ಕಾಯಿದೆ ಜಾರಿಗೆ ಸಂಬಂಧಿಸಿದಂತೆ ಕೇರಳ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ತಿಳಿಸಿದ ಅಮಿಕಸ್ ಕ್ಯೂರಿ ಹಿರಿಯ ವಕೀಲ ಶಾದನ್ ಫರಾಸತ್, ಪಂಜಾಬ್, ಮಧ್ಯಪ್ರದೇಶ ಸರ್ಕಾರಗಳು ಈಚೆಗೆ ಅಫಿಡವಿಟ್ ಸಲ್ಲಿಸಿದ್ದು ಅವುಗಳನ್ನು ಪರಿಶೀಲಿಸಬೇಕಿದೆ. ನೋಟಿಸ್ ಬಳಿಕ ಪುದುಚೇರಿ ಸರ್ಕಾರ ಕೂಡ ಅಫಿಡವಿಟಸ್ ಸಲ್ಲಿಸಿದೆ. ಆಂಧ್ರಪ್ರದೇಶ ಅಫಿಡವಿಟ್ ಸಲ್ಲಿಸಿಲ್ಲ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು.
ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಲ್ಲಿಸಿದ ಅನುಪಾಲನಾ ಅಫಿಡವಿಟನ್ನು ತಾನು ಪರಿಶೀಲಿಸಲಿಸುವುದಾಗಿ ನ್ಯಾಯಾಲಯ ತಿಳಿಸಿದೆ. ದಿಕ್ಕು ತಪ್ಪಿಸುವ ಜಾಹೀರಾತು ತಡೆಗೆ ಪರಿಣಾಮಕಾರಿ ನಿರ್ಣಯ ಮತ್ತು ಕಾಯಿದೆಯ ಕಟ್ಟುನಿಟ್ಟಿನ ಜಾರಿಗೆ ಹೆಚ್ಚಿನ ಕ್ರಮ ಕೈಗೊಳ್ಳುವ ಕುರಿತು ಮುಂದಿನ ವಿಚಾರಣೆ ವೇಳೆ ಪರಿಗಣಿಸುವುದಾಗಿ ಅದು ಹೇಳಿದೆ. ಈ ಸಂಬಂಧ ಕಾಯಿದೆ ಜಾರಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರವಾದ ಟಿಪ್ಪಣಿ ಸಲ್ಲಿಸುವಂತೆ ಅದು ಅಮಿಕಸ್ ಕ್ಯೂರಿ ಅವರಿಗೆ ನಿರ್ದೇಶಿಸಿದೆ.