Allahabad High Court 
ಸುದ್ದಿಗಳು

ದಾಖಲೆಗಳು ನಾಪತ್ತೆ: 42 ವರ್ಷಗಳ ಹಿಂದಿನ ಪ್ರಕರಣದಲ್ಲಿ ದೋಷಿಯಾಗಿದ್ದವನನ್ನು ಖುಲಾಸೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ಅಪರಾಧಿ ರಾಮ್ ಸಿಂಗ್, ಐಪಿಸಿ ಸೆಕ್ಷನ್ 201ರ ಅಡಿಯ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಧೀಶರು ವಿಧಿಸಿದ್ದ ಶಿಕ್ಷೆ ಪ್ರಶ್ನಿಸಿ 1982ರಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

Bar & Bench

ವಿಚಾರಣಾ ನ್ಯಾಯಾಲಯದ ದಾಖಲೆಗಳು ಕಾಣೆಯಾದ ಹಿನ್ನೆಲೆಯಲ್ಲಿ 42 ವರ್ಷಗಳ ಹಿಂದಿನ ಪ್ರಕರಣವೊಂದರಲ್ಲಿ ದೋಷಿಯಾಗಿದ್ದ ವ್ಯಕ್ತಿಯನ್ನು ಅಲಾಹಾಬಾದ್‌ ಹೈಕೋರ್ಟ್‌ ಈಚೆಗೆ ಖುಲಾಸೆಗೊಳಿಸಿದೆ [ಶ್ರೀ ರಾಮ್‌ಸಿಂಗ್‌ ಮತ್ತು ಸರ್ಕಾರ ನಡುವಣ ಪ್ರಕರಣ].

ಪ್ರಮುಖ ಮತ್ತು ಮೂಲಭೂತ ದಾಖಲೆಗಳು ಲಭ್ಯವಿಲ್ಲದ ಕಾರಣ ಶಿಕ್ಷೆಯ ಆದೇಶ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು  ನ್ಯಾಯಮೂರ್ತಿ ನಳಿನ್ ಕುಮಾರ್ ಶ್ರೀವಾಸ್ತವ ಹೇಳಿದರು.

ಹೀಗಾಗಿ ಮೇಲ್ಮನವಿಯನ್ನು ಪುರಸ್ಕರಿಸಲಾಗಿದ್ದು 30.09.1982 ರ ತೀರ್ಪಿನ ಮೂಲಕ ಅಪರಾಧಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ರದ್ದುಗೊಳಿಸಲಾಗಿದೆ. ಪ್ರಕರಣದಲ್ಲಿ ಈಗ ಜೀವಂತ ಇರುವ ಏಕೈಕ ಮೇಲ್ಮನವಿದಾರ ಐಪಿಸಿ ಸೆಕ್ಷನ್ 201ರಡಿ ಆರೋಪಿಯಾಗಿರುವ ಶ್ರೀ ರಾಮ್‌ ಸಿಂಗ್‌ನನ್ನು ಆರೋಪ ಮುಕ್ತಗೊಳಿಸಲಾಗಿದೆ. ಅವರ ಶ್ಯೂರಿಟಿ ಮತ್ತು ವೈಯಕ್ತಿಕ ಬಾಂಡ್‌ಗಳನ್ನು ವಿಸರ್ಜಿಸುವಂತೆ ಸೂಚಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಐಪಿಸಿ ಸೆಕ್ಷನ್‌ 201ರಡಿ (ಸಾಕ್ಷ್ಯ ನಾಪತ್ತೆ ಅಥವಾ ಅಪರಾಧಿಯನ್ನು ರಕ್ಷಿಸಲು ತಪ್ಪು ಮಾಹಿತಿ ನೀಡುವುದು) ಆರೋಪದಡಿ ಅಪರಾಧಿಯಾಗಿದ್ದ ರಾಮ್‌ಸಿಂಗ್‌ಗೆ 4 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ 42 ವರ್ಷಗಳಿಂದ ಬಾಕಿ ಉಳಿದಿದ್ದ  ಮೇಲನವಿ ವಿಚಾರಣೆಗೆ ಬರುವ ಹೊತ್ತಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯ ತೀರ್ಪು ಹೊರತುಪಡಿಸಿ ಪ್ರಕರಣದ ಇನ್ನೆಲ್ಲಾ ದಾಖಲೆಗಳು ನಾಶವಾಗಿದ್ದವು.

 ವಿಚಾರಣಾ ನ್ಯಾಯಾಲಯದ ದಾಖಲೆಯನ್ನು ಮರುಪಡೆಯುವುದು ಸಾಧ್ಯವೇ ಎಂಬ ಕುರಿತು ವರದಿ ಸಲ್ಲಿಸುವಂತೆ ಈ ಹಿಂದಿನ ವಿಚಾರಣೆ ಹೈಕೋರ್ಟ್‌ ಸೂಚಿಸಿತ್ತು. ಆದರೆ ಅದು ಸಾಧ್ಯವಿಲ್ಲ ಎಂದು ಜಿಲ್ಲಾ ನ್ಯಾಯಾಧೀಶರು ಹೈಕೋರ್ಟ್‌ಗೆ ತಿಳಿಸಿದ್ದರು.

ಇಂಥದ್ದೇ ಪ್ರಕರಣದಲ್ಲಿ 2010ರಲ್ಲಿ ಹೈಕೋರ್ಟ್ ಅಪರಾಧಿಯೊಬ್ಬನನ್ನು ಖುಲಾಸೆಗೊಳಿಸಿದ್ದು ಹಾಗೂ ಇತರ ತೀರ್ಪುಗಳನ್ನು ಗಮನಿಸಿದ ನ್ಯಾಯಾಲಯ ದಾಖಲೆಗಳ ಬಹುತೇಕ ಲಭ್ಯ ಇಲ್ಲದಿದ್ದರೆ ಅವುಗಳನ್ನು ಮರುಪಡೆಯಲುಯ ಯತ್ನಿಸಬೇಕು. ಒಂದು ವೇಳೆ ಅದೂ ಸಾಧ್ಯವಾಗದಿದ್ದರೆ ಆಗ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಜಾರಿಗೊಳಿಸಲು ಅನುಮತಿಸಬಾರದು ಎಂದಿತು.

 ಅದರಂತೆ ಮೇಲ್ಮನವಿಯನ್ನು ಪುರಸ್ರಿಸಿದ ಅದು ಸೆಪ್ಟೆಂಬರ್ 30, 1982 ರಂದು ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ರದ್ದುಗೊಳಿಸಿತು. ಆರೋಪಿ ಪರ ವಕೀಲ ಆರ್.ಕೆ.ಕನೌಜಿಯ ವಾದ ಮಂಡಿಸಿದ್ದರು.