Telangana High Court 
ಸುದ್ದಿಗಳು

ತೆಲಂಗಾಣ ಶಾಸಕರ ಖರೀದಿ ಪ್ರಕರಣ: ಎಸ್ಐಟಿ ನ್ಯಾಯಯುತ ತನಿಖೆ ನಡೆಸದು ಎಂದು ರಾಜ್ಯ ಹೈಕೋರ್ಟ್ ಹೇಳಿದ್ದೇಕೆ?

ಆರೋಪಪಟ್ಟಿ ಸಲ್ಲಿಸುವ ಮೊದಲೇ ಮುಖ್ಯಮಂತ್ರಿ ಸ್ವತಃ ಸಾಂವಿಧಾನಿಕ ಹುದ್ದೆಯಲ್ಲಿದ್ದವರಿಗೆ ವಿಡಿಯೊ ಹಂಚಿ ಆರೋಪಿಗಳು ಮತ್ತು ಸಂಘಟಿತ ಅಪರಾಧ ಎಸಗಿದ ಸದಸ್ಯರನ್ನು ಸಂಚುಕೋರರು ಎಂದು ಹಣೆಪಟ್ಟಿ ಹಚ್ಚಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.

Bar & Bench

ತೆಲಂಗಾಣ ಶಾಸಕರ ಖರೀದಿ ಪ್ರಕರಣದ ಆರೋಪಿಗಳನ್ನು ರಾಜ್ಯದ ಮುಖ್ಯಮಂತ್ರಿ ಕೆ ಚಂದ್ರೇಶೇಖರ್‌ ರಾವ್‌ ಅವರೇ ಸ್ವತಃ ಸಾರ್ವಜನಿಕವಾಗಿ ಖಂಡಿಸಿದ್ದು ಇಂತಹ ಘಟನೆಗಳು ವಿಶೇಷ ತನಿಖಾ ತಂಡ ನಡೆಸುವ ತನಿಖೆಯ ನ್ಯಾಯಸಮ್ಮತತೆಯನ್ನು ಪ್ರಶ್ನಿಸುತ್ತವೆ ಎಂದು ತೆಲಂಗಾಣ ಹೈಕೋರ್ಟ್‌ ಹೇಳಿದೆ.

ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್ ಅಥವಾ ಹಿಂದಿನ ತೆಲಂಗಾಣ ರಾಷ್ಟ್ರ ಸಮಿತಿ) ಶಾಸಕರ ಖರೀದಿ ಪ್ರಕರಣವನ್ನು ಎಸ್‌ಐಟಿಯಿಂದ ಸಿಬಿಐಗೆ ವರ್ಗಾಯಿಸುವ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಕರ್ನಾಟಕ ಮೂಲದ ಬಿ ಎಲ್‌ ಸಂತೋಷ್‌ ಅವರ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 26 ರಂದು ನೀಡಿದ ಆದೇಶದಲ್ಲಿ, ನ್ಯಾಯಮೂರ್ತಿ ಬಿ ವಿಜಯಸೇನ್‌ ರೆಡ್ಡಿ ಅವರಿದ್ದ ಏಕಸದಸ್ಯ ಪೀಠ ಮಾಡಿರುವ ಕೆಲ ಅವಲೋಕನಗಳು ಹೀಗಿವೆ:

  • ತನಿಖೆ ಆರಂಭಿಕ ಹಂತದಲ್ಲಿರುವಾಗಲೇ ಪ್ರಕರಣದ ಆರೋಪಪಟ್ಟಿ ಸಲ್ಲಿಸುವ ಮೊದಲೇ ಮುಖ್ಯಮಂತ್ರಿಯವರೇ ಸ್ವತಃ ಸಾಂವಿಧಾನಿಕ ಹುದ್ದೆಯಲ್ಲಿದ್ದ ಪ್ರಮುಖರಿಗೆ ವಿಡಿಯೊ ಹಂಚಿ ಆರೋಪಿತ ಸಂಘಟಿತ ಅಪರಾಧ ಎಸಗಿದ ಸದಸ್ಯರನ್ನು ಸಂಚುಕೋರರು ಎಂದು ಹಣೆಪಟ್ಟಿ ಹಚ್ಚಿದ್ದಾರೆ.

  • ಸಂಪೂರ್ಣ ಪ್ರಕರಣ ಮತ್ತು ಘಟನೆಗಳ ತಿರುವುಗಳು ಹಿಂದೆಂದೂ ನಡೆದಿಲ್ಲದೆ ಇರುವಂತಹವು, ಗ್ರಹಿಕೆಗೆ ನಿಲುಕದಂತಹವಾಗಿವೆ. ಈ ಹಿನ್ನೆಲೆಯಲ್ಲಿ ಆರೋಪಿಗಳು ಪ್ರಕರಣದ ತನಿಖೆ ವರ್ಗಾಯಿಸಬೇಕು ಎನ್ನುವ ಕೋರಿಕೆಯನ್ನು ನಿರೂಪಿಸಲು ಸಫಲರಾಗಿದ್ದಾರೆ ಎಂಬುದನ್ನು ಈ ನ್ಯಾಯಾಲಯವು ಹಿಂಜರಿಕೆಯಿಲ್ಲದೆ ಹೇಳುತ್ತದೆ.

  • ನ್ಯಾಯಸಮ್ಮತ ವಿಚಾರಣೆ ಮಾತ್ರವಲ್ಲದೆ ನಿಷ್ಪಕ್ಷಪಾತ ತನಿಖೆ ಕೂಡ ಸಂವಿಧಾನದ 20 ಮತ್ತು 21ನೇ ವಿಧಿಗಳ ಅಡಿಯಲ್ಲಿ ಒದಗಿಸಲಾದ ಸಾಂವಿಧಾನಿಕ ಹಕ್ಕುಗಳ ಭಾಗ ಎಂದು ಬಾಬುಭಾಯ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ.

  • ಆರೋಪಿಗಳು ಪಕ್ಷಪಾತ, ಕಳಂಕ ಹಾಗೂ ಅನ್ಯಾಯದ ತನಿಖೆ ನಡೆಯುತ್ತಿದೆ ಎಂದು ಸಮಂಜಸ ಭೀತಿ ವ್ಯಕ್ತಪಡಿಸಿದರೆ ಸಾಕು. ಪ್ರಕರಣದ ಬಗೆಗಿನ ನೈಜ ಪಕ್ಷಪಾತವನ್ನು ಸಾಬೀತುಪಡಿಸುವ ಅಗತ್ಯವಿಲ್ಲ.

  • ಸಾರ್ವಜನಿಕವಾಗಿ ಸಂಚುಕೋರರೆಂದು ಗುರುತಿಸಿದರೆ ಆರೋಪಿಗಳ ಬಗ್ಗೆ ಗಂಭೀರ ಪೂರ್ವಾಗ್ರಹ ಉಂಟಾಗುತ್ತದೆ. ಆ ಮೂಲಕ ಅವರು ಕ್ರಿಮಿನಲ್ ಮೊಕದ್ದಮೆಗಳನ್ನು ಪರಿಣಾಮಕಾರಿಯಾಗಿ ಸಮರ್ಥಿಸಿಕೊಳ್ಳುವ ಮತ್ತು ಕಾನೂನಿನಡಿಯಲ್ಲಿ ಪರಿಹಾರ ಪಡೆಯುವ ಹಕ್ಕುಗಳನ್ನು ಕಸಿದುಕೊಂಡಂತಾಗುತ್ತದೆ. 

  • ವಶಪಡಿಸಿಕೊಳ್ಳಲಾಗಿದ್ದ ವೀಡಿಯೊ ಸಿಡಿಗಳು / ಪೆನ್ ಡ್ರೈವ್‌ ಮುಂತಾದ ಸಾಕ್ಷ್ಯಗಳು ಹೇಗೆ ಮುಖ್ಯಮಂತ್ರಿಯವರ ಕೈಸೇರಿದವು ಎಂಬ ಬಗ್ಗೆ ಪ್ರತಿವಾದಿಗಳ ಪರ ವಕೀಲರು ಯಾವುದೇ ಸಮಂಜಸವಾದ ವಿವರಣೆ ನೀಡಿಲ್ಲ.

  • ಅದನ್ನು ಯಾರು ಯಾವಾಗ ಮತ್ತು ಹೇಗೆ ಹಸ್ತಾಂತರಿಸಿದರು ಎಂಬುದು ನಿಗೂಢವಾಗಿಯೇ ಉಳಿದಿದೆ. ಹೀಗಾಗಿ ಆರೋಪಿಗಳ ಬಗ್ಗೆ ಪೂರ್ವಾಗ್ರಹ ಮೂಡುವುದಿಲ್ಲ ಎಂದು ಹೇಳುವುದು ಅಸಮಂಜಸವಾಗುತ್ತದೆ ಮತ್ತು ಅದು ಸ್ವೀಕಾರಾರ್ಹವಲ್ಲ.

ಪೈಲಟ್ ರೋಹಿತ್ ರೆಡ್ಡಿ ಎಂಬುವವರು ಸಲ್ಲಿಸಿದ ವರದಿಯನ್ನು ಪರಿಗಣಿಸಿದ ನಂತರ ನ್ಯಾಯಾಲಯವು ಡಿ ನೊವೊ ತನಿಖೆ (ಹೊಸದಾಗಿ ತನಿಖೆ ನಡೆಸಲು) ಆರಂಭಿಸಲು ನಿರ್ದೇಶಿಸಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತು. ಇದರೊಂದಿಗೆ ಪ್ರಕರಣದ ತನಿಖೆಗಾಗಿ ತೆಲಂಗಾಣ ಸರ್ಕಾರ ರಚಿಸಿದ್ದ ಎಸ್‌ಐಟಿಯನ್ನೂ ಅದು ವಿಸರ್ಜಿಸಿತು.